ಪುಷ್ಪಾ-2 ಪ್ರೀಮಿಯರ್ ಶೋ ನೋಡಲು ಚಿತ್ರಮಂದಿರಕ್ಕೆ ತೆರಳಿದ್ದಾಗ ಸಂಭವಿಸಿದ್ದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ ಪ್ರಕರಣದಲ್ಲಿ ತೆಲುಗು ಚಿತ್ರ ನಟ ಅಲ್ಲು ಅರ್ಜುನ್‌ಗೆ ತೆಲಂಗಾಣ ನ್ಯಾಯಾಲಯ ಶುಕ್ರವಾರ ನಿಯತ ಜಾಮೀನು ಮಂಜೂರು ಮಾಡಿದೆ.
ನಾಮಪಲ್ಲಿಯ ಹೆಚ್ಚುವರಿ ಮೆಟ್ರೊಪಾಲಿಟನ್ ಸತ್ರ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದು ಅಲ್ಲು ಅರ್ಜುನ್ ₹50 ಸಾವಿರ ಮೌಲ್ಯದ ವೈಯಕ್ತಿಕ ಬಾಂಡ್ ಮತ್ತು ಇಬ್ಬರ ಭದ್ರತೆ ಒದಗಿಸಬೇಕು ಎಂದು ಆದೇಶಿಸಿದ್ದಾರೆ. ಅಲ್ಲದೆ, ಎರಡು ತಿಂಗಳ ಕಾಲ ಪ್ರತಿ ಭಾನುವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರ ಒಳಗೆ ಅಥವಾ ಆರೋಪ ಪಟ್ಟಿ ಸಲ್ಲಿಸುವವರೆಗೆ ಚಿಕ್ಕಡಪಲ್ಲಿ ಠಾಣೆಗೆ ಹಾಜರಾಗಬೇಕು. ತನಿಖಾಧಿಕಾರಿಗೆ ಸಹಕರಿಸಬೇಕು. ಸಾಕ್ಷ್ಯ ನಾಶಕ್ಕೆ ಯತ್ನಿಸಬಾರದು. ನ್ಯಾಯಾಲಯದ ಅನುಮತಿ ಇಲ್ಲದೇ ದೇಶ ತೊರೆಯುವಂತಿಲ್ಲ ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.
ಇದಕ್ಕೂ ಮುನ್ನ, ಅಲ್ಲು ಅರ್ಜುನ್‌ಗೆ ತೆಲಂಗಾಣ ಹೈಕೋರ್ಟ್ ನಾಲ್ಕು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಈ ಸಂದರ್ಭದಲ್ಲಿ ಹೈಕೋರ್ಟ್ ಮೇಲ್ನೋಟಕ್ಕೆ ಅಲ್ಲು ಅರ್ಜುನ್ ಅವರನ್ನು ಪ್ರಕರಣದಲ್ಲಿ ಹೊಣೆಗಾರರನ್ನಾಗಿ ಮಾಡಲಾಗದು ಎಂದಿತ್ತು.
ಡಿಸೆಂಬರ್ 4ರಂದು ಸಂಧ್ಯಾ ಚಿತ್ರಮಂದಿರದಲ್ಲಿ ಸಂಭವಿಸಿದ್ದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್, ಚಿತ್ರಮಂದಿರದ ಮಾಲೀಕರು ಮತ್ತು ಆಡಳಿತ ಮಂಡಳಿಯ ವಿರುದ್ಧ ಪ್ರಕರಣ ದಾಖಲಾಗಿದೆ.