Ambedkar and Karnataka HC 
ಸುದ್ದಿಗಳು

ಅಂಬೇಡ್ಕರ್‌ ಪುತ್ಥಳಿ ಸ್ಥಳಾಂತರ ವಿವಾದ: ಪ್ರಕರಣದಿಂದ ಹಿಂದೆ ಸರಿದ ಸಂಘಟನೆಯ ಅಧ್ಯಕ್ಷರ ಪರ ವಕೀಲ

ಕಚೇರಿ ವರದಿಯ ಪ್ರಕಾರ ರೇವಣ ಸಿದ್ಧಪ್ಪ ಅವರಿಗೆ ಸರ್ವೀಸ್‌ ನೋಟಿಸ್‌ ಜಾರಿ ಮಾಡಲಾಗಿಲ್ಲ. ಹೊಸ ವರದಿ ಸಲ್ಲಿಸಲು ಕಚೇರಿಗೆ ಸೂಚಿಸಲಾಗಿದೆ ಎಂದು ಪೀಠ ಹೇಳಿದ್ದು, ವಿಚಾರಣೆಯನ್ನು ಫೆಬ್ರವರಿ 1ಕ್ಕೆ ಮುಂದೂಡಿದೆ.

Bar & Bench

ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಹಿರೆಮೇಗಲಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕ ಸ್ಥಳದಲ್ಲಿ ಕಾನೂನುಬಾಹಿರವಾಗಿ ಡಾ. ಅಂಬೇಡ್ಕರ್‌ ಪುತ್ಥಳಿ ನಿರ್ಮಿಸಿದ್ದನ್ನು ನಿರ್ದಿಷ್ಟ ಕಾಲಮಿತಿಯಲ್ಲಿ ಸ್ಥಳಾಂತರಿಸಲು ವಿಫಲವಾಗಿರುವ ಹತ್ತನೇ ಪ್ರತಿವಾದಿಯಾದ ಡಾ. ಬಿ ಆರ್‌ ಅಂಬೇಡ್ಕರ್‌ ಯುವ ಸಂಘಟನೆ ಅಧ್ಯಕ್ಷ ರೇವಣ್ಣ ಸಿದ್ದಪ್ಪ ಅವರನ್ನು ಪ್ರತಿನಿಧಿಸಿದ್ದ ವಕೀಲ ಅದಿತ್‌ ಚಂದನಗೌಡರ್‌ ಪ್ರಕರಣದಿಂದ ಹಿಂದೆ ಸರಿಯಲು ಕರ್ನಾಟಕ ಹೈಕೋರ್ಟ್‌ ಮಂಗಳವಾರ ಅನುಮತಿಸಿದೆ.

ಹಿರೇಮೇಗಲಗೆರೆ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ (ಪಿಡಿಒ) ಆದೇಶವನ್ನು ಆಧರಿಸಿ ನೀಲಪ್ಪ ಮತ್ತು ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

“ರೇವಣ ಸಿದ್ದಪ್ಪ ಅವರನ್ನು ಪ್ರತಿನಿಧಿಸಿದ್ದ ವಕೀಲ ಅದಿತ್‌ ಚಂದನಗೌಡರ್‌ ಪ್ರಕರಣದಿಂದ ಹಿಂದೆ ಸರಿಯುವ ಕುರಿತು ಮೆಮೊ ಸಲ್ಲಿಸಿದ್ದರು. ಇದನ್ನು ನ್ಯಾಯಾಲಯ ಒಪ್ಪಿದ್ದು, ಅವರನ್ನು ಬಿಡುಗಡೆ ಮಾಡಿದೆ. ಪ್ರಕರಣದ ಪಟ್ಟಿಯಲ್ಲಿ ರೇವಣ ಸಿದ್ಧಪ್ಪ ಅವರ ಹೆಸರನ್ನು ಉಲ್ಲೇಖಿಸಲು ರಿಜಿಸ್ಟ್ರಿಗೆ ನಿರ್ದೇಶಿಸಲಾಗಿದೆ. ಕಚೇರಿ ವರದಿಯ ಪ್ರಕಾರ ರೇವಣ ಸಿದ್ಧಪ್ಪ ಅವರಿಗೆ ಸರ್ವೀಸ್‌ ನೋಟಿಸ್‌ ಜಾರಿ ಮಾಡಲಾಗಿಲ್ಲ. ಹೊಸ ವರದಿ ಸಲ್ಲಿಸಲು ಕಚೇರಿಗೆ ಸೂಚಿಸಲಾಗಿದೆ” ಎಂದು ಪೀಠ ಹೇಳಿದ್ದು, ವಿಚಾರಣೆಯನ್ನು ಫೆಬ್ರವರಿ 1ಕ್ಕೆ ಮುಂದೂಡಿದೆ.

ಕಳೆದ ವಿಚಾರಣೆಯ ಸಂದರ್ಭದಲ್ಲಿ “ನ್ಯಾಯಾಲಯದ ಆದೇಶವನ್ನು ಡಾ. ಬಿ ಆರ್‌ ಅಂಬೇಡ್ಕರ್‌ ಯುವ ಸಂಘಟನೆ ಪಾಲಿಸಿಲ್ಲ. ಹೀಗಾಗಿ, ಸಂಘಟನೆಯ ಅಧ್ಯಕ್ಷ ರೇವಣ್ಣ ಸಿದ್ದಪ್ಪ ಅವರು ನ್ಯಾಯಾಲಯದ ಮುಂದೆ ಹಾಜರಾಗುವಂತೆ ನಾವು ಸಮನ್ಸ್‌ ಜಾರಿ ಮಾಡಿದ್ದೇವೆ. ಮುಂದಿನ ವಿಚಾರಣೆಯಲ್ಲಿ ಭಾಗಿಯಾಗುವುದಾಗಿ ರೇವಣ ಸಿದ್ದಪ್ಪ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ನ್ಯಾಯಾಲಯದ ಆದೇಶ ಪಾಲಿಸದಿರುವುದಕ್ಕೆ ಸೂಕ್ತ ಕ್ರಮಕೈಗೊಳ್ಳಲಾಗುವುದು” ಎಂದು ಪೀಠವು ಆದೇಶದಲ್ಲಿ ಹೇಳಿತ್ತು.

“ಪುತ್ಥಳಿ ತೆರವಿಗೆ ಸಂಬಂಧಿಸಿದಂತೆ ರೇವಣ್ಣ ಸಿದ್ದಪ್ಪ ಸಾಕಷ್ಟು ಸಮಸ್ಯೆ ಉಂಟು ಮಾಡುತ್ತಿದ್ದಾರೆ” ಎಂಬ ಸರ್ಕಾರದ ಪರ ವಕೀಲರ ವಾದವನ್ನು ಪೀಠವು ಆದೇಶದಲ್ಲಿ ದಾಖಲಿಸಿಕೊಂಡಿತ್ತು.

ಕಾನೂನುಬಾಹಿರವಾಗಿ ಪುತ್ಥಳಿ ನಿರ್ಮಿಸಿದ್ದಕ್ಕೆ ಕ್ಷಮೆ ಕೋರಿ, ಪುತ್ಥಳಿ ಸ್ಥಾಪಿಸಲು ಸ್ಥಳ ಮಂಜೂರು ಮಾಡುವಂತೆ ಸರ್ಕಾರಕ್ಕೆ ಕೋರಿ ಡಾ. ಬಿ ಆರ್‌ ಅಂಬೇಡ್ಕರ್‌ ಯುವ ಸಂಘಟನೆಯು ಜೂನ್‌ 9ರಂದು ಅಫಿಡವಿಟ್‌ ಸಲ್ಲಿಸಿತ್ತು. ಸರ್ಕಾರವು ಸ್ಥಳ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಪುತ್ಥಳಿ ಸ್ಥಳಾಂತರಿಸುವ ಸಂಬಂಧ ಮುಚ್ಚಳಿಕೆ ಬರೆದುಕೊಡಲು ಸಂಘಟನೆ ಸಿದ್ಧವಿದೆಯೇ ಎಂದು ತಿಳಿಸುವಂತೆ ಜುಲೈ 21ರ ಆದೇಶದಲ್ಲಿ ನ್ಯಾಯಾಲಯ ಕಾಲಾವಕಾಶ ನೀಡಿತ್ತು. ಅಫಿಡವಿಟ್‌ ಸಲ್ಲಿಸಿದ ದಿನಾಂಕದಿಂದ ನಾಲ್ಕು ತಿಂಗಳಲ್ಲಿ ಪರ್ಯಾಯ ಸ್ಥಳಕ್ಕೆ ಪುತ್ಥಳಿ ಸ್ಥಳಾಂತರಿಸುವ ಸಂಬಂಧ ಸಂಘಟನೆಯ ಪ್ರತಿನಿಧಿಗಳು ಆಗಸ್ಟ್‌ 9ರಂದು ಮುಚ್ಚಳಿಕೆ ಬರೆದುಕೊಟ್ಟಿದ್ದರು. ಇದಕ್ಕೆ ಸಹಮತಿಸಿದ್ದ ನ್ಯಾಯಾಲಯವು ಪ್ರಕರಣವನ್ನು ವಿಲೇವಾರಿ ಮಾಡಿತ್ತು.