Kerala High Court with Justice Kauser Edappagath 
ಸುದ್ದಿಗಳು

ಮದುವೆ ವಿಚಾರ ಗೊತ್ತಿದ್ದೂ ಸಂಬಂಧ ಮುಂದುವರಿಸಿದರೆ ಸುಳ್ಳು ಭರವಸೆಯ ಅತ್ಯಾಚಾರದ ಆರೋಪ ನಿಲ್ಲದು: ಕೇರಳ ಹೈಕೋರ್ಟ್‌

ವ್ಯಕ್ತಿಗೆ ಮದುವೆಯಾಗಿದೆ ಎಂಬ ವಿಚಾರ ತಿಳಿದಿದ್ದರೂ ಮಹಿಳೆಯು ಆತನ ಜೊತೆ ಲೈಂಗಿಕ ಸಂಬಂಧ ಮುಂದುವರಿಸುವುದನ್ನು ಪ್ರೀತಿ ಮತ್ತು ಕಾಮನೆ ಎಂದು ಪರಿಗಣಿಸಬಹುದಾಗಿದ್ದು, ಅದನ್ನು ವಿವಾಹವಾಗಲು ಸುಳ್ಳು ಭರವಸೆ ನೀಡಲಾಗಿದೆ ಎನ್ನಲಾಗದು.

Bar & Bench

ವ್ಯಕ್ತಿ ವಿವಾಹವಾಗಿರುವ ವಿಚಾರ ಗೊತ್ತಿದ್ದೂ ಆತನ ಜೊತೆ ಲೈಂಗಿಕ ಸಂಬಂಧ ಮುಂದುವರಿಸಿದರೆ ವಿವಾಹವಾಗುವ ಸುಳ್ಳು ಭರವಸೆ ನೀಡಿ ಅತ್ಯಾಚಾರ ಮಾಡಲಾಗಿದೆ ಎಂಬ ಆರೋಪ ನಿಲ್ಲುವುದಿಲ್ಲ ಎಂದು ಕೇರಳ ಹೈಕೋರ್ಟ್‌ ಈಚೆಗೆ ಹೇಳಿದೆ.

ಐಪಿಸಿ ಸೆಕ್ಷನ್‌ಗಳಾದ 406 (ನಂಬಿಕೆ ದ್ರೋಹ), 420 (ವಂಚನೆ) ಮತ್ತು 376 (ಅತ್ಯಾಚಾರ) ಅಡಿ ದಾಖಲಾಗಿರುವ ಎಫ್‌ಐಆರ್‌ ವಜಾ ಮಾಡುವಂತೆ ಕೋರಿ ಆರೋಪಿತ ವ್ಯಕ್ತಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ನ್ಯಾ. ಕೌಸರ್‌ ಎಡಪ್ಪಗತ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ.

“2010ರಿಂದಲೂ ದೂರುದಾರ ಮಹಿಳೆಯು ಅರ್ಜಿದಾರರ ಜೊತೆ ಸಂಬಂಧ ಹೊಂದಿದ್ದರು. ಅರ್ಜಿದಾರರಿಗೆ ಮದುವೆಯಾಗಿದೆ ಎಂಬ ವಿಚಾರ ಗೊತ್ತಾದ ಬಳಿಕವೂ 2013ರ ನಂತರ ಲೈಂಗಿಕ ಸಂಬಂಧ ಮುಂದುವರಿಸಿದ್ದರು. ಹೀಗಾಗಿ, ಮದುವೆಯಾಗುವುದಾಗಿ ಭರವಸೆ ನೀಡಿ ಲೈಂಗಿಕ ಸಂಬಂಧ ಹೊಂದಿದ್ದರು ಎಂಬುದು ನಿಲ್ಲುವುದಿಲ್ಲ. ಪ್ರೀತಿ ಮತ್ತು ಕಾಮನೆಯ ಭಾಗವಾಗಿ ಆಕ್ಷೇಪಿತ ಲೈಂಗಿಕ ಸಂಬಂಧವನ್ನು ಅರ್ಜಿದಾರರು ಹೊಂದಿದ್ದರು ಎಂದೇ ಹೇಳಬೇಕಾಗುತ್ತದೆ ವಿನಾ ಸುಳ್ಳು ಭರವಸೆ ಕಾರಣ ಎನ್ನಲಾಗದು” ಎಂದು ಪೀಠ ಹೇಳಿದೆ.

2010ರಿಂದ ಅರ್ಜಿದಾರ ಪರಿಚಿತನಾಗಿದ್ದು, 2013ರಿಂದ ಆತ ವಿವಾಹವಾಗಿದ್ದಾನೆ ಎಂಬ ವಿಚಾರ ತಮಗೆ ತಿಳಿದಿತ್ತು ಎನ್ನುವ ದೂರುದಾರೆಯ ಹೇಳಿಕೆಯನ್ನು ಪೀಠವು ಗಮನಿಸಿತು. ಅದಾಗ್ಯೂ, ಆಕೆಯು 2019ರವರೆಗೆ ಆತನ ಜೊತೆ ಲೈಂಗಿಕ ಸಂಬಂಧ ಹೊಂದಿದ್ದರು. ಅರ್ಜಿದಾರ ವಿಚ್ಚೇದನ ಪಡೆಯುವುದಾಗಿ ತಿಳಿಸಿದ್ದರು, ಈ ನಡುವೆ ಆತ ಮತ್ತೊಬ್ಬ ಮಹಿಳೆಯ ಜೊತೆಯೂ ಸಂಬಂಧ ಹೊಂದಿರುವುದು ಗೊತ್ತಾಯಿತು ಎಂದು ದೂರುದಾರೆ ಆರೋಪಿಸಿದ್ದರು.

ದೂರುದಾರೆಯ ಹೇಳಿಕೆ ಮತ್ತು ದಾಖಲೆಗಳ ಪ್ರಕಾರ ಆರೋಪ ಮಾಡಲಾಗಿರುವಂತೆ ಮದುವೆಯ ಭರವಸೆ ನೀಡಿ ಅರ್ಜಿದಾರ ಅತ್ಯಾಚಾರ ಎಸಗುವ ಯಾವುದೇ ದುರುದ್ದೇಶ ಹೊಂದಿಲ್ಲ ಎಂದು ಪೀಠ ಹೇಳಿದ್ದು, ಆತನ ವಿರುದ್ಧದ ಎಫ್‌ಐಆರ್‌ ವಜಾ ಮಾಡಿದೆ.