Justice M Nagaprasanna 
ಸುದ್ದಿಗಳು

ಬಿಡ್‌ ತೆರೆಯುವ ಮುನ್ನ ಟೆಂಡರ್‌ ಸಲ್ಲಿಕೆ ದಾಖಲೆಗಳಲ್ಲಿ ತಿದ್ದುಪಡಿಗೆ ಅವಕಾಶ; ಕಡ್ಡಾಯವಾಗಿ ಮಾಹಿತಿ ನೀಡಿ: ಹೈಕೋರ್ಟ್‌

ಕೆಟಿಪಿಪಿ ಅಧಿನಿಯಮ-2000ದ ನಿಯಮ 14ರ ಪ್ರಕಾರ ತಾಂತ್ರಿಕ ಬಿಡ್ ತೆರೆಯುವ ಮುನ್ನ, ಟೆಂಡರ್ ಕರೆದಿರುವ ಪ್ರಾಧಿಕಾರ ತನ್ನ ಸೀಮಿತ ಅಧಿಕಾರ ಬಳಸಿ ಟೆಂಡರ್ ದಾಖಲೆಗಳ ಸಲ್ಲಿಕೆಯ ನಿಯಮಗಳನ್ನು ಬದಲಾವಣೆ ಮಾಡಬಹುದಾಗಿದೆ ಎಂದಿರುವ ಹೈಕೋರ್ಟ್‌.

Bar & Bench

ಟೆಂಡರ್ ಕರೆಯುವ ಪ್ರಾಧಿಕಾರ ತಾಂತ್ರಿಕ ಬಿಡ್ ತೆರೆಯುವ ಮುನ್ನ ಟೆಂಡರ್‌ಗೆ ಸಲ್ಲಿಸಬೇಕಾದ ದಾಖಲೆಗಳಲ್ಲಿ ತಿದ್ದುಪಡಿ ಅಥವಾ ಬದಲಾವಣೆ ತರಬಹುದಾಗಿದೆ. ಆದರೆ, ತಿದ್ದುಪಡಿಯ ಬಗ್ಗೆ ಎಲ್ಲ ಟೆಂಡರ್‌ದಾರರರಿಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ.

ರಾಮನಗರ ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಪೌಷ್ಟಿಕ ಆಹಾರ ಪೂರೈಕೆಗೆ ಸಂಬಂಧಿಸಿದ ಟೆಂಡರ್‌ಗೆ ಸಲ್ಲಿಸಬೇಕಾದ ದಾಖಲೆಗಳಲ್ಲಿ ತಿದ್ದುಪಡಿ ತಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಬಿಡ್‌ದಾರ ಆರ್ ರಜತ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ವಜಾ ಮಾಡಿದೆ.

ಕರ್ನಾಟಕ ಸಾರ್ವಜನಿಕ ಖರೀದಿಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಅಧಿನಿಯಮ-2000ದ ನಿಯಮ 14ರ ಪ್ರಕಾರ ತಾಂತ್ರಿಕ ಬಿಡ್ ತೆರೆಯುವ ಮುನ್ನ, ಟೆಂಡರ್ ಕರೆದಿರುವ ಪ್ರಾಧಿಕಾರ ತನ್ನ ಸೀಮಿತ ಅಧಿಕಾರ ಬಳಸಿ ಟೆಂಡರ್ ದಾಖಲೆಗಳ ಸಲ್ಲಿಕೆಯ ನಿಯಮಗಳನ್ನು ಬದಲಾವಣೆ ಮಾಡಬಹುದಾಗಿದೆ. ಆದರೆ, ದಾಖಲೆಗಳ ತಿದ್ದುಪಡಿ ಕುರಿತು ಎಲ್ಲ ಟೆಂಡರ್‌ದಾರರಿಗೆ ಮಾಹಿತಿ ನೀಡುವುದು ಕಡ್ಡಾಯವಾಗಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.

ಹಾಲಿ ಪ್ರಕರಣದಲ್ಲಿ ಬಿಡ್ ಸಲ್ಲಿಕೆಯ ಕೊನೆಯ ದಿನಾಂಕಕ್ಕೂ ಸಾಕಷ್ಟು ಮೊದಲೇ ತಿದ್ದುಪಡಿ ಕುರಿತು ಅಧಿಸೂಚನೆ ಹೊರಡಿಸಲಾಗಿದೆ. ಆದ್ದರಿಂದ, ಆಟದ ನಂತರ ನಿಯಮ ಬದಲಾಯಿಸಲಾಗಿದೆ ಎಂಬ ಅರ್ಜಿದಾರರ ವಾದ ಒಪ್ಪಲಾಗದು. ತಿದ್ದುಪಡಿ ಆದೇಶದಿಂದಾಗಿ ಅರ್ಜಿದಾರರು ಟೆಂಡರ್‌ಗೆ ಅರ್ಹತೆ ಕಳೆದುಕೊಂಡು, ಪ್ರಕ್ರಿಯೆಯಿಂದ ಹೊರಗುಳಿದರೆಂಬ ಮಾತ್ರಕ್ಕೆ ತಿದ್ದುಪಡಿ ಅಧಿಸೂಚನೆಯೇ ಅಕ್ರಮ ಎನ್ನಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಪೀಠ, ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ರಾಮನಗರ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಿಗೆ ಆಹಾರ ಪೂರೈಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 2022ರ ಮಾರ್ಚ್‌ 31ರಂದು ಟೆಂಡರ್ ಕರೆದಿತ್ತು. ಆಗ ಒಂದು ವರ್ಷದ ಜಿಎಸ್‌ಟಿ ಸರ್ಟಿಫಿಕೇಟ್ ನೀಡಬೇಕೆಂಬ ಟೆಂಡರ್ ನಿಯಮಾವಳಿಯಿತ್ತು. 2021ರಿಂದ ರಾಮನಗರ ಜಿಲ್ಲಾಸ್ಪತ್ರೆಗೆ ಸಿದ್ಧ ಆಹಾರ ಪೂರೈಸುತ್ತಿದ್ದ ಆರ್ ಆರ್ ಎಂಟರ್‌ಪ್ರೈಸಸ್‌ನ ಮಾಲೀಕ ರಜತ್ ಸಹ ಬಿಡ್ ಮಾಡಿದ್ದರು. ಆದರೆ, ಏಪ್ರಿಲ್‌ 8ರಂದು ಟೆಂಡರ್ ದಾಖಲೆಗಳ ತಿದ್ದುಪಡಿ ಆದೇಶ ಹೊರಡಿಸಿದ್ದ ಸರ್ಕಾರ, ಮೂರು ವರ್ಷದ ಜಿಎಸ್‌ಟಿ ಸರ್ಟಿಫಿಕೇಟ್ ಕಡ್ಡಾಯಗೊಳಿಸಿತ್ತು. ಇದರಿಂದ, ಅರ್ಜಿದಾರರು ಅರ್ಹತೆ ಕಳೆದುಕೊಂಡಿದ್ದರು. ದಾಖಲೆಗಳ ತಿದ್ದುಪಡಿ ಪ್ರಶ್ನಿಸಿ ರಜತ್ ಹೈಕೋರ್ಟ್ ಮೆಟ್ಟಿಲೇರಿದ್ದರು.