High Court of Karnataka 
ಸುದ್ದಿಗಳು

ಆರ್‌ಟಿಐ, ಆರ್‌ಎಸ್‌ಎಸ್‌ ಕಾರ್ಯಕರ್ತ ಎಂದು ಬೆದರಿಕೆ: ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

ದಾಖಲೆಗಳ ಪರಿಶೀಲಿಸಿದ ಬಳಿಕ ನ್ಯಾಯಾಲಯವು ಈ ಪ್ರಕರಣದಲ್ಲಿ ಅರ್ಜಿದಾರರು ದೂರುದಾರರಿಗೆ ಉದ್ದೇಶಪೂರ್ವಕವಾಗಿಯೇ ಬೆದರಿಕೆಯೊಡ್ಡಿದ್ದಾರೆ ಎಂಬುದಕ್ಕಾಗಲಿ ಮತ್ತು ಆ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನುವುದಕ್ಕಾಗಲಿ ಸಾಕ್ಷಿ ಇಲ್ಲ ಎಂದಿತು.

Bar & Bench

ಆರ್‌ಟಿಐ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತನಾಗಿದ್ದು, ಹಣ ನೀಡದಿದ್ದರೆ ಕಟ್ಟಡದ ಉದ್ಘಾಟನೆ ಕಾರ್ಯಕ್ರಮ ಸ್ಥಗಿತಗೊಳಿಸುತ್ತೇನೆ ಎಂದು ಬೆದರಿಕೆ ಒಡ್ಡಿ ಹಣ ಸುಲಿಗೆ ಮಾಡಲು ಯತ್ನಿಸಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಎನ್ ಹುನುಮೇಗೌಡ ಎಂಬುವರ ವಿರುದ್ಧದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ರದ್ದುಗೊಳಿಸಿದೆ.

ಬಿಜೆಪಿ ನಾಯಕ ಬಿ ಜೆ ಪುಟ್ಟಸ್ವಾಮಿ ನೀಡಿದ್ದ ದೂರು ರದ್ದು ಕೋರಿ ಕಾಮಾಕ್ಷಿಪಾಳ್ಯದ ಹನುಮೇಗೌಡ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ. ಹಣ ವಸೂಲು ಮಾಡಲು ಯಾವುದೇ ವ್ಯಕ್ತಿಯನ್ನು ಬೆದರಿಸಿದ್ದಾರೆ ಎಂದು ಅರ್ಜಿದಾರರ ವಿರುದ್ಧ ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದು ಪೀಠವು ಹೇಳಿದೆ.

“ಭಾರತೀಯ ಅಪರಾಧ ದಂಡ ಸಂಹಿತೆ ಸೆಕ್ಷನ್ 385ರಡಿ ಅಪರಾಧ ಎಸಗಿದ್ದರೆ ಆತ ಇತರೆ ಯಾವುದೇ ವ್ಯಕ್ತಿಯನ್ನು ಬೆದರಿಸಿ ಘಾಸಿಗೊಳಿಸಿರಬೇಕು. ಆದರೆ, ಈ ಪ್ರಕರಣದಲ್ಲಿ ಆರೋಪ ಪಟ್ಟಿಯ ಜತೆ ಆರೋಪ ಸಾಬೀತುಪಡಿಸುವಂತಹ ಯಾವುದೇ ಸಾಕ್ಷ್ಯ ಒದಗಿಸಿಲ್ಲ. ಜತೆಗೆ ದೂರುದಾರರನ್ನು ಸುಲಿಗೆ ಮಾಡುವ ಸಲುವಾಗಿ ಬೆದರಿಸಿರುವುದಕ್ಕೆ ಪುರಾವೆ ಇಲ್ಲ” ಎಂದು ನ್ಯಾಯಾಲಯ ಹೇಳಿದೆ.

ದಾಖಲೆಗಳನ್ನು ಪರಿಶೀಲಿಸಿದ ಬಳಿಕ ನ್ಯಾಯಾಲಯವು ಈ ಪ್ರಕರಣದಲ್ಲಿ ಅರ್ಜಿದಾರರು ದೂರುದಾರರಿಗೆ ಉದ್ದೇಶಪೂರ್ವಕವಾಗಿಯೇ ಬೆದರಿಕೆಯೊಡ್ಡಿದ್ದಾರೆ ಎಂಬುದಕ್ಕೆ ಮತ್ತು ಆ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನುವುದಕ್ಕೆ ಸಾಕ್ಷಿ ಇಲ್ಲ. ಮೇಲ್ನೋಟಕ್ಕೆ ಯಾವುದೇ ಪುರಾವೆ ಕಂಡುಬಂದಿಲ್ಲವಾದ್ದರಿಂದ ಮ್ಯಾಜಿಸ್ಟ್ರೇಜ್ ಸಂಜ್ಞೇಯ ತೆಗೆದುಕೊಂಡು ಐಪಿಸಿ ಸೆಕ್ಷನ್ 384ರ ಅಡಿ ಪ್ರಕರಣ ಮುಂದುವರಿಸಿರುವುದು ಸರಿಯಲ್ಲ. ಹೀಗಾಗಿ, ಇಡೀ ಪ್ರಕರಣದ ವಿಚಾರಣೆ ರದ್ದುಗೊಳಿಸಲಾಗುತ್ತಿದೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಜಿ ಆರ್‌ ಮೋಹನ್ ಅವರು ಎಫ್‌ಐಆರ್‌ನಲ್ಲಿ ನಮೂದಿಸಲಾಗಿರುವ ಅಂಶಗಳು ಐಪಿಸಿ ಸೆಕ್ಷನ್ 384ಗೆ ವ್ಯಾಪ್ತಿಗೆ ಬರುವುದಿಲ್ಲ. ಅಲ್ಲದೆ, ಅರ್ಜಿದಾರರು ಹಣಕ್ಕಾಗಿ ಬೆದರಿಕೆಯೊಡಿದ್ದರು ಎಂಬುದಕ್ಕೆ ಯಾವುದೇ ಸಾಕ್ಷಿ ಇಲ್ಲ, ವೃಥಾ ಆರೋಪ ಮಾಡಲಾಗಿದ ಎಂದು ಪೀಠಕ್ಕೆ ವಿವರಿಸಿದ್ದರು.

ಬಿಜೆಪಿಯ ನಾಯಕರಾಗಿದ್ದ ಮಾಜಿ ಎಂಎಲ್‌ಸಿ ಬಿ ಜೆ ಪುಟ್ಟಸ್ವಾಮಿ, 2019ರಲ್ಲಿ ನೆಲಮಂಗಲ ತಾಲ್ಲೂಕಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅವರು ಕಟ್ಟಡವನ್ನು ಉದ್ಘಾಟನೆಗೆ ಸಜ್ಜುಗೊಳಿಸುತ್ತಿದ್ದ ಸಂದರ್ಭದಲ್ಲಿ ಅರ್ಜಿದಾರರು ಸ್ಥಳಕ್ಕೆ ಬಂದು, ತಾನು ಆರ್‌ಟಿಐ ಮತ್ತು ಆರ್‌ಎಸ್ ಎಸ್ ಕಾರ್ಯಕರ್ತ ತನಗೆ ಎರಡು ಲಕ್ಷ ರೂಪಾಯಿ ನೀಡದಿದ್ದರೆ, ಮುಖ್ಯಮಂತ್ರಿ ಹಾಗೂ ಇತ್ಯರ ಗಣ್ಯರು ಸಮಾರಂಭದಲ್ಲಿ ಭಾಗವಹಿಸದಂತೆ ಮಾಡುತ್ತೇನೆ ಎಂದು ಬೆದರಿಸಿದ್ದರು ಎಂದು ಆರೋಪಿಸಿದ್ದರು. ಆ ಬಗ್ಗೆ ಎಫ್‌ಐಆರ್ ದಾಖಲಿಸಿದ್ದ ಪೊಲೀಸರು, ತನಿಖೆ ನಡೆಸಿ ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಹನುಮೇಗೌಡ ಸದರಿ ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.