Supreme Court, Amazon v Future  
ಸುದ್ದಿಗಳು

[ಅಮೆಜಾನ್ ಮತ್ತು ಫ್ಯೂಚರ್ ನಡುವಿನ ವ್ಯಾಜ್ಯ] ಉಪದ್ರವ ನೀಡಲೆಂದೇ ಇಷ್ಟೊಂದು ದಾಖಲೆ ಸಲ್ಲಿಸಿದ್ದೀರಾ? ಸುಪ್ರೀಂ ಕಿಡಿ

"ಹೈಕೋರ್ಟ್ ಆದೇಶದ ಬಗ್ಗೆ ನಾನು ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ನಾವು ಹೇಳುವುದು ಒಂದು ಜನ ಅರ್ಥ ಮಾಡಿಕೊಳ್ಳುವುದು ಇನ್ನೊಂದು. ಇದು ಭಿನ್ನ ಪ್ರಕ್ರಿಯೆ” ಎಂದು ಹೇಳಿದ ಸಿಜೆಐ.

Bar & Bench

ತನ್ನ ಮುಂದೆ ಬಾಕಿ ಇರುವ ಅಮೆಜಾನ್-ಫ್ಯೂಚರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿತಿಮೀರಿದ ದಾಖಲೆಗಳನ್ನು ಸಲ್ಲಿಸಿರುವ ಪಕ್ಷಕಾರರ ಬಗ್ಗೆ ಸುಪ್ರೀಂ ಕೋರ್ಟ್ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿತು (ಫ್ಯೂಚರ್ ಕೂಪನ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಅಮೆಜಾನ್‌ ಡಾಟ್‌ ಕಾಮ್‌ ಎನ್‌ ಇನ್ವೆಸ್ಟ್‌ಮೆಂಟ್ ಹೋಲ್ಡಿಂಗ್ಸ್ ನಡುವಣ ಪ್ರಕರಣ).

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ಹಿಮಾ ಕೊಹ್ಲಿ ಅವರ ಪೀಠ, "...ಇಷ್ಟೆಲ್ಲಾ (ದಾಖಲೆಗಳನ್ನು) ಸಲ್ಲಿಸುವುದರಿಂದ ಏನು ಪ್ರಯೋಜನ? ಇಷ್ಟು ಸಂಪುಟಗಳನ್ನು ಸಲ್ಲಿಸಿ ಏನು ಉಪಯೋಗ? ನ್ಯಾಯಮೂರ್ತಿಗಳಿಗೆ ಕಿರುಕುಳ ನೀಡಲೆಂದೇ? ಇಲ್ಲಿ ಅಂತಹ ವಿಷಯವೇನಿದೆ?” ಎಂದು ಪ್ರಶ್ನಿಸಿತು.

ದೆಹಲಿ ಹೈಕೋರ್ಟ್‌ನಲ್ಲಿರುವ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ತಡೆ ನೀಡಿರುವ ಸುಪ್ರೀಂ ಕೋರ್ಟ್ ಆದೇಶದ ಸ್ಪಷ್ಟೀಕರಣ ಕೋರಿ ಅಮೆಜಾನ್ ಸಲ್ಲಿಸಿದ ಮಧ್ಯಸ್ಥಿಕೆ ಅರ್ಜಿಯನ್ನು ನ್ಯಾಯಾಲಯವು ವಿಚಾರಣೆ ನಡೆಸಿತು. ಇದೇ ವೇಳೆ ಪ್ರತ್ಯೇಕ ವಿಶೇಷ ಅನುಮತಿ ಅರ್ಜಿ ಸಲ್ಲಿಸುವಂತೆ ಅಮೆಜಾನ್ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಗೋಪಾಲ್ ಸುಬ್ರಮಣಿಯಂ ಅವರಿಗೆ ಸೂಚಿಸಿದ ಸಿಜೆಐ "ಹೈಕೋರ್ಟ್ ಆದೇಶದ ಬಗ್ಗೆ ನಾನು ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ನಾವು ಹೇಳುವುದು ಒಂದು, ಜನ ಅರ್ಥ ಮಾಡಿಕೊಳ್ಳುವುದು ಇನ್ನೊಂದು. ಇದು ಭಿನ್ನ ಪ್ರಕ್ರಿಯೆ” ಎಂದರು.

ಒಂದು ಹಂತದಲ್ಲಿ ಅಮೆಜಾನ್ ಪರ ಹಾಜರಾದ ಮತ್ತೊಬ್ಬ ಹಿರಿಯ ನ್ಯಾಯವಾದಿ ನೀರಜ್ ಕಿಶನ್ ಕೌಲ್ ಅವರು ಅರ್ಜಿ ಹಿಂಪಡೆದು ಹೈಕೋರ್ಟ್‌ ಮೊರೆ ಹೋಗಲು ಒಪ್ಪಿದರು. ಕೊನೆಗೆ ನ್ಯಾಯಾಲಯ ಕನಿಷ್ಠ ಸಂಖ್ಯೆಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಸೂಚಿಸಿತು. ಡಿಸೆಂಬರ್ 8ರಂದು ಮತ್ತೆ ಪ್ರಕರಣ ಕೈಗೆತ್ತಿಕೊಳ್ಳಲು ಅದು ನಿರ್ಧರಿಸಿತು.

ಫ್ಯೂಚರ್ ಗ್ರೂಪ್ ತನ್ನ ಬಿಡಿ ಮಾರಾಟದ ವ್ಯವಹಾರಕ್ಕೆ ಸಂಬಂಧಿಸಿದ ಆಸ್ತಿಗಳನ್ನು (ರೀಟೇಲ್‌ ಅಸೆಟ್ಸ್‌) ರಿಲಯನ್ಸ್ ರಿಟೇಲ್‌ಗೆ ಮಾರಾಟ ಮಾಡುವ ಒಪ್ಪಂದವನ್ನು ತಡೆಹಿಡಿದ ದೆಹಲಿ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶದ ವಿರುದ್ಧ ಫ್ಯೂಚರ್ ಕೂಪನ್ಸ್‌ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.