ಫ್ಯೂಚರ್ ಗ್ರೂಪ್ ಕಂಪೆನಿಗಳು ಮತ್ತು ಕಿಶೋರ್ ಬಿಯಾನಿ ಅವರ ಆಸ್ತಿ ಜಪ್ತಿ ಮಾಡುವಂತೆ ನಿರ್ದೇಶಿಸಿ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ದೆಹಲಿ ಹೈಕೋರ್ಟ್‌ನ ವಿಭಾಗೀಯ ಪೀಠ ಮಾರ್ಚ್ 22 ರಂದು ತಡೆಹಿಡಿದಿತ್ತು. ಇದನ್ನು ಪ್ರಶ್ನಿಸಿ ಅಮೆಜಾನ್ ಸುಪ್ರೀಂಕೋರ್ಟ್ ಮೊರೆ ಹೋಗಿದೆ.
ರಿಲಯನ್ಸ್‌ನೊಂದಿಗಿನ ಅಮೆಜಾನ್ ಒಪ್ಪಂದದ ವಿರುದ್ಧ ತುರ್ತು ತೀರ್ಪು ಜಾರಿಗೊಳಿಸುವ ನಿಟ್ಟಿನಲ್ಲಿ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿತ್ತು. ಫ್ಯೂಚರ್ ರಿಟೇಲ್, ಫ್ಯೂಚರ್ ಕೂಪನ್ಸ್, ಕಿಶೋರ್ ಬಿಯಾನಿ ಹಾಗೂ ಇತರ ಪ್ರವರ್ತಕರು, ನಿರ್ದೇಶಕರು ತುರ್ತು ಪರಿಹಾರ ತೀರ್ಪನ್ನು ಉಲ್ಲಂಘಿಸಿದ್ದಾರೆ ಎಂದು ನ್ಯಾಯಮೂರ್ತಿ ಜೆ.ಆರ್. ಮಿಧಾ ಅವರಿದ್ದ ಏಕ ಸದಸ್ಯ ಪೀಠ ಅಭಿಪ್ರಾಯಪಟ್ಟಿತ್ತು. ಮುಂದುವರೆದು, ಫ್ಯೂಚರ್ ಗ್ರೂಪ್ ಕಂಪನಿಗಳು, ಬಿಯಾನಿ ಮತ್ತು ಇತರ ಪ್ರತಿವಾದಿ ಪಕ್ಷಗಳಿಗೆ 20 ಲಕ್ಷ ರೂ ದಂಡ ವಿಧಿಸಲಾಗಿತ್ತು.
ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಫ್ಯೂಚರ್ ಸಮೂಹ ಕಂಪೆನಿಗಳು ದೆಹಲಿ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದವು. ಏಕಸದಸ್ಯ ಪೀಠದ ಆದೇಶವನ್ನು ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರಿದ್ದ ವಿಭಾಗೀಯ ಪೀಠ ತಡೆಹಿಡಿದಿತ್ತು. ಇದು ಸುಪ್ರೀಂಕೋರ್ಟ್ ಮೆಟ್ಟಿಲೇರುವಂತೆ ಅಮೆಜಾನ್ ಕಂಪೆನಿಯನ್ನು ಪ್ರೇರೇಪಿಸಿದೆ.
ಫ್ಯೂಚರ್- ರಿಲಯನ್ಸ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿಗೆ ಆದೇಶಿಸಿ ಏಕಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ಸಂಬಂಧಿಸಿದಂತೆ ಮಾರ್ಚ್ 18 ರಂದು ಮತ್ತೊಂದು ವಿಭಾಗೀಯ ಪೀಠ ನೀಡಿದ್ದ ಆದೇಶವನ್ನು ವಿಭಾಗೀಯ ಪೀಠ ತಪ್ಪಾಗಿ ಅವಲಂಬಿಸಿದೆ ಎಂದು ಅಮೆಜಾನ್ ತನ್ನ ಅರ್ಜಿಯಲ್ಲಿ ತಿಳಿಸಿದೆ. ಮಾರ್ಚ್ 18 ರಂದು ನೀಡಿದ ಆದೇಶದಲ್ಲಿ ವಿಭಾಗೀಯ ಪೀಠ ಮಾಡಿದ್ದ ಅವಲೋಕನಗಳು ಫ್ಯೂಚರ್ ರಿಟೇಲ್‌ಗೆ ಸಂಬಂಧಿಸದಂತೆ ಇವೆಯೇ ವಿನಾ ಉಳಿದವರ ಬಗ್ಗೆ ಇಲ್ಲ ಎಂದು ಅಮೆಜಾನ್ ವಾದಿಸಿದೆ.