A1
A1
ಸುದ್ದಿಗಳು

ಮಾನವ ಕಳ್ಳಸಾಗಣೆ ಪ್ರಕರಣದ ಸಂತ್ರಸ್ತರು ದೂರು ನೀಡಿಲ್ಲ: ಸೆಕ್ಷನ್‌ 370ರಡಿಯ ಪ್ರಕರಣ ರದ್ದು ಮಾಡಿದ ಕರ್ನಾಟಕ ಹೈಕೋರ್ಟ್

Bar & Bench

ಸಂತ್ರಸ್ತರು ತಮ್ಮ ಹೇಳಿಕೆಯಲ್ಲಿ ಶೋಷಣೆ ನಡೆದಿದೆ ಎಂದು ದಾಖಲಿಸದೇ ಇರುವುದರಿಂದ ಕರ್ನಾಟಕ ಹೈಕೋರ್ಟ್‌ ಇತ್ತೀಚೆಗೆ ಮಾನವ ಕಳ್ಳಸಾಗಣೆ ಪ್ರಕರಣವೊಂದರ ಆರೋಪಿ ವಿರುದ್ಧದ ಕ್ರಿಮಿನಲ್‌ ಮೊಕದ್ದಮೆ ರದ್ದುಗೊಳಿಸಿದೆ. [ರಾಜಕುಮಾರ್‌ ಮತ್ತು ಕರ್ನಾಟಕ ಸರ್ಕಾರ ನಡುವಣ ಪ್ರಕರಣ].

ಐಪಿಸಿ ಸೆಕ್ಷನ್‌ 370ರ ಅಡಿ (ಯಾವುದೇ ವ್ಯಕ್ತಿಯನ್ನು ಗುಲಾಮರನ್ನಾಗಿ ಖರೀದಿಸುವುದು ಅಥವಾ ಮಾರಾಟ ಮಾಡುವುದು) ಆರೋಪಿಯನ್ನು ವಿಚಾರಣೆಗೆ ಒಳಪಡಿಸುವ ಸಂದೇಹ ಉದ್ಭವಿಸದು ಎಂದು ನ್ಯಾ. ಎಂ ನಾಗಪ್ರಸನ್ನ ಅವರಿದ್ದ ಪೀಠ ಹೇಳಿತು.

“ನಿಯಮದ ಆತ್ಮ ಎಂದರೆ ಅದು ಶೋಷಣೆಯಾಗಿದೆ. ಅರ್ಜಿದಾರರಿಂದ ಶೋಷಣೆ ನಡೆದಿದೆ ಎಂದು ಆರೋಪಿಸಿ ಯಾವುದೇ ಸಂತ್ರಸ್ತರು ದೂರಿನಲ್ಲಿ ಆರೋಪಿಸಿಲ್ಲ. ಅರ್ಜಿದಾರರ ಜೊತೆಗಿದ್ದ ವ್ಯಕ್ತಿಗಳ ದೂರು, ತನಿಖೆ ಮತ್ತು ಅಸ್ಥಿರ ಹೇಳಿಕೆಗಳು ವಲಸೆ ಅಧಿಕಾರಿಯ ಮನಸ್ಸಿನಲ್ಲಿ ಅನುಮಾನ ಹುಟ್ಟುಹಾಕಿದವು. ಅರ್ಜಿದಾರರಿಗೆ ಸ್ವಲ್ಪ ನಗದು ಹಸ್ತಾಂತರಿಸಿದ್ದೇವೆ ಎಂದು ಜೊತೆಗಿದ್ದವರು ಹೇಳಿದ್ದು ಸಂದೇಹ ಮೂಡಿಸಿತು. ನನ್ನ ದೃಷ್ಟಿಯಲ್ಲಿ ಮಾನವ ಕಳ್ಳಸಾಗಣೆಗಾಗಿ ಐಪಿಸಿಸೆಕ್ಷನ್ 370ರ ಅಡಿ ಶಿಕ್ಷಾರ್ಹ ಅಪರಾಧ ಎಸಗಿದ್ದಕ್ಕಾಗಿ ಅರ್ಜಿದಾರರ ವಿರುದ್ಧ ಕಾನೂನು ಕ್ರಮ ಜರುಗಿಸಲು ಇದು ಸೂಕ್ತ ಸನ್ನಿವೇಶ ಸೃಷ್ಟಿಸುವುದಿಲ್ಲ” ಎಂದು ನ್ಯಾಯಾಲಯ ಹೇಳಿತು.

ಮೂವರು ಭಾರತೀಯ ಪ್ರಜೆಗಳು ಕೌಲಾಲಂಪುರಕ್ಕೆ ಪ್ರಯಾಣಿಸಲು ಉದ್ದೇಶಿಸಿರುವುದನ್ನು ಗಮನಿಸಿ ಬೆಂಗಳೂರು ವಿಮಾನ ನಿಲ್ದಾಣದ ಸಹಾಯಕ ವಲಸೆ ಅಧಿಕಾರಿ ಅವರನ್ನು ಪ್ರಶ್ನಿಸಿದ್ದರು. ಅರ್ಜಿದಾರರು ಪ್ರವಾಸಿ ವೀಸಾದಡಿ ಉದ್ಯೋಗದ ಉದ್ದೇಶಕ್ಕಾಗಿ ತಮ್ಮನ್ನು ಅಲ್ಲಿಗೆ ಕರೆದೊಯ್ಯುತ್ತಿರುವುದಾಗಿ ಅವರು ಅಧಿಕಾರಿಗೆ ಹೇಳಿಕೆ ನೀಡಿದ್ದರು. ಒಬ್ಬ ಏಜೆಂಟ್‌ ಮೂಲಕ ತಮಗೆ ಅರ್ಜಿದಾರರ ಪರಿಚಯವಾಗಿತ್ತು. ಉದ್ಯೋಗ ಪಡೆಯುವ ಸಲುವಾಗಿ ಅರ್ಜಿದಾರರಿಗೆ ಸ್ವಲ್ಪ ಹಣ ಕೂಡ ನೀಡಿದ್ದೆವು ಎಂಬುದನ್ನು ವಿಚಾರಣೆ ವೇಳೆ ಅವರು ವಿವರಿಸಿದ್ದರು. ಇದನ್ನು ಆಧರಿಸಿ ಅರ್ಜಿದಾರರ ವಿರುದ್ಧ ಸೆಕ್ಷನ್ 370ರ ಅಡಿ ದೂರು ದಾಖಲಿಸಲಾಗಿತ್ತು.

ವಿಚಾರಣೆ ವೇಳೆ ಅರ್ಜಿದಾರರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಮುಂದಿನ ಪ್ರಕ್ರಿಯೆಗಳಿಗೆ ಅನುಮತಿ ನೀಡಿದರೆ ಅದು ಕಾನೂನಿನ ದುರುಪಯೋಗಕ್ಕೆ ಎಡೆ ಮಾಡಿಕೊಡುತ್ತದೆ ಎಂದಿತು. ಅರ್ಜಿದಾರರ ಪರ ವಕೀಲ ಎಂ ಆರ್‌ ಸಿ ಮನೋಹರ್ ಹಾಗೂ ಸರ್ಕಾರದ ಪರವಾಗಿ ಹೈಕೋರ್ಟ್ ಸರ್ಕಾರಿ ಪ್ಲೀಡರ್ ಕೆ ಪಿ ಯಶೋಧ ವಾದ ಮಂಡಿಸಿದ್ದರು.

[ಆದೇಶದ ಪ್ರತಿಯನ್ನು ಓದಿ]

Rajkumar_v__State_of_Karnataka.pdf
Preview