Karnataka High Court 
ಸುದ್ದಿಗಳು

ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇಗುಲ ಧ್ವಂಸಗೊಳಿಸಿ ಜಾಮಿಯಾ ಮಸೀದಿ ನಿರ್ಮಾಣದ ಆರೋಪ: ಎಎಸ್‌ಐಗೆ ಹೈಕೋರ್ಟ್‌ ನೋಟಿಸ್‌

ಸಂರಕ್ಷಿತ ಸ್ಮಾರಕದ ಕುರಿತು ಪ್ರಶ್ನೆ ಎತ್ತಲಾಗಿದೆ. ರಿಟ್ ಅರ್ಜಿಯ ಮೂಲಕ ನ್ಯಾಯ ವ್ಯಾಪ್ತಿಯಲ್ಲಿ ಬದಲಾವಣೆ ಕಷ್ಟ ಸಾಧ್ಯ ಎಂದು ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಾಲಯ.

Bar & Bench

ಶ್ರೀರಂಗಪಟ್ಟಣದ ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಾಲಯವನ್ನು ಟಿಪ್ಪು ಸುಲ್ತಾನ್ ಆಳ್ವಿಕೆಯಲ್ಲಿ ಧ್ವಂಸಗೊಳಿಸಿ ವಿವಾದಿತ ಜಾಮಿಯಾ ಮಸೀದಿ ನಿರ್ಮಾಣ ಮಾಡಲಾಗಿದೆ. ಈ ಕುರಿತು ಉತ್ಖನನ ನಡೆಸಿ ವರದಿ ಸಲ್ಲಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾಲಯಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಗುರುವಾರ ನೋಟಿಸ್ ಜಾರಿಗೊಳಿಸಿದೆ.

ಮಂಡ್ಯ ಜಿಲ್ಲೆಯ ಹಾಲಹಳ್ಳಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಭಜರಂಗ ಸೇನೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಮುಜರಾಯಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಮಂಡ್ಯ ಜಿಲ್ಲಾಧಿಕಾರಿ, ರಾಜ್ಯ ಧಾರ್ಮಿಕ ಪರಿಷತ್, ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿಗೆ ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಾಲಯವನ್ನು ವಿಜಯನಗರ ಸಾಮ್ರಾಜ್ಯ, ಮೈಸೂರು ಸಾಮ್ರಾಜ್ಯ ಹಾಗೂ ದಳವಾಯಿ ದೊಡ್ಡಯ್ಯ ಸೇರಿ ಅನೇಕ ಆಡಳಿತಗಾರರು ಪೋಷಿಸಿಕೊಂಡು ಬಂದಿದ್ದರು. ಆದರೆ, ಇದನ್ನು ಟಿಪ್ಪು ಸುಲ್ತಾನ್ ಧ್ವಂಸಗೊಳಿಸಿದ್ದು, ಅದೇ ಜಾಗದಲ್ಲಿ ಜಾಮಿಯಾ ಮಸೀದಿ ನಿರ್ಮಿಸಲಾಗಿದೆ ಎಂದು ವಾದಿಸಿದರು.

ಮುಂದುವರಿದು, ಈ ಬಗ್ಗೆ ಅಧ್ಯಯನ, ಸರ್ವೆ ಹಾಗೂ ಉತ್ಖನನ ನಡೆಸಿ 30 ದಿನಗಳ ಒಳಗಾಗಿ ಹೈಕೋರ್ಟ್‌ಗೆ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯಕ್ಕೆ ನಿರ್ದೇಶಿಸಬೇಕು. ದೇವಾಲಯದ ಆವರಣದಲ್ಲಿರುವ ಹಿಂದೂ ಸಂಸ್ಕೃತಿ ಹಾಗೂ ಪರಂಪರೆಯ ಕುರುಹುಗಳಾಗಿರುವ ಗರುಡ ಕಂಬ, ಕಲ್ಯಾಣಿ, ಸ್ತೂಪ, ಸ್ತಂಭ, ಹಿಂದೂ ದೇವ-ದೇವತೆಗಳ ಕಲ್ಲಿನ ಕೆತ್ತನೆಗಳು ಹಾಗೂ ಭೂಗತ ದೇವಸ್ಥಾನದ ಭಾಗ, ವಾಸ್ತು ಶಿಲ್ಪ, ಹೂತಿಟ್ಟ ವಿಗ್ರಹಗಳನ್ನು ಸಂರಕ್ಷಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ, ರಾಜ್ಯ ಸರ್ಕಾರ, ಜಿಲ್ಲಾಡಳಿತಕ್ಕೆ ನಿರ್ದೇಶಿಸಬೇಕು ಎಂದು ಮನವಿ ಮಾಡಿದರು.

ಅರ್ಜಿದಾರರ ಪರ ವಾದ ಆಲಿಸಿದ ನ್ಯಾಯಾಲಯವು ಇಲ್ಲಿ ಸಂರಕ್ಷಿತ ಸ್ಮಾರಕದ ಕುರಿತು ಪ್ರಶ್ನೆ ಎತ್ತಲಾಗಿದೆ. ರಿಟ್ ಅರ್ಜಿಯ ಮೂಲಕ ನ್ಯಾಯ ವ್ಯಾಪ್ತಿಯಲ್ಲಿ ಬದಲಾವಣೆ ಕಷ್ಟ ಸಾಧ್ಯ ಎಂದು ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿತು.

ಆದಾಗ್ಯೂ, ಪ್ರಕರಣದಲ್ಲಿ ಪ್ರತಿವಾದಿಗಳಾಗಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಮುಜರಾಯಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಮಂಡ್ಯ ಜಿಲ್ಲಾಧಿಕಾರಿ, ರಾಜ್ಯ ಧಾರ್ಮಿಕ ಪರಿಷತ್ , ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿ ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಜುಲೈ 11ಕ್ಕೆ ಮುಂದೂಡಿತು.