Mohammed Zubair
Mohammed Zubair  Twitter
ಸುದ್ದಿಗಳು

ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಜುಬೇರ್ ಅವರನ್ನು ಒಂದು ದಿನದ ಕಾಲ ಪೊಲೀಸ್ ವಶಕ್ಕೆ ನೀಡಿದ ದೆಹಲಿ ನ್ಯಾಯಾಲಯ

Bar & Bench

ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಬಿತ್ತಿದ ಆರೋಪದ ಮೇಲೆ ಸುಳ್ಳು ಸುದ್ದಿಗಳನ್ನು ಬೆಳಕಿಗೆ ತರುವ ಜಾಲತಾಣ ʼಆಲ್ಟ್ ನ್ಯೂಸ್ʼನ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೈರ್ ಅವರನ್ನು ಬುರಾರಿಯಲ್ಲಿರುವ ದೆಹಲಿ ನ್ಯಾಯಾಲಯ ಸೋಮವಾರ ಒಂದು ದಿನದ ಮಟ್ಟಿಗೆ ಪೊಲೀಸ್‌ ವಶಕ್ಕೆ ಒಪ್ಪಿಸಿದೆ.

ಡ್ಯೂಟಿ ಮ್ಯಾಜಿಸ್ಟ್ರೇಟ್ ಅಜಯ್ ನರ್ವಾಲ್ ಅವರು ಜುಬೈರ್ ಅವರನ್ನು ಒಂದು ದಿನದ ಮಟ್ಟಿಗೆ ಪೊಲೀಸ್ ವಶಕ್ಕೆ ನೀಡಿದ್ದು ಕಸ್ಟಡಿ ಅವಧಿ ಮುಗಿದ ನಂತರ ನಾಳೆ ಅವರನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.

ಜುಬೈರ್ ಅವರ 2018ರಲ್ಲಿ ಮಾಡಿದ್ದ ಒಂದು ಟ್ವೀಟ್‌ಗಾಗಿ ಐಪಿಸಿ ಸೆಕ್ಷನ್ 153 ಎ (ಧಾರ್ಮಿಕ ಗುಂಪುಗಳ ನಡುವೆ ದ್ವೇಷಕ್ಕೆ ಕುಮ್ಮಕ್ಕು) ಮತ್ತು 295 ಎ (ಧಾರ್ಮಿಕ ಭಾವನೆಗಳ ನಿಂದನೆ) ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.

ನಿರ್ದಿಷ್ಟ ಧರ್ಮದ ದೇವರನ್ನು ಉದ್ದೇಶಪೂರ್ವಕವಾಗಿ ಅವಮಾನಿಸುವ ಸಲುವಾಗಿ ಜುಬೈರ್ ಆಕ್ಷೇಪಾರ್ಹ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ ಎಂದು ಟ್ವಿಟರ್ ಖಾತೆದಾರರೊಬ್ಬರು ನೀಡಿದ್ದ ದೂರಿನ ಆಧಾರದ ಮೇಲೆ ಜುಬೈರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ವಿಚಾರಣೆ ವೇಳೆ ಜುಬೈರ್ ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಕಾರಣಕ್ಕೆ ಪೊಲೀಸರು 7 ದಿನಗಳ ಕಸ್ಟಡಿಗೆ ಕೋರಿದ್ದರು. ತನಿಖೆಗೆ ಸಹಕರಿಸುತ್ತಿರುವುದರಿಂದ ಪೊಲೀಸರು ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಬಾರದು ಎಂದು ಜುಬೈರ್‌ ಪರ ವಕೀಲರಾದ ಸೌತಿಕ್‌ ಬ್ಯಾನರ್ಜಿ ಮತ್ತು ಕವಲ್‌ಪ್ರೀತ್‌ ಕೌರ್‌ ವಾದಿಸಿದ್ದರು.