Justice K Natarajan and Karnataka HC 
ಸುದ್ದಿಗಳು

ನಕಲಿ ವಿಲ್ ದೃಢೀಕರಿಸಿದ ಆರೋಪ: ನೋಟರಿ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

ನೋಟರಿ ಜಿ ಎನ್ ವೆಂಕಟರಮಣಪ್ಪ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಆರ್ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠ ಪುರಸ್ಕರಿಸಿದೆ.

Bar & Bench

ನಕಲಿ ವಿಲ್ ದೃಢೀಕರಿಸಿದ (ಅಟೆಸ್ಟ್) ಆರೋಪ ಸಂಬಂಧ ನೋಟರಿಯೊಬ್ಬರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ರದ್ದುಪಡಿಸಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ದಾಖಲಾಗಿದ್ದ ಖಾಸಗಿ ದೂರನ್ನು ವಿಚಾರಣೆಗೆ ಪರಿಗಣಿಸಿದ್ದ ಬೆಂಗಳೂರಿನ 44ನೇ ಹೆಚ್ಚುವರಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಕ್ರಮ ರದ್ದುಪಡಿಸುವಂತೆ ಕೋರಿ ನೋಟರಿ ಜಿ ಎನ್ ವೆಂಕಟರಮಣಪ್ಪ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಆರ್ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ಖಾಸಗಿ ವ್ಯಕ್ತಿಗಳು ಖಾಸಗಿ ದೂರು ಸಲ್ಲಿಸಿದ್ದರು. ಅದನ್ನು ಆಧರಿಸಿ ವಿಚಾರಣಾಧೀನ ನ್ಯಾಯಾಲಯವು ದೂರನ್ನು ವಿಚಾರಣೆಗೆ ಅಂಗೀಕರಿಸಿದೆ. ಇದು ನೋಟರೀಸ್ ಕಾಯಿದೆ-1952ರ ಸೆಕ್ಷನ್ 13ಕ್ಕೆ ವಿರುದ್ಧವಾಗಿದೆ. ಕಾನೂನು ಪ್ರಕಾರ ನಕಲಿ ವಿಲ್ ದೃಢೀಕರಿಸಿದ ಆರೋಪದ ಸಂಬಂಧ ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಧಿಕಾರಿಯು ಲಿಖಿತ ರೂಪದಲ್ಲಿ ದೂರು ಸಲ್ಲಿಸಬೇಕಾಗುತ್ತದೆ. ಈ ನಿಯಮ ಪ್ರಕರಣದಲ್ಲಿ ಪಾಲನೆಯಾಗಿಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.

ಅಲ್ಲದೆ, ಎಲ್ಲಾ ಆರೋಪಿಗಳು ಸೇರಿಕೊಂಡು ದುರುದ್ದೇಶದಿಂದ ನಕಲಿ ವಿಲ್ ಸಿದ್ಧಪಡಿಸಿದ್ದಾರೆ ಎಂಬುದಾಗಿ ದೂರುದಾರರು ಅಸ್ಪಷ್ಟ ಆರೋಪ ಮಾಡಿದ್ದಾರೆ ಹೊರತು ಪೂರಕ ಸಾಕ್ಷ್ಯಾಧಾರ ಒದಗಿಸಿಲ್ಲ. ಆದ್ದರಿಂದ, ಅರ್ಜಿದಾರರ ವಿರುದ್ಧದ ಕ್ರಿಮಿನಲ್ ಪ್ರಕರಣ ಹಾಗೂ ವಿಚಾರಣಾಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸಲಾಗುತ್ತಿದೆ ಎಂದು ಪೀಠ ಆದೇಶದಲ್ಲಿ ವಿವರಿಸಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರರು ಇತರೆ ಆರು ಆರೋಪಿಗಳೊಂದಿಗೆ ಜೊತೆಗೂಡಿ ಯಲಹಂಕದ ನಿವಾಸಿ ಎಸ್ ಭಾರತಿ ಎಂಬುವರ ಪತಿಯ ಹೆಸರಿನಲ್ಲಿ 2013ರ ಆಗಸ್ಟ್‌ 8ರಂದು ನಕಲಿ ವಿಲ್ ಸಿದ್ಧಪಡಿಸಿದ್ದರು ಎಂದು ಆರೋಪಿಸಲಾಗಿತ್ತು. ಅದನ್ನು ಅರ್ಜಿದಾರರು ದೃಢೀಕರಿಸಿದ್ದಾರೆ ಎಂಬ ಆರೋಪವಿತ್ತು. ಈ ಕುರಿತು ಭಾರತಿ ಮತ್ತು ವೈ ವಿ ಚರಣ್ ಎಂಬುವರು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು.

ಪ್ರಕರಣ ಕುರಿತು ತನಿಖೆ ನಡೆಸುವಂತೆ ಯಲಹಂಕ ಓಲ್ಡ್ ಟೌನ್ ಠಾಣಾ ಪೊಲೀಸರಿಗೆ ನ್ಯಾಯಾಲಯ ನಿರ್ದೇಶಿಸಿತ್ತು. ಅದರಂತೆ ಪೊಲೀಸರು ತನಿಖೆ ನಡೆಸಿ ʼಬಿʼ ರಿಪೋರ್ಟ್ ಸಲ್ಲಿಸಿದ್ದರು. ಅದನ್ನು ಆಕ್ಷೇಪಿಸಿ ದೂರುದಾರರು ಸಲ್ಲಿಸಿದ್ದ ಪ್ರತಿಭಟನಾ ಅರ್ಜಿಯನ್ನು ಪುರಸ್ಕರಿಸಿದ್ದ 44ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ʼಬಿʼ ರಿಪೋರ್ಟ್ ತಿರಸ್ಕರಿಸಿತ್ತು.

ಅರ್ಜಿದಾರರು ಸೇರಿ ಎಲ್ಲಾ ಆರೋಪಿಗಳ ವಿರುದ್ಧ ವಂಚನೆ, ಅಪ್ರಾಮಾಣಿಕತೆ, ಕಿಡಿಗೇಡಿತನ, ನಕಲಿ ದಾಖಲೆ ಸೃಷ್ಟಿ, ಸುಳ್ಳು ಹೇಳಿಕೆ ದಾಖಲು, ನಕಲಿ ದಾಖಲೆಯನ್ನು ಅಸಲಿಯಾಗಿ ಬಳಕೆ, ಅಪರಾಧಿಕ ಒಳಸಂಚು ಆರೋಪ ಸಂಬಂಧ ಸಂಜ್ಞೇ ತೆಗೆದುಕೊಂಡಿತ್ತು. ಇದರಿಂದ ಪ್ರಕರಣ ರದ್ದು ಕೋರಿ ವೆಂಕಟರಮಣಪ್ಪ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರ ಪರ ವಕೀಲರು, ಪ್ರಕರಣದಲ್ಲಿ ವೆಂಕಟರಮಣಪ್ಪ ಅವರನ್ನು 5ನೇ ಆರೋಪಿಯನ್ನಾಗಿ ಮಾಡಲಾಗಿದೆ. ಅವರು ವಿಲ್ ಅನ್ನು ದೃಢೀಕರಿಸಿದ್ದಾರೆ. ನೋಟರಿಯು ದಾಖಲೆ ಸಲ್ಲಿಸಿದ ವ್ಯಕ್ತಿಗಳ ಉಪಸ್ಥಿತಿಯಲ್ಲಿ ದೃಢೀಕರಣ ಮಾಡಬೇಕಾಗುತ್ತದೆ. ಈ ನಿಯಮವನ್ನು ಅರ್ಜಿದಾರರು ಪಾಲಿಸಿದ್ದಾರೆ. ನೋಟರೀಸ್ ಕಾಯಿದೆ-1952ರ ಸೆಕ್ಷನ್ ಪ್ರಕಾರ ಯಾವುದೇ ದಾಖಲೆಯನ್ನು ನೋಟರಿ ದೃಢೀಕರಿಸಲು ಅವಕಾಶವಿದೆ. ಖಾಸಗಿ ವ್ಯಕ್ತಿಗಳು ಸಲ್ಲಿಸಿದ ದೂರು ಆಧರಿಸಿ ಅರ್ಜಿದಾರರ ವಿರುದ್ಧ ಸಂಜ್ಞೇ ತೆಗೆದುಕೊಳ್ಳಲಾಗಿದೆ. ಆದರೆ, ಕಾನೂನು ಪ್ರಕಾರ ಕೇಂದ್ರ ಅಥವಾ ರಾಜ್ಯ ಸರ್ಕಾರಿ ಅಧಿಕಾರಿ ದೂರು ದಾಖಲಿಸುವುದು ಕಡ್ಡಾಯ. ಆಗ ಮಾತ್ರ ಪ್ರಕರಣವನ್ನು ವಿಚಾರಣೆಗೆ ಅಂಗೀಕರಿಸಬೇಕಾಗುತ್ತದೆ. ವಿಚಾರಣಾಧೀನ ನ್ಯಾಯಾಲಯವು ಈ ನಿಯಮ ಪಾಲಿಸದ ಹಿನ್ನೆಲೆಯಲ್ಲಿ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದ್ದರು.