Karnataka HC and Lokayukta 
ಸುದ್ದಿಗಳು

ಎಪಿಪಿಯಿಂದ ₹2,000 ಲಂಚ ಸ್ವೀಕಾರ ಪ್ರಕರಣ: ಲೋಕಾಯುಕ್ತಕ್ಕೆ ನೋಟಿಸ್‌, ಆಕ್ಷೇಪಣೆ ಸಲ್ಲಿಕೆಗೆ ಹೈಕೋರ್ಟ್‌ ಸೂಚನೆ

ಜಫ್ತಿಯಾಗಿದ್ದ ವಾಹನ ಬಿಡುಗಡೆ ಮಾಡಿಸಿಕೊಳ್ಳಲು ಕಾನೂನು ಪ್ರಕ್ರಿಯೆ ಮುಂದುವರಿಸಲು ಲಂಚ ಸ್ವೀಕರಿಸಿದ ಆರೋಪದ ಗಣಪತಿ ನಾಯ್ಕ ಅವರನ್ನು ಬಂಧಿಸಲಾಗಿತ್ತು.

Bar & Bench

ಅಕ್ರಮ ಮರಳು ಸಾಗಣೆಗೆ ಬಳಕೆ ಮಾಡಿದ್ದ ವಾಹನ ಬಿಡುಗಡೆಗೆ ಸಂಬಂಧಿಸಿದಂತೆ ಕಾನೂನು ಪ್ರಕ್ರಿಯೆ ಮುಂದುವರಿಸಲು ₹2,000 ಲಂಚ ಪಡೆದ ಆರೋಪದ ಸಂಬಂಧ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ಉಡುಪಿಯ ಸಹಾಯಕ ಸರ್ಕಾರಿ ಅಭಿಯೋಜಕ (ಎಪಿಪಿ) ಗಣಪತಿ ನಾಯ್ಕ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಲೋಕಾಯುಕ್ತ ಪೊಲೀಸರಿಗೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ನೋಟಿಸ್‌ ಜಾರಿ ಮಾಡಿದೆ.

ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್‌ 7(ಎ)ರ ಅಡಿ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ತಾಳಮಕ್ಕಿಯ ಗಣಪತಿ ವಸಂತ್‌ ನಾಯ್ಕ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ಏಕಸದಸ್ಯ ಪೀಠ ನಡೆಸಿತು.

ಅರ್ಜಿದಾರರ ಪರ ವಕೀಲರು ಪ್ರಕರಣದ ತನಿಖೆಗೆ ಮಧ್ಯಂತರ ಪರಿಹಾರದ ಭಾಗವಾಗಿ ತಡೆಯಾಜ್ಞೆ ನೀಡಬೇಕು ಎಂದು ಕೋರಿದರು. ಇದಕ್ಕೆ ಒಪ್ಪದ ಪೀಠವು ದೂರುದಾರ ಮತ್ತು ಲೋಕಾಯುಕ್ತರಿಗೆ ನೋಟಿಸ್‌ ಹೋಗಿ ಬರಲಿ ಎಂದು ಹೇಳಿ, ನೋಟಿಸ್‌ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.

ಉಡುಪಿಯ ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಲಯದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರಾಗಿದ್ದ ನಾಯ್ಕ ಅವರು ಪ್ರಧಾನ ಸಿವಿಲ್‌ ನ್ಯಾಯಾಲಯದ ಉಸ್ತುವಾರಿ ಹೆಚ್ಚುವರಿ ಸರ್ಕಾರಿ ಅಭಿಯೋಜಕರಾಗಿದ್ದರು.

ದೂರುದಾರರ ಸ್ನೇಹಿತರ ವಾಹನದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಆರೋಪದ ಮೇಲೆ ಪೊಲೀಸರು ದೂರು ದಾಖಲಿಸಿ, ವಾಹನ ಜಫ್ತಿ ಮಾಡಿದ್ದರು. ಸ್ನೇಹಿತನಿಂದ ಜಿಪಿಎ ಪಡೆದಿದ್ದ ದೂರುದಾರನು ಪ್ರಧಾನ ಸಿವಿಲ್‌ ನ್ಯಾಯಾಧೀಶರ ಮುಂದೆ ಸ್ನೇಹಿತನ ವಾಹನ ಬಿಡುಗಡೆ ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಪ್ರಕ್ರಿಯೆ ಮುಂದುವರಿಸಲು ನಾಯ್ಕ ಅವರು ದೂರುದಾರನಿಂದ ₹2,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಇದಕ್ಕೆ ಒಪ್ಪದ ದೂರುದಾರ ಲೋಕಾಯುಕ್ತರಿಗೆ ದೂರು ನೀಡಿದ್ದರು. ಇದರ ಆಧಾರದಲ್ಲಿ ಲೋಕಾಯುಕ್ತರು ದಾಳಿ ನಡೆಸಿ, ಲಂಚ ಪಡೆಯುವಾಗ ನಾಯ್ಕರನ್ನು ಈಚೆಗೆ ಬಂಧಿಸಿದ್ದರು. ಆನಂತರ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಈಗ ಪ್ರಕರಣ ರದ್ದತಿ ಕೋರಿದ್ದಾರೆ.