Karnataka High Court
Karnataka High Court 
ಸುದ್ದಿಗಳು

ಅವ್ಯವಹಾರ ಆರೋಪ: ಅರ್ಚಕರನ್ನು ಸೇವೆಯಿಂದ ವಜಾಗೊಳಿಸಿದ ಧಾರ್ಮಿಕ ದತ್ತಿ ಆಯುಕ್ತರ ಆದೇಶ ರದ್ದುಪಡಿಸಿದ ಹೈಕೋರ್ಟ್‌

Bar & Bench

ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ವಿಚಾರಣೆ ನಡೆಸದೇ ಚಿಕ್ಕಬಳ್ಳಾಪುರ ತಾಲ್ಲೂಕಿನ ಭೋಗ ನಂದೀಶ್ವರ ದೇವಸ್ಥಾನದ ಅರ್ಚಕರನ್ನು ಸೇವೆಯಿಂದ ವಜಾಗೊಳಿಸಿದ ರಾಜ್ಯ ಧಾರ್ಮಿಕ ದತ್ತಿ ಆಯುಕ್ತರ ಆದೇಶವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ರದ್ದುಪಡಿಸಿದೆ.

ತಮ್ಮನ್ನು ಸೇವೆಯಿಂದ ವಜಾಗೊಳಿಸಿದ ಆದೇಶವನ್ನು ರದ್ದುಪಡಿಸಲು ಕೋರಿ ಅರ್ಚಕ ಟಿ ಸಿ ಆಶ್ವೀಜ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ.

“ಪ್ರಕರಣ ಸಂಬಂಧ ಅರ್ಜಿದಾರರಿಗೆ ಸೂಕ್ತ ಅವಕಾಶ ಕಲ್ಪಿಸಿ ಅವರ ವಾದ ಆಲಿಸಿ, ಎರಡು ವಾರಗಳಲ್ಲಿ ವಿಚಾರಣೆ ಪೂರ್ಣಗೊಳಿಸಬೇಕು ಎಂದು ರಾಜ್ಯ ಧಾರ್ಮಿಕ ದತ್ತಿ ಆಯುಕ್ತರಿಗೆ ನಿರ್ದೇಶಿಸಲಾಗಿದೆ. ಅಲ್ಲಿವರೆಗೆ ಅರ್ಜಿದಾರರಿಗೆ ದೇವಾಲಯದಲ್ಲಿ ಅರ್ಚಕರಾಗಿ ಕಾರ್ಯನಿರ್ವಹಿಸಬಹುದು” ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ಅರ್ಜಿದಾರರು ಬೋಗ ನಂದೀಶ್ವರ ದೇವಾಲಯದ ಅರ್ಚಕರಾಗಿ 2015ರಲ್ಲಿ ನೇಮಕಗೊಂಡಿದ್ದರು. ಅರ್ಚಕರು ಕರ್ತವ್ಯ ನಿರ್ವಹಣೆಯಲ್ಲಿ ಅವ್ಯವಹಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಅನಾಮಧೇಯ ಪತ್ರ ಬಂದಿತ್ತು. ಪತ್ರದಲ್ಲಿ ಅರ್ಚಕರು ಎರಡು ಮದ್ಯದ ಬಾಟಲಿ ಹೊಂದಿರುವ ಫೋಟೊ ಲಗತ್ತಿಸಲಾಗಿತ್ತು. ಈ ಸಂಬಂಧ ವಿವರಣೆ ಕೇಳಿ ನೀಡಿದ್ದ ಷೋಕಾಸ್ ನೋಟಿಸ್‌ಗೆ ಅರ್ಜಿದಾರರು ಉತ್ತರಿಸಿದ್ದರು. ನಂತರ ಅವರನ್ನು ಅಮಾನತು ಮಾಡಿ ಧಾರ್ಮಿಕ ದತ್ತಿ ಆಯುಕ್ತರು ಆದೇಶಿಸಿದ್ದರು.

ಒಂದು ವರ್ಷವಾದರೂ ಯಾವುದೇ ವಿಚಾರಣೆ ನಡೆಸದ ಹಿನ್ನೆಲೆಯಲ್ಲಿ ಅರ್ಜಿದಾರರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ್ದ ಹೈಕೋರ್ಟ್, ಎರಡು ವಾರದಲ್ಲಿ ವಿಚಾರಣೆ ನಡೆಸುವಂತೆ ಧಾರ್ಮಿಕ ದತ್ತಿ ಆಯುಕ್ತರಿಗೆ ನಿರ್ದೇಶಿಸಿತ್ತು. ಅಲ್ಲದೆ, ಆ ಆದೇಶ ಪಾಲಿಸದಿದ್ದರೆ ಅರ್ಚಕರನ್ನು ಸೇವೆಯಿಂದ ಅಮಾನತುಗೊಳಿಸಿದ ಆದೇಶ ರದ್ದಾಗಲಿದೆ ಹಾಗೂ ಅರ್ಜಿದಾರರಿಗೆ ಕರ್ತವ್ಯ ನಿರ್ವಹಿಸಲು ಅನುಮತಿಸಲಾಗುತ್ತದೆ ಎಂದು ನಿರ್ದೇಶಿಸಿತ್ತು.

ಅದಾಗ್ಯೂ, ಆದೇಶ ಪಾಲಿಸಿ ಯಾವುದೇ ವಿಚಾರಣೆ ನಡೆಸದ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು, ಅರ್ಜಿದಾರರನ್ನು ಅರ್ಚಕ ಸ್ಥಾನದಿಂದ ವಜಾಗೊಳಿಸಿ ಆದೇಶಿಸಿದ್ದರು. ಈ ಆದೇಶ ರದ್ದುಕೋರಿ ಅರ್ಚಕರು ಹೈಕೋರ್ಟ್‌ಗೆ ಮತ್ತೆ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿರುವ ಹೈಕೋರ್ಟ್, ಅರ್ಜಿದಾರರನ್ನು ಸೇವೆಯಿಂದ ವಜಾಗೊಳಿಸುವ ಮುನ್ನ ನ್ಯಾಯಾಲಯ ಹೊರಡಿಸಿದಂತೆ ಯಾವುದೇ ಸೂಕ್ತ ವಿಚಾರಣೆ ನಡೆಸಿಲ್ಲ. ಈ ನಡೆಯು 2022ರ ಆಗಸ್ಟ್‌ 22ರಂದು ಹೈಕೋರ್ಟ್ ಹೊರಡಿಸಿದ ಆದೇಶಕ್ಕೆ ವಿರುದ್ಧವಾಗಿದೆ ಮತ್ತು ಸ್ವಾಭಾವಿಕ ನ್ಯಾಯದ ಸ್ಪಷ್ಟ ಉಲ್ಲಂಘನೆಯಾಗಿದೆ. ಜತೆಗೆ, ತಮ್ಮನ್ನು ಸಮರ್ಥಿಸಿಕೊಳ್ಳಲು ಅರ್ಚಕರಿಗೆ ಅವಕಾಶ ನಿರಾಕರಿಸಿದಂತಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಅಲ್ಲದೆ, ಈ ಎಲ್ಲಾ ಕಾರಣಗಳಿಂದ ಅರ್ಜಿದಾರರನ್ನು ಸೇವೆಯಿಂದ ವಜಾಗೊಳಿಸಿದ ಆದೇಶವು ಮಾನ್ಯತೆ ಕಳೆದುಕೊಳ್ಳಲಿದ್ದು, ಅದನ್ನು ರದ್ದುಪಡಿಸುವ ಅಗತ್ಯವಿದೆ. ಇದರಿಂದ ಅರ್ಚಕರು ತಮ್ಮ ಕರ್ತವ್ಯ ನಿರ್ವಹಿಸಲು ಅನುಮತಿ ನೀಡಲಾಗಿದೆ. ಆದರೆ, ಅದು ಅವರ ವಿರುದ್ಧದ ವಿಚಾರಣೆಯ ಆದೇಶಕ್ಕೆ ಬದ್ಧವಾಗಿರುತ್ತದೆ ಎಂದು ಹೈಕೋರ್ಟ್ ಆದೇಶದಲ್ಲಿ ಸ್ಪಷ್ಟಪಡಿಸಿದೆ.