High Court of Karnataka 
ಸುದ್ದಿಗಳು

ಕಮಲದ ಕೊಳದ ಜಾಗ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಬಳಕೆ ಆರೋಪ: ಪಿಐಎಲ್‌ ವಜಾ ಮಾಡಿದ ಹೈಕೋರ್ಟ್‌

Bar & Bench

ಬೆಂಗಳೂರಿನ ವರ್ತೂರು ಹೋಬಳಿಯ ಸಿದ್ಧಾಪುರದ ಗ್ರಾಮದಲ್ಲಿ ಜಲಾನಯನ ಪ್ರದೇಶವಾದ ಕಮಲದ ಕೊಳಕ್ಕೆ ಸೇರಿದ ಜಾಗವನ್ನು ವಾಣಿಜ್ಯ ಸಂಕೀರ್ಣ ನಿರ್ಮಿಸಲು ಅಕ್ರಮವಾಗಿ ಮಂಜೂರು ಮಾಡಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.

ಬೆಂಗಳೂರಿನ ವೈಟ್ ಫೀಲ್ಡ್‌ ರೈಸಿಂಗ್ ಟ್ರಸ್ಟ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು. ವಿವಾದಿತ ಸ್ಥಳದಲ್ಲಿ ಕಮಲದ ಕೊಳವಿತ್ತು ಎಂಬುದನ್ನು ಕಂದಾಯ ದಾಖಲೆ ಮತ್ತು ನಕ್ಷೆ ಮಂಜೂರಾತಿ ಮೂಲಕ ದೃಢಪಡಿಸಲು ಅರ್ಜಿದಾರರು ವಿಫಲವಾಗಿದ್ದಾರೆ ಎಂದು ತಿಳಿಸಿ ಅರ್ಜಿ ವಜಾಗೊಳಿಸಿತು.

ಸಿದ್ಧಾಪುರ ಗ್ರಾಮದ ಸರ್ವೆ ನಂಬರ್ 7ಕ್ಕೆ ಒಳಪಡುವ 22 ಗುಂಟೆಯಲ್ಲಿ ಕಮಲದ ಕೊಳವಿತ್ತು. ಅದರಲ್ಲಿ 4 ಗುಂಟೆ ಜಾಗವನ್ನು 2012ರಲ್ಲಿ ಖಾಸಗಿ ವ್ಯಕ್ತಿಗಳಿಗೆ ನೀಡಲಾಗಿದೆ. ಆ ಭೂಮಿಯನ್ನು 2021ರಲ್ಲಿ ಖರೀದಿಸಿದ್ದ ಕೆಲವು ವ್ಯಕ್ತಿಗಳು ಸದ್ಯ ಅನಧಿಕೃತವಾಗಿ ವಾಣಿಜ್ಯ ಸಂಕೀರ್ಣ ನಿರ್ಮಿಸುತ್ತಿದ್ದಾರೆ. ಇದರಿಂದ ಜಲಾನಯನ ಪ್ರದೇಶದ ವಿಸ್ತ್ರೀರ್ಣ ಕುಗ್ಗುತ್ತದೆ ಹಾಗೂ ಅದು ಪರಿಸರದ ಮೇಲೆ ಪರಿಣಾಮ ಬೀರಲಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.

ವಿಚಾರಣೆ ವೇಳೆ ದಾಖಲೆ ಪರಿಶೀಲನೆ ನಡೆಸಿದ ಪೀಠವು 1970-71ರ ಕಂದಾಯ ದಾಖಲೆಗಳಲ್ಲಿ ವಿವಾದಿತ ಸ್ಥಳವು ಮುಫತ್‌ ಕಾವಲ್‌ ಸರ್ಕಾರಿ ಕುಂಟೆಯಿದ್ದು, ಅದನ್ನು ಹನುಮಂತಪ್ಪ ಎಂಬುವವರು ಉಳುಮೆ ಮಾಡುತ್ತಿದ್ದರು ಎಂದು ತಿಳಿಯುತ್ತದೆ. 1992-92ರಿಂದ 1994-95ರರವರೆಗಿನ ದಾಖಲೆಗಳಲ್ಲಿ ಮುಫತ್‌ ಕಾವಲ್‌ ಜೊತೆಗೆ ಕುಂಟೆ, ಅಥವಾ ಸರ್ಕಾರಿ ಜಲಮೂಲ ಎಂಬುದಾಗಿ ಉಲ್ಲೇಖವಾಗಿದೆ. ಪ್ರಕರಣದ ಪಕ್ಷಕಾರರು ಮತ್ತು ಸರ್ಕಾರಿ ಪ್ರಾಧಿಕಾರಿಗಳು ಸಲ್ಲಿಸಿದ ದಾಖಲೆಗಳಲ್ಲಿ ಕೆರೆ/ಕುಂಟೆ ಸರ್ವೇ ನಂ.8ರಲ್ಲಿ ಇರುವುದು ತಿಳಿಯುತ್ತದೆ ಎಂದು ಅಭಿಪ್ರಾಯಪಟ್ಟಿತು.

ಅಲ್ಲದೆ, ಸರ್ವೇ ನಂ.7ರಲ್ಲಿನ ಜಾಗದ ಪೈಕಿ 4 ಗುಂಟೆ ಜಾಗವನ್ನು ಖಾಸಗಿ ವ್ಯಕ್ತಿಗಳಿಗೆ ಹಂಚಿಕೆ ಮಾಡಲಾಗಿದೆ ಎನ್ನುವ ವಿಚಾರವನ್ನು ಪ್ರಸ್ತುತ ಅರ್ಜಿಯಲ್ಲಿ ವಿಚಾರಣೆ ನಡೆಸುವುದು ಅಪ್ರಸ್ತುತವಾಗಲಿದೆ. ಮೇಲಾಗಿ ಸಿದ್ಧಾಪುರ ಗ್ರಾಮದ ಸರ್ವೇ ನಂ.7ರಲ್ಲಿನ ಕಮಲದ ಕೊಳವಿತ್ತು ಎಂಬುದನ್ನು ಸಾಬೀತುಪಡಿಸಲು ಅರ್ಜಿದಾರರು ವಿಫಲವಾಗಿದ್ದಾರೆ ಎಂದು ಅಭಿಪ್ರಾಯಪಟ್ಟ ಪೀಠವು ಅರ್ಜಿ ವಜಾಗೊಳಿಸಿ ಆದೇಶಿಸಿದೆ.