High Court of Karnataka
High Court of Karnataka 
ಸುದ್ದಿಗಳು

ಗ್ರಾಮ ಪಂಚಾಯಿತಿ ಆಸ್ತಿ ತೆರಿಗೆ ಸಂಗ್ರಹ ತಿದ್ದುಪಡಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

Bar & Bench

ಗ್ರಾಮ ಪಂಚಾಯಿತಿಗಳು ಸ್ಥಳೀಯವಾಗಿ ಆಸ್ತಿ ತೆರಿಗೆ ವಿಧಿಸುವ ನಿಟ್ಟಿನಲ್ಲಿ ಕರ್ನಾಟಕ ಪಂಚಾಯತ್‌ ರಾಜ್‌ ಕಾಯಿದೆ–1993ರ ಷೆಡ್ಯೂಲ್‌ 4ಕ್ಕೆ ತರಲಾಗಿರುವ ತಿದ್ದುಪಡಿಯ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ನೋಟಿಸ್‌ ಜಾರಿ ಮಾಡಿದೆ.

ಮಾರತ್ತಹಳ್ಳಿಯ ಪ್ರಿಯಾ ಸುಂದರೇಶನ್‌ ಸೇರಿದಂತೆ ಒಟ್ಟು ಆರು ಜನರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಆರ್ ದೇವದಾಸ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಆನೇಕಲ್‌ ತಾಲ್ಲೂಕು ಗ್ರಾಮ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಪ್ರತಿವಾದಿಗಳಿಗೆ ಆಕ್ಷೇಪಣೆ ಸಲ್ಲಿಸಲು ನಿರ್ದೇಶಿಸಿದೆ.

ಆನೇಕಲ್ ತಾಲ್ಲೂಕು ಗ್ರಾಮ ಪಂಚಾಯಿತಿ ಸಿಇಒ, 2015–16ರ ಮೌಲ್ಯಮಾಪನದ ಅನುಸಾರ ಹೊಸ ತೆರಿಗೆಗೆ ಮುಂದಾದರೆ ಅದು ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಆದೇಶಿಸಿ, ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿತು. ಅರ್ಜಿದಾರರ ಪರ ಹಿರಿಯ ವಕೀಲ ಎಚ್‌ ಎನ್‌ ಶಶಿಧರ ವಾದಿಸಿದರು.

ಗ್ರಾಮ ಪಂಚಾಯಿತಿಗಳು ತೆರಿಗೆ ಸಂಗ್ರಹಿಸಲು ನೀಡಲಾಗಿರುವ ಅಧಿಕಾರ ನ್ಯಾಯಯುತವಾಗಿಲ್ಲ. ಬೆಂಗಳೂರು ಮಹಾನಗರದ ಆಸುಪಾಸಿನಲ್ಲಿರುವ ಗ್ರಾಮ ಪಂಚಾಯಿತಿಗಳು ಖಾಲಿ ನಿವೇಶನಗಳಿಗೆ ವಿಧಿಸಲಾಗುತ್ತಿರುವ ತೆರಿಗೆ ಮತ್ತು ಶುಲ್ಕವು, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ಖಾಸಗಿ ನಿವೇಶನಗಳಿಗೆ ವಿಧಿಸಲಾಗುತ್ತಿರುವ ತೆರಿಗೆಗಿಂತಲೂ ಹತ್ತು ಪಟ್ಟು ಹೆಚ್ಚಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ. ಅರ್ಜಿದಾರರ ಪರ ವಕೀಲ ಎಚ್‌ ಎಸ್ ಸುಹಾಸ್‌ ವಕಾಲತ್ತು ವಹಿಸಿದ್ದಾರೆ.

ಕರ್ನಾಟಕ ಪಂಚಾಯತ್‌ ರಾಜ್‌ ಕಾಯಿದೆ–1993ರ ಷೆಡ್ಯೂಲ್‌ 4ಕ್ಕೆ ತರಲಾಗಿರುವ ತಿದ್ದುಪಡಿ ಅಸಾಂವಿಧಾನಿಕವಾಗಿದ್ದು, ಈ ನಿಟ್ಟಿನಲ್ಲಿ 2016ರ ನವೆಂಬರ್‌ 19ರಂದು ಪಂಚಾಯತ್‌ ರಾಜ್‌ ಇಲಾಖೆ ಹೊರಡಿಸಿರುವ ಸುತ್ತೋಲೆಯನ್ನು ರದ್ದುಗೊಳಿಸಬೇಕು. ಅಂತೆಯೇ, ಈ ದಿಸೆಯಲ್ಲಿ ಗ್ರಾಮ ಪಂಚಾಯತ್‌ ತೆರಿಗೆ ಮತ್ತು ಶುಲ್ಕಕ್ಕೆ ಸಂಬಂಧಿಸಿದಂತೆ 2020ರ ಅಕ್ಟೋಬರ್ 27ರಂದು ಆನೇಕಲ್‌ ತಾಲ್ಲೂಕಿನ ಮುತ್ತಾನಲ್ಲೂರು ಗ್ರಾಮ ಪಂಚಾಯಿತಿ ಕೈಗೊಂಡಿರುವ ನಿರ್ಣಯ ಏಕಪಕ್ಷೀಯವಾಗಿದೆ. ಆದ್ದರಿಂದ, ಇದನ್ನು ವಜಾಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.