Divorce 
ಸುದ್ದಿಗಳು

ಪತಿಯ ಮೇಲೆ ನಪುಂಸಕತೆ ಆರೋಪ ಹೊರಿಸುವುದು, ಪುರುಷತ್ವ ಪರೀಕ್ಷೆಗೆ ಒತ್ತಾಯಿಸುವುದು ಮಾನಸಿಕ ಕ್ರೌರ್ಯ: ದೆಹಲಿ ಹೈಕೋರ್ಟ್

Bar & Bench

ಪತ್ನಿ ತನ್ನ ಗಂಡನ 'ಪುರುಷತ್ವ'ದ ಬಗ್ಗೆ ಆರೋಪಗಳನ್ನು ಮಾಡುವುದು ಪತಿಯನ್ನು ತೀವ್ರ ಖಿನ್ನತೆ ಹಾಗೂ ಮಾನಸಿಕ ಆಘಾತಕ್ಕೆ ದೂಡುವಂತಹದ್ದಾಗಿದ್ದು, ಇದು ಅಂತಿಮವಾಗಿ ಗಂಡನ ಮಾನಸಿಕ ಕ್ರೌರ್ಯ ಮತ್ತು ಕಿರುಕುಳಕ್ಕೆ ಕಾರಣವಾಗುತ್ತದೆ ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.

ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಮತ್ತು ನೀನಾ ಬನ್ಸಾಲ್ ಕೃಷ್ಣ ಅವರ ನೇತೃತ್ವದ ವಿಭಾಗೀಯ ಪೀಠವು ಪತಿಯ ಮೇಲೆ ವರದಕ್ಷಿಣೆ ಬೇಡಿಕೆಯ ಆರೋಪ ಹೊರಿಸುವುದು, ವಿವಾಹೇತರ ಸಂಬಂಧದ ಆರೋಪ ಮಾಡುವುದು, ಸ್ತ್ರೀಲೋಲ ಎಂದು ಪ್ರಚುರಪಡಿಸುವುದು, ನಪುಂಸಕತ್ವ ಪರೀಕ್ಷೆಗೆ ಒಳಗಾಗುವಂತೆ ಒತ್ತಾಯಿಸುವುದು ಆತನನ್ನು ಮಾನಸಿಕ ಯಾತನೆ ಮತ್ತು ಆಘಾತಕ್ಕೆ ದೂಡಲು ಕಾರಣವಾಗುತ್ತದೆ ಎಂದಿದೆ.

"ಮೇಲ್ಮನವಿದಾರೆಯ (ಪತ್ನಿ) ಹೇಳಿಕೆಗಳು ಪ್ರತಿವಾದಿಯನ್ನು ಪುರುಷತ್ವ ಪರೀಕ್ಷೆಗೆ ಒಳಗಾಗುವಂತೆ ಮಾಡಲಾಯಿತು ಎಂದು ಸಾಬೀತುಪಡಿಸುತ್ತದೆ; ಪರೀಕ್ಷೆಯಲ್ಲಿ ಅವರು ಸಮರ್ಥರು ಎಂದು ಕಂಡುಬಂದಿದೆ. ವ್ಯಕ್ತಿಯ ಪುರುಷತ್ವದ ಬಗ್ಗೆ ನೀಡುವ ಇಂತಹ ಹೇಳಿಕೆ ಮತ್ತು ಮಾಡಲಾಗುವ ಆರೋಪಗಳು ಯಾವುದೇ ವ್ಯಕ್ತಿಯನ್ನು ಖಿನ್ನತೆಗೆ ದೂಡುವುದು ಮಾತ್ರವಲ್ಲದೆ ಮಾನಸಿಕವಾಗಿ ಆಘಾತ ಉಂಟು ಮಾಡುತ್ತವೆ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಸಂಗಾತಿಯ ವರ್ಚಸ್ಸಿಗೆ ಸಾರ್ವಜನಿಕವಾಗಿ ಕಳಂಕ ತರುವ ಪರಿಣಾಮವನ್ನು ಹೊಂದಿರುವ ಅಜಾಗರೂಕ, ಮಾನಹಾನಿಕರ, ಅವಮಾನಕರ ಮತ್ತು ಆಧಾರರಹಿತ ಆರೋಪಗಳನ್ನು ಮಾಡುವುದು ತೀವ್ರ ಕ್ರೌರ್ಯದ ಕೃತ್ಯ ಎಂದು ನ್ಯಾಯಾಲಯ ಹೇಳಿದೆ.

"ದುರದೃಷ್ಟವಶಾತ್, ಪತಿಯ ಕಚೇರಿಯ ಸಭೆಗಳಲ್ಲಿ, ಆತನ ಕಚೇರಿಯ ಎಲ್ಲ ಸಿಬ್ಬಂದಿ / ಅತಿಥಿಗಳ ಮುಂದೆ ದಾಂಪತ್ಯ ದ್ರೋಹದ ಆರೋಪಗಳನ್ನು ಮಾಡುವ ಮಟ್ಟಕ್ಕೆ ಪತ್ನಿಯು ಹೋಗಿದ್ದು ಸಾರ್ವಜನಿಕವಾಗಿ ಪತಿಗೆ ಕಿರುಕುಳ ನೀಡಿರುವ, ಅವಮಾನ ಮಾಡಿರುವ ಹಾಗೂ ಮೌಖಿಕವಾಗಿ ಹಲ್ಲೆ ನಡೆಸಿರುವ ಪ್ರಕರಣ ಇದಾಗಿದೆ. ಕಚೇರಿಯ ಮಹಿಳಾ ಕಾರ್ಮಿಕರಿಗೆ ಕೂಡ ಆಕೆ ಕಿರುಕುಳ ನೀಡಿದ್ದು, ಪತಿಯನ್ನು ಕಚೇರಿಯಲ್ಲಿ ಸ್ತ್ರೀಲೋಲನಂತೆ ಚಿತ್ರಿಸಲು ಯತ್ನಿಸಿದ್ದಾಳೆ. ಈ ನಡವಳಿಕೆಯಿಂದಾಗಿ ಪ್ರತಿವಾದಿ / ಪತಿಗೆ ತೀವ್ರ ಕ್ರೌರ್ಯವಾಗಿದೆ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಕ್ರೌರ್ಯದ ಆಧಾರದ ಮೇಲೆ ಪತಿಗೆ ವಿಚ್ಛೇದನ ನೀಡುವ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

2000ನೇ ಇಸವಿಯಲ್ಲಿ ಮದುವೆಯಾಗಿದ್ದ ದಂಪತಿಗೆ ಒಬ್ಬ ಪುತ್ರನಿದ್ದಾನೆ. ಮೊದಲಿನಿಂದಲೂ ವೈವಾಹಿಕ ಸಂಬಂಧಗಳಲ್ಲಿ ಸಮಸ್ಯೆಗಳು ಉದ್ಭವಿಸಿದ್ದವು. ಹೆಂಡತಿಗೆ ತನ್ನ ಬಗ್ಗೆ ಕೆಟ್ಟದಾಗಿ ಮಾತನಾಡುವ ಚಾಳಿ ಇದೆ ಎಂದು ಪತಿ ಆರೋಪಿಸಿದ್ದರು. ತನ್ನ ಅತ್ತೆ ತನ್ನನ್ನು ಹೊಡೆದಿದ್ದಾಳೆ, ತನ್ನ ಗಂಡನಿಗೆ ಅಕ್ರಮ ಸಂಬಂಧವಿದೆ ಮತ್ತು ಅವನ ಕುಟುಂಬವು ವರದಕ್ಷಿಣೆ ತೆಗೆದುಕೊಂಡಿದೆ ಎಂದು ಆಕೆ ದೂರುತ್ತಿದ್ದರು ಎನ್ನಲಾಗಿದೆ.

ತಾನು ನಪುಂಸಕತೆಯಿಂದ ಬಳಲುತ್ತಿದ್ದೇನೆ ಮತ್ತು ಗರ್ಭಪಾತಕ್ಕೆ ಒತ್ತಾಯಿಸಿದ್ದೇನೆ ಎಂದು ಪತ್ನಿ ದೂರಿದ್ದಾಳೆ ಎಂದು ಪತಿ ತನ್ನ ಅರ್ಜಿಯಲ್ಲಿ ಆಕ್ಷೇಪಿಸಿದ್ದಾರೆ. ಅಲ್ಲದೆ ತನ್ನನ್ನು ಪುರುಷತ್ವ ಪರೀಕ್ಷೆಗೆ ಒಳಗಾಗುವಂತೆ ಒತ್ತಾಯಿಸಲಾಗಿದ್ದು, ಅದರಲ್ಲಿ ತಾನು ಸಮರ್ಥ ಎಂದು ಸಾಬೀತಾಗಿದೆ ಎಂದು ಪತಿ ಅರ್ಜಿಯಲ್ಲಿ ವಿವರಿಸಿದ್ದಾರೆ.

ತನ್ನ ಪತಿಯು ಸ್ತ್ರೀಲೋಲನಾಗಿದ್ದು, ಇಂಗ್ಲಿಷ್ ಮಾತನಾಡಬಲ್ಲ ಯಾವುದೇ ಮಹಿಳೆ ಅದು ಹದಿನಾರರ ಹರೆಯದವರೇ ಇರಲಿ, ಅರವತ್ತರ ವಯಸ್ಸಿನವರೇ ಇರಲಿ ಅವರ ಹಿಂದೇ ಬೀಳುತ್ತಾನೆ ಎಂದು ಪತ್ನಿ ಆರೋಪಿಸಿದ್ದಳು.

ಎಲ್ಲವನ್ನು ವಿಸ್ತೃತವಾಗಿ ಪರಿಶೀಲಿಸಿರುವ ನ್ಯಾಯಾಲಯವು ಹಿಂದೂ ವಿವಾಹ ಕಾಯಿದೆಯ ಸೆಕ್ಷನ್ 13 (1) (ಐಎ) ಅಡಿಯಲ್ಲಿ ಪತಿ ವಿಚ್ಛೇದನಕ್ಕೆ ಅರ್ಹವಾಗಿದ್ದಾನೆ ಎಂದು ಹೇಳಿದೆ.

[ತೀರ್ಪು ಓದಿ]

Judgement.pdf
Preview