Actor Chetan and Karnataka HC
Actor Chetan and Karnataka HC 
ಸುದ್ದಿಗಳು

ದೈವಾರಾಧಾನೆ ಕುರಿತು ಆಕ್ಷೇಪಾರ್ಹ ಹೇಳಿಕೆ ಆರೋಪ: ನಟ ಚೇತನ್‌ ವಿರುದ್ಧದ ಎಫ್‌ಐಆರ್‌ ರದ್ದುಪಡಿಸಲು ಹೈಕೋರ್ಟ್‌ ನಕಾರ

Bar & Bench

ಕಾಂತಾರ ಸಿನಿಮಾ ಬಗ್ಗೆ ಮಾತನಾಡುವ ವೇಳೆ ದೈವಾರಾಧನೆ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದಡಿ ನಟ ಚೇತನ್‌ ವಿರುದ್ಧ ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ದಾಖಲಾಗಿರುವ ಎಫ್‌ಐಆರ್‌ ವಜಾ ಮಾಡಲು ಕರ್ನಾಟಕ ಹೈಕೋರ್ಟ್‌ ಈಚೆಗೆ ನಿರಾಕರಿಸಿದೆ.

ನಟ ಚೇತನ್‌ ಎ. ಕುಮಾರ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ಐ ಅರುಣ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಮನವಿ ವಜಾ ಮಾಡಿದೆ.

“ಪೊಲೀಸರು ತನಿಖೆ ನಡೆಸದೆ ಆರೋಪ ಪಟ್ಟಿ ಸಲ್ಲಿಸುವುದಿಲ್ಲ. ಅಗತ್ಯಬಿದ್ದಲ್ಲಿ ಜಾಮೀನು ಪಡೆಯಲು ಅರ್ಜಿದಾರ ಚೇತನ್‌ ಅವರು ನ್ಯಾಯಾಲಯದ ಮೆಟ್ಟಿಲೇರಬಹುದು. ಪ್ರಕರಣವು ತನಿಖಾ ಹಂತದಲ್ಲಿರುವುದರಿಂದ ಆರೋಪವು ಐಪಿಸಿ ಸೆಕ್ಷನ್‌ 505(2) ಅಪರಾಧವಾಗುತ್ತದೋ, ಇಲ್ಲವೋ ಎಂದು ನ್ಯಾಯಾಲಯ ಹೇಳಲಾಗದು. ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ ಬಳಿಕ ಅರ್ಜಿದಾರರು ನ್ಯಾಯಾಲಯದ ಕದತಟ್ಟಲು ಸ್ವತಂತ್ರರಾಗಿದ್ದಾರೆ” ಎಂದಿರುವ ನ್ಯಾಯಾಲಯವು ಅರ್ಜಿ ವಜಾ ಮಾಡಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಎಸ್‌ ಬಾಲಕೃಷ್ಣನ್‌ ಅವರು “ಯಾವುದೇ ವ್ಯಕ್ತಿಗಳ ನಡುವೆ ದ್ವೇಷ ಹರಡುವಂತಹ ಹೇಳಿಕೆಯನ್ನು ಚೇತನ್‌ ನೀಡಿಲ್ಲ. ಹಿಂದೂ ಧರ್ಮದ ಭಾಗವಾಗಿರದ ಬುಡಕಟ್ಟು ದೈವಾರಾಧನೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದು, ನ್ಯಾಯಯುತ ಹೇಳಿಕೆ ನೀಡಿದ್ದಾರೆ. ಹೇಳಿಕೆಯು ಅಧ್ಯಯನದ ರೂಪದಲ್ಲಿದೆ. ಇದನ್ನು ದ್ವೇಷ ಹರಡುವ ಹೇಳಿಕೆ ಎಂದು ಪರಿಗಣಿಸಬಾರದು. ಆದ್ದರಿಂದ ಇದು ಐಪಿಸಿ ಸೆಕ್ಷನ್‌ 505(2)ರ ಅಡಿ ಅಪರಾಧವಾಗದು” ಎಂದು ವಾದಿಸಿದ್ದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲ ರಾಹುಲ್‌ ರೈ ಕೆ ಅವರು “ಸಮಾಜದ ವಿವಿಧ ಸಮುದಾಯಗಳ ನಡುವೆ ದ್ವೇಷ ಹರಡುವ ಹೇಳಿಕೆಗಳನ್ನು ಚೇತನ್‌ ನೀಡುತ್ತಿದ್ದಾರೆ ಎಂಬ ಮಾಹಿತಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ. ಈ ಕುರಿತು ತನಿಖೆಯಾಗಬೇಕಿದೆ. ಈ ಹಂತದಲ್ಲಿ ಅರ್ಜಿದಾರರ ಮನವಿಯನ್ನು ಪುರಸ್ಕರಿಸಬಾರದು” ಎಂದು ಕೋರಿದರು.

ಚೇತನ್‌ ಅವರು ಹಿಂದೂ ಧರ್ಮದ ಭಾವನೆಗೆ ಧಕ್ಕೆಯಾಗುವ ಹೇಳಿಕೆ ನೀಡಿದ್ದು, ಇದು ಸಮಾಜದಲ್ಲಿ ಶಾಂತಿಗೆ ಧಕ್ಕೆ ಉಂಟು ಮಾಡುವಂತಿದೆ ಎಂದು ಬೆಂಗಳೂರಿನ ಶಿವಕುಮಾರ್‌ ಎಂಬವರು ದೂರು ನೀಡಿದ್ದರು. ಇದನ್ನು ಆಧರಿಸಿ ಶೇಷಾದ್ರಿಪುರಂ ಪೊಲೀಸರು ಐಪಿಸಿ ಸೆಕ್ಷನ್‌ 505(2) ರ ಅಡಿ ಪ್ರಕರಣ ದಾಖಲಿಸಿದ್ದಾರೆ.