Bengaluru City Civil Court and NIA
Bengaluru City Civil Court and NIA 
ಸುದ್ದಿಗಳು

ಉಗ್ರ ಚಟುವಟಿಕೆ ಆರೋಪ: ಬೆಂಗಳೂರಿನ ಯಾಸರ್‌ ಸೇರಿ ರಾಜ್ಯದ ಏಳು ಮಂದಿ ಬಂಧಿಸಿದ ಎನ್‌ಐಎ

Bar & Bench

ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಆರೋಪದ ಮೇಲೆ ಬೆಂಗಳೂರಿನ ಆರ್‌ಟಿ ನಗರದ ನಿವಾಸಿ ಯಾಸೀರ್‌ ಹಸನ್‌ ಅಲಿಯಾಸ್‌ ಯಾಸರ್‌ ಅರಾಫತ್‌ ಹಸನ್‌ ಸೇರಿ ಏಳು ಮಂದಿಯನ್ನು ರಾಜ್ಯದ ವಿವಿಧ ಕಡೆ ಬಂಧಿಸಲಾಗಿದೆ. ಯಾಸರ್‌ ಅವರನ್ನು ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯವು ಗುರುವಾರ ಐದು ದಿನಗಳ ಕಾಲ ಟ್ರಾನ್ಸಿಟ್‌ ರಿಮ್ಯಾಂಡ್‌ಗೆ ಒಪ್ಪಿಸಿದೆ.

ಎನ್‌ಐಎ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಧೀಶರಾದ ಸಿ ಎಂ ಗಂಗಾಧರ ಅವರು ಯಾಸರ್‌ನನ್ನು ಹಾಗೂ ವಶಪಡಿಸಲಾದ ದಾಖಲೆಗಳನ್ನು ಪ್ರಕರಣದ ವ್ಯಾಪ್ತಿ ಹೊಂದಿರುವ ದೆಹಲಿಯ ಎನ್‌ಐಎ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಅನುಮತಿಸಿದರು.

ಕರ್ನಾಟಕದ ಅನೀಸ್‌ ಅಹ್ಮದ್‌, ಅಫ್ಸರ್‌ ಪಾಷಾ, ಅಬ್ದುಲ್‌ ವಾಹಿದ್‌ ಸೇಟ್‌, ಮೊಹಮ್ಮದ್‌ ಶಾಕೀಬ್‌ ಅಲಿಯಾಸ್‌ ಶಾಕಿಫ್‌, ಮುಹಮ್ಮದ್‌ ಫಾರೂಖ್‌ ಉರ್‌ ರೆಹಮಾನ್‌ ಮತ್ತು ಶಾಹೀದ್‌ ನಾಸಿರ್‌ ಅವರನ್ನೂ ಬಂಧಿಸಲಾಗಿದೆ ಎಂದು ಎನ್‌ಐಎ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕರ್ನಾಟಕ, ಕೇರಳ, ತಮಿಳುನಾಡು, ಉತ್ತರ ಪ್ರದೇಶ ಮತ್ತು ದೆಹಲಿ ಇತ್ಯಾದಿ ಕಡೆಗಳಲ್ಲಿ ಉಗ್ರ ಚಟುವಟಿಕೆಗಳನ್ನು ನಡೆಸಲು ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ ಸದಸ್ಯರು, ಪದಾಧಿಕಾರಿಗಳು ಪಿತೂರಿ ನಡೆಸಿದ್ದು, ಇದರ ಭಾಗವಾಗಿ ದೇಶ ಮತ್ತು ವಿದೇಶದಿಂದ ನಿಧಿ ಸಂಗ್ರಹಿಸುತ್ತಿದ್ದಾರೆ. ಅಲ್ಲದೇ, ಇದರ ಭಾಗವಾಗಿ ಮುಸ್ಲಿಮ್‌ ಯುವಕರನ್ನು ಐಸಿಸ್‌ನಂಥ ಉಗ್ರ ಸಂಘಟನೆಗೆ ಸೇರಿಸಲು ತರಬೇತಿ ಪ್ರಯತ್ನಿಸುತ್ತಿದ್ದಾರೆ. ಅಲ್ಲದೇ, ಸಮುದಾಯಗಳ ನಡುವೆ ಸಾಮಾಜಿಕ ಜಾಲತಾಣಗಳ ಮೂಲಕ ದ್ವೇಷ ಹರಡುವ ಪ್ರಯತ್ನ ನಡೆಸಿದ್ದು, ಕೋಮು ಗಲಭೆಗೆ ನಾಂದಿ ಹಾಡುತ್ತಿದ್ದಾರೆ ಎಂದು ಎನ್‌ಐಎ ಅರ್ಜಿಯಲ್ಲಿ ವಿವರಿಸಲಾಗಿದೆ.

ಇದರ ಭಾಗವಾಗಿ, ಗೃಹ ಇಲಾಖೆಯ ನಿರ್ದೇಶನದಂತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 120 ಮತ್ತು 153ಎ ಹಾಗೂ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಸೆಕ್ಷನ್‌ಗಳಾದ 17, 18, 18ಬಿ, 20, 22ಬಿ, 38 ಮತ್ತು 29 ಅಡಿ ದೆಹಲಿಯ ಎನ್‌ಐಎ ಠಾಣೆಯಲ್ಲಿ ಏಪ್ರಿಲ್‌ 13ರಂದು ಪ್ರಕರಣ ದಾಖಲಿಸಲಾಗಿದೆ ಎಂದು ಎನ್‌ಐಎ ಅರ್ಜಿಯಲ್ಲಿ ವಿವರಿಸಲಾಗಿದೆ.

ಎನ್‌ಐಎ, ಜಾರಿ ನಿರ್ದೇಶನಾಲಯ ಮತ್ತು ಸ್ಥಳೀಯ ಪೊಲೀಸರ ನೆರವಿನಿಂದ  ದೇಶದ 15 ರಾಜ್ಯಗಳಲ್ಲಿ ಶೋಧನ ನಡೆಸಿ ಒಟ್ಟು 45 ಮಂದಿಯನ್ನು ಬಂಧಿಸಲಾಗಿದೆ ಎಂದು ಎನ್‌ಐಎ ಹೇಳಿಕೆಯಲ್ಲಿ ತಿಳಿಸಲಾಗಿದೆ.