BJP MLA Harish Poonja
BJP MLA Harish Poonja 
ಸುದ್ದಿಗಳು

ಸಿಎಂ ವಿರುದ್ಧ ಹಿಂದೂ ಕಾರ್ಯಕರ್ತರ ಹತ್ಯೆ ಆರೋಪ: ಬಿಜೆಪಿ ಶಾಸಕ ಹರೀಶ್‌ ಪೂಂಜಾ ವಿರುದ್ಧದ ತನಿಖೆಗೆ ಹೈಕೋರ್ಟ್‌ ತಡೆ

Bar & Bench

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 24 ಮಂದಿ ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿದ್ದಾರೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಆರೋಪದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧದ ತನಿಖೆಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ಬೆಳ್ತಂಗಡಿ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಮತ್ತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಶಾಸಕ ಹರೀಶ್ ಪೂಂಜಾ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ನಡೆಸಿ ಆದೇಶ ಮಾಡಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು 2023ರ ಮೇ 22ರಂದು ಬೆಳ್ತಂಗಡಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅರ್ಜಿದಾರರು ಈ ವಿವಾದಿತ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಎರಡು ದಿನಗಳ ಬಳಿಕ ವಿಳಂಬವಾಗಿ ಅಂದರೆ ಮೇ 24ರಂದು ದೂರು ದಾಖಲಿಸಲಾಗಿದೆ. ಅರ್ಜಿದಾರರು ನೀಡಿದ ಹೇಳಿಕೆಯಿಂದ ಯಾವುದೇ ಹಿಂಸಾಚಾರ ಅಥವಾ ಶಾಂತಿಭಂಗ, ಕೋಮು ಸೌಹಾರ್ದಕ್ಕೆ ಧಕ್ಕೆಯಾದ ಪ್ರಕರಣ ನಡೆದಿಲ್ಲ. ಅರ್ಜಿದಾರರು ಆಡಳಿತ ಪಕ್ಷದ ಅಭ್ಯರ್ಥಿಯನ್ನು ಚುನಾವಣೆಯಲ್ಲಿ ಸೋಲಿಸಿದ್ದು, ರಾಜಕೀಯ ಪ್ರೇರಿತ, ದುರುದ್ದೇಶ ಮತ್ತು ದ್ವೇಷ ಭಾವನೆಯಿಂದ ದೂರು ದಾಖಲಿಸಿದ್ದಾರೆ. ಪೊಲೀಸರು ಸಹ ಆಡಳಿತ ಪಕ್ಷದ ನಾಯಕರ ಒತ್ತಡಕ್ಕೆ ಮಣಿದು ಎಫ್‌ಐಆರ್ ದಾಖಲಿಸಿದ್ದಾರೆ. ಇದು ಕಾನೂನುಬಾಹಿರ ಮತ್ತು ಸಂವಿಧಾನದ 14 ಮತ್ತು 21ನೇ ವಿಧಿ ಅಡಿಯಲ್ಲಿ ಕಲ್ಪಿಸಿರುವ ಮಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ವಾದಿಸಿದರು.

ಪ್ರಕರಣದ ಹಿನ್ನೆಲೆ: ಈಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಹರೀಶ್ ಪೂಂಜಾ ಅವರು ಜಯ ಸಾಧಿಸಿದ್ದರು. ಈ ಹಿನ್ನೆಲೆಯಲ್ಲಿ ಬೆಳ್ತಂಗಡಿಯ ಕಿನ್ಯಮ್ಮ ಸಭಾ ಭವನದ ಜೈನ್ ಪಟೇಲ್ ಸಭಾಂಗಣದಲ್ಲಿ 2023ರ ಮೇ 22ರಂದು ಬಿಜೆಪಿ ವತಿಯಿಂದ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಲ್ಲಿ ಶಾಸಕ ಹರೀಶ್ ಪೂಂಜಾ ಮಾತನಾಡುತ್ತಾ ‘ಸತ್ಯಣ್ಣ, 24 ಮಂದಿ ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿರುವ ಸಿದ್ದರಾಮಯ್ಯ ಅವರಿಗೆ ಮತ ಕೇಳಿದ್ದೀರಲ್ಲಾ? ಹಿಂದೂ ಹುಡುಗಿಯನ್ನು ಪ್ರೀತಿಸಿದ್ದ ಮುಸ್ಲಿಂ ಹುಡುಗನಿಗೆ ಹಿಂದೂ ಹುಡುಗನೊಬ್ಬ ಹಲ್ಲೆ ಮಾಡಿದ್ದ. ಗೋವುಗಳನ್ನು ಸಾಗಿಸುತ್ತಿದ್ದವರಿಗೆ ಹಿಂದೂ ಯುವಕರು ತಡೆದು ಹಲ್ಲೆ ಮಾಡಿದ್ದರು. ಅವರನ್ನು ಪೊಲೀಸರು ಬಂಧಿಸಿದ್ದರು. ನಾನು ಠಾಣೆಗೆ ಹೋಗಿ ಅವರ ಮೇಲೆ ಪ್ರಕರಣ ದಾಖಲಾಗದಂತೆ ನೋಡಿಕೊಂಡು ಠಾಣೆಯಿಂದ ಬಿಡಿಸಿಕೊಂಡು ಬಂದಿದ್ದೇನೆ’ ಎಂದು ಹೇಳಿಕೆ ನೀಡಿದ್ದರು.

ಇದನ್ನು ಆಧರಿಸಿ ನಮಿತಾ ಕೆ.ಪೂಜಾರಿ ಎಂಬುವರು ಬೆಳ್ತಂಗಡಿ ಠಾಣೆಗೆ ದೂರು ನೀಡಿ, ಹರೀಶ್ ಪೂಂಜಾ ಶಾಸಕರಾಗಿದ್ದುಕೊಂಡು ಕೋಮು ಪ್ರಚೋದಕ, ಸಂವಿಧಾನ ಬಾಹಿರ ಹೇಳಿಕೆ ನೀಡಿದ್ದಾರೆ. ಹಿಂದೂ ಮತ್ತು ಮುಸ್ಲಿಂ ಧರ್ಮಗಳ ಮಧ್ಯೆ ದ್ವೇಷ ಉಂಟು ಮಾಡಬೇಕು ಹಾಗೂ ಶಾಂತಿ ಕದಡಬೇಕು ಎಂಬ ಉದ್ದೇಶದಿಂದ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದರು. ದೂರು ಸ್ವೀಕರಿಸಿದ್ದ ಪೊಲೀಸರು, ಶಾಸಕ ಪೂಂಜಾ ವಿರುದ್ಧ ಭಾರತೀಯ ದಂಡ ಸಂಹಿತೆ ಐಪಿಸಿ 153, 153(ಎ), 505 (1)(ಬಿ), 505  (1) (ಸಿ) ಮತ್ತು 505 (2) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.