Senior Advocate AM Singhvi 
ಸುದ್ದಿಗಳು

ನ್ಯಾಯಮೂರ್ತಿಗಳ ಸಂಬಂಧಿಕರಿಗೇ ನ್ಯಾಯಮೂರ್ತಿ ಹುದ್ದೆ: ಕೊಲೊಜಿಯಂ ವಿರೋಧಕ್ಕೆ ದನಿಗೂಡಿಸಿದ ಎ ಎಂ ಸಿಂಘ್ವಿ

ಹಾಲಿ ಅಥವಾ ಮಾಜಿ ನ್ಯಾಯಾಧೀಶರ ನಿಕಟ ಸಂಬಂಧಿಗಳನ್ನೇ ನ್ಯಾಯಾಧೀಶರಾಗಿ ನೇಮಕ ಮಾಡಿಕೊಳ್ಳುವುದರ ವಿರುದ್ಧ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಕೊಲಿಜಿಯಂ ನಿರ್ಧಾರ ತೆಗೆದುಕೊಂಡಿತ್ತು.

Bar & Bench

ನ್ಯಾಯಮೂರ್ತಿಗಳ ಸಂಬಂಧಿಕರಿಗೇ ನ್ಯಾಯಮೂರ್ತಿ ಹುದ್ದೆ ನೀಡುವ ಪ್ರಕ್ರಿಯೆಯಲ್ಲಿ ಸುಧಾರಣೆ ತರುವ ಸುಪ್ರೀಂ ಕೋರ್ಟ್‌ ಕೊಲಿಜಿಯಂನ ಈಚಿನ ನಿರ್ಧಾರವನ್ನು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಶ್ಲಾಘಿಸಿದ್ದಾರೆ.

ಹಾಲಿ ಅಥವಾ ಮಾಜಿ ನ್ಯಾಯಮೂರ್ತಿಗಳ ನಿಕಟ ಸಂಬಂಧಿಗಳನ್ನು ಹೈಕೋರ್ಟ್‌ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡುವಂತಹ ಕ್ರಮದ ವಿರುದ್ಧ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಕೊಲಿಜಿಯಂ ನಿರ್ಧಾರ ತೆಗೆದುಕೊಂಡಿತ್ತು.

ಪದೋನ್ನತಿ ಸಂಬಂಧ ವಿವಿಧ ಹೈಕೋರ್ಟ್‌ಗಳು ಶಿಫಾರಸು ಮಾಡಿದ ಅಭ್ಯರ್ಥಿಗಳೊಂದಿಗೆ ಕೊಲಿಜಿಯಂ ಸಂವಹನ ನಡೆಸುತ್ತಿರುವುದೂ ಮತ್ತೊಂದು ಬೆಳವಣಿಗೆಯಾಗಿದೆ.

ಈ ಎರಡೂ ಪ್ರಸ್ತಾಪಗಳು ಆಮೂಲಾಗ್ರವಾಗಿದ್ದು ಸೂಕ್ತವಾಗಿವೆ. ಅತಿ ಬೇಗನೆ ಇವನ್ನು ಕಾರ್ಯಗತಗೊಳಿಸಬೇಕು ಎಂದು ಸಂಸತ್‌ ಸದಸ್ಯರೂ ಆಗಿರುವ ಸಿಂಘ್ವಿ ಟ್ವೀಟ್‌ ಮಾಡಿದ್ದಾರೆ.

ಸಿಂಘ್ವಿ ಅವರ ಹೇಳಿಕೆಯ ಪ್ರಮುಖಾಂಶಗಳು

  • ನ್ಯಾಯಾಂಗ ನೇಮಕಾತಿ ಮೂಲತಃ ಭಾವಿಸಿದ್ದಕ್ಕಿಂತ ಹೆಚ್ಚು ಅಸ್ಪಷ್ಟವಾಗಿದ್ದು, ಅಷ್ಟೇನೂ ವಸ್ತುನಿಷ್ಠವಾಗಿಲ್ಲ.

  • ಸ್ವಜನ ಪಕ್ಷಪಾತ, ವಂಶಪಾರಂಪರ್ಯತೆ ಇತ್ಯಾದಿಗಳು ನ್ಯಾಯಾಧೀಶರಾಗಲು ಬಯಸುವ ಉಳಿದವರನ್ನು ನಿರಾಶೆಗೊಳಿಸುತ್ತಿವೆ.

  • ಇಂತಹ ನೇಮಕಾತಿ ನ್ಯಾಯಾಂಗಕ್ಕೆ ಅಪಖ್ಯಾತಿ ತರುತ್ತಿದೆ.

  • ನ್ಯಾಯಮೂರ್ತಿಗಳ ಸಂಬಂಧಿಕರು ಅದೇ ಹೈಕೋರ್ಟ್‌ನಲ್ಲಿ ಪ್ರಾಕ್ಟೀಸ್‌ ಮಾಡುವಂತಹ ಚಟುವಟಿಕೆಗಳನ್ನು ನಿರ್ಬಂಧಿಸಲು ಸಾಧ್ಯವಾಗುತ್ತಿಲ್ಲ.

  • ಸುಧಾರಣೆಯ ಅಪೇಕ್ಷಣೆಗಿಂತಲೂ ವ್ಯವಸ್ಥೆ ಬಲಶಾಲಿಯಾಗಿದೆ ಎಂಬುದು ಪದೇ ಪದೇ ಸಾಬೀತಾಗಿದೆ.

  • ಪ್ರಾಚೀನ ಕಾಲದಲ್ಲಿ ಕೆಲವು ಸುಲ್ತಾನರು ನಿಜವಾದ ಸಮಸ್ಯೆಗಳನ್ನು ಅರಿಯಲು ಮಾಡುತ್ತಿದ್ದಂತೆ, ಕೊಲಿಜಿಯಂ ನ್ಯಾಯಮೂರ್ತಿಗಳು ವೇಷ ಮರೆಸಿಕೊಂಡು ನ್ಯಾಯಮೂರ್ತಿ ಹುದ್ದೆಯ ಅಭ್ಯರ್ಥಿಗಳು ವಿಚಾರಣೆ ನಡೆಸುವ ನ್ಯಾಯಾಲಯದ ಕೊಠಡಿಗಳಲ್ಲಿ ಕೂತು ಮೌಲ್ಯಮಾಪನ ಮಾಡಬೇಕು.

  •  ಪದೋನ್ನತಿ ಸಂಬಂಧ ವಿವಿಧ ಹೈಕೋರ್ಟ್‌ಗಳು ಶಿಫಾರಸು ಮಾಡಿದ ಅಭ್ಯರ್ಥಿಗಳೊಂದಿಗೆ ಕೊಲಿಜಿಯಂ ಸಂವಹನ  ನಡೆಸುತ್ತಿರುವುದು ಸ್ವಾಗತಾರ್ಹ.

  • ಅಭ್ಯರ್ಥಿಗಳ ಸಿವಿಗೂ ವಾಸ್ತವಿಕತೆಗೂ, ಕಾಗದದ ಮೇಲಿನ ಮೌಲ್ಯಮಾಪನಕ್ಕೂ ಅಭ್ಯರ್ಥಿಗಳ ನ್ಯಾಯಾಲಯ ಕ್ಷಮತೆಗೂ ಇರುವ ವ್ಯತ್ಯಾಸ ಕಂಡು ಸಖೇದಾಶ್ಚರ್ಯವಾಗಿದೆ.

  • ಅಭ್ಯರ್ಥಿಗಳ ಬಗ್ಗೆ ನಡೆಸುತ್ತಿರುವ ಸಂದರ್ಶನಗಳು ಉತ್ತಮವಾಗಿಲ್ಲ. ಆದರೆ ಮಾರುವೇಷದಲ್ಲಿ ದಿಢೀರನೆ ನಡೆಸುವ ಮೌಲ್ಯಮಾಪನ ಸಂಪೂರ್ಣ ಅವಾಸ್ತವಿಕವಲ್ಲ.

ಪ್ರಸ್ತುತ ಕೊಲಿಜಿಯಂನಲ್ಲಿ ಸಿಜೆಐ ಖನ್ನಾ ಅವರು ಮಾತ್ರವಲ್ಲದೆ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ಸೂರ್ಯ ಕಾಂತ್, ಹೃಷಿಕೇಶ್ ರಾಯ್ ಹಾಗೂ ಎ ಎಸ್‌ ಓಕಾ ಸದಸ್ಯರಾಗಿದ್ದಾರೆ.