Karnataka High Court
Karnataka High Court 
ಸುದ್ದಿಗಳು

ಕಂದಾಯ ನಿರೀಕ್ಷಕನಿಂದ ಕರ್ತವ್ಯ ಲೋಪ: ಮೂರು ವಾರಗಳಲ್ಲಿ ಕ್ರಮಕ್ಕೆ ರಾಮನಗರ ಜಿಲ್ಲಾಧಿಕಾರಿಗೆ ಸೂಚಿಸಿದ ಹೈಕೋರ್ಟ್‌

Bar & Bench

ಮದ್ಯ ಸೇವಿಸಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದ ಹಾಗೂ ಗ್ರಾಮಸ್ಥರೊಂದಿಗೆ ಅನುಚಿತ ವರ್ತನೆ ತೋರಿದ್ದ ಆರೋಪ ಸಂಬಂಧ ರಾಮನಗರದ ಉಯ್ಯಂಬಳ್ಳಿ ಹೋಬಳಿ ಕಂದಾಯ ನಿರೀಕ್ಷಕ ಬಿ ಎನ್ ನರೇಶ್ ವಿರುದ್ಧದ ದೂರು ಆಧರಿಸಿ ಕಾನೂನು ಪ್ರಕಾರ ಮೂರು ವಾರಗಳಲ್ಲಿ ಸೂಕ್ತ ಕ್ರಮ ಜರುಗಿಸಬೇಕು ಎಂದು ರಾಮನಗರ ಜಿಲ್ಲಾಧಿಕಾರಿಗೆ ಕರ್ನಾಟಕ ಹೈಕೋರ್ಟ್ ಗುರುವಾರ ನಿರ್ದೇಶಿಸಿದ್ದು, ಅರ್ಜಿ ವಿಲೇವಾರಿ ಮಾಡಿತು.

ಕಂದಾಯ ನಿರೀಕ್ಷಕ ಬಿ ಎನ್ ನರೇಶ್ ವಿರುದ್ಧ ಕರ್ತವ್ಯಲೋಪ ಆರೋಪದ ಹಿನ್ನೆಲೆಯಲ್ಲಿ ಸಿ ವೆಂಕಟೇಶ್ ಸೇರಿದಂತೆ ಕನಕಪುರ ತಾಲ್ಲೂಕಿನ ಕಸಬಾ ಹೋಬಳಿಯ 12 ಮಂದಿ ಗ್ರಾಮಸ್ಥರು ಹಾಗೂ ರೈತರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಆರ್ ಮಹೇಶ್ ಅವರು “ನರೇಶ್ ಅವರು ರಾಮನಗರದ ಕಸಬಾ ಹೋಬಳಿಯಲ್ಲಿ ಕಂದಾಯ ನಿರೀಕ್ಷಕರಾಗಿದ್ದರು. ಪ್ರತಿ ದಿನವೂ ಮದ್ಯ ಸೇವಿಸಿಯೇ ಕಚೇರಿಗೆ ಬರುತ್ತಿದ್ದರು. ಕಚೇರಿಗೆ ಭೇಟಿ ನೀಡುವ ಗ್ರಾಮಸ್ಥರು, ರೈತರೊಂದಿಗೆ ದುರ್ವತನೆ ತೋರುತ್ತಿದ್ದರು. ವ್ಯಾಜ್ಯಗಳಿಂದ ಕೂಡಿದ ಜಮೀನಿಗೆ ಮದ್ಯ ಸೇವಿಸಿಯೇ ಭೇಟಿ ನೀಡುತ್ತಿದ್ದರು. ಇನ್ನೂ ಲಂಚ ವಸೂಲಿಗೆ ಗೂಂಡಾಗಳನ್ನು ನೇಮಿಸಿಕೊಂಡಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿಗೆ ದೂರು ನೀಡಲಾಗಿತ್ತು. ನಂತರ ಉಯ್ಯಂಬಳ್ಳಿ ಹೋಬಳಿ ಕಂದಾಯ ನಿರೀಕ್ಷಕರಾಗಿದ್ದ ಅವರನ್ನು ವರ್ಗಾವಣೆ ಮಾಡಲಾಯಿತೇ ಹೊರತು ಯಾವುದೇ ಶಿಸ್ತು ಕ್ರಮ ಜರುಗಿಸಿಲ್ಲ. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಜಿಲ್ಲಾಧಿಕಾರಿಗೆ ಸೂಚಿಸಬೇಕು” ಎಂದು ಪೀಠವನ್ನು ಕೋರಿದರು.

ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲೆ ಎಚ್‌ ವಾಣಿ ಅವರು “ಅಧಿಕಾರಿಯ ವಿರುದ್ಧದ ಆರೋಪವನ್ನು ಪರಿಶೀಲಿಸಬೇಕಿದೆ” ಎಂದರು.

ವಾದ-ಪ್ರತಿವಾದವನ್ನು ಪರಿಗಣಿಸಿದ ಪೀಠವು “ಈ ಸಂದರ್ಭದಲ್ಲಿ ನಾವು ಮನವಿಯ ಅರ್ಹತೆಯ ವಿಚಾರದ ಬಗ್ಗೆ ಮಾತನಾಡದೇ ಅರ್ಜಿಯನ್ನು ವಿಲೇವಾರಿ ಮಾಡುತ್ತಿದ್ದೇವೆ. ಕಂದಾಯ ನಿರೀಕ್ಷಕ ಬಿ ಎನ್ ನರೇಶ್ ವಿರುದ್ಧ ಅರ್ಜಿದಾರರು ಎರಡು ವಾರದಲ್ಲಿ ರಾಮನಗರ ಜಿಲ್ಲಾಧಿಕಾರಿಗೆ ಹೊಸದಾಗಿ ದೂರು ಸಲ್ಲಿಸಬೇಕು. ಜಿಲ್ಲಾಧಿಕಾರಿ ಆ ದೂರನ್ನು ಪರಿಗಣಿಸಿ ಮೂರು ವಾರಗಳಲ್ಲಿ ಕಾನೂನು ಪ್ರಕಾರ ಸೂಕ್ತ ಕ್ರಮ ಜರುಗಿಸಬೇಕು” ಎಂದು ಪೀಠ ಆದೇಶದಲ್ಲಿ ಹೇಳಿದೆ.