ಸೊಸೈಟಿ ರೂಪಿಸಿಕೊಂಡು ಏತ ನೀರಾವರಿ ವ್ಯವಸ್ಥೆಯ ಮೂಲಕ ಕೃಷಿ ಚಟುವಟಿಕೆ ನಡೆಸುತ್ತಿರುವ ರೈತರಿಗೂ ಸಬ್ಸಿಡಿ (ಕೃಷಿ ವಿದ್ಯುತ್ ದರಪಟ್ಟಿ ಪ್ರೋತ್ಸಾಹ ಧನ) ವಿಸ್ತರಿಸುವ ಸಂಬಂಧ ಹಾಲಿ ಇರುವ ಕಾನೂನು ಚೌಕಟ್ಟು ತಿದ್ದುಪಡಿ ಮಾಡಿ, ಆರು ತಿಂಗಳಲ್ಲಿ ಮಾರ್ಗಸೂಚಿ ರೂಪಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಈಚೆಗೆ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ನಿರ್ದೇಶಿಸಿದೆ.
ಎಲ್ಲಾ ರೈತರು ಸೇರಿ ಬಳಕೆ ಮಾಡುವ ವಿದ್ಯುತ್ (ರೈತರ ಸೊಸೈಟಿ), ನಿಗದಿತ ವಿದ್ಯುಚ್ಛಕ್ತಿ ಬಳಕೆಯನ್ನು ಮೀರುತ್ತದೆ ಎಂಬ ಕಾರಣಕ್ಕಾಗಿ ಸಬ್ಸಿಡಿ ನಿರಾಕರಿಸುವ ರಾಜ್ಯ ಸರ್ಕಾರದ 2008ರ ಸೆಪ್ಟೆಂಬರ್ 4ರ ಆದೇಶ ರದ್ದುಪಡಿಸಬೇಕು ಎಂದು ಕೋರಿ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಶ್ರೀ ಶ್ರೀಮಂತ (ತಾತ್ಯಾ) ಪಾಟೀಲ್ ನೀರು ಬಳಕೆದಾರರ ಸಂಘ ಮತ್ತು ರವಳನಾತ್ ಏತ ನೀರು ಬಳಕೆದಾರರ ಸಂಘಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಏಕಸದಸ್ಯ ಪೀಠ ಭಾಗಶಃ ಪುರಸ್ಕರಿಸಿದೆ.
ಆದರೆ, ಕೋವಿಡ್ ಮತ್ತಿತರರ ಕಾರಣಗಳಿಗಾಗಿ ವಿದ್ಯುತ್ ಬಾಕಿ ಪಾವತಿಸುವ ಸಂಬಂಧ ಹೊರಡಿಸಿರುವ ಡಿಮ್ಯಾಂಡ್ ನೋಟಿಸ್ ವಜಾ ಮಾಡಲು ನ್ಯಾಯಾಲಯ ನಿರಾಕರಿಸಿದೆ.
“ವಿದ್ಯುತ್ ಸಬ್ಸಿಡಿ ವಿಚಾರದಲ್ಲಿ ರೈತ ಸೊಸೈಟಿಗಳನ್ನು ವ್ಯಕ್ತಿಗತ ರೈತರಿಗೆ ಸಮನಾಗಿ ಕಾಣುವ ಸಂಬಂಧ ರಾಜ್ಯ ಸರ್ಕಾರ, ಹೆಸ್ಕಾಂ ಸೇರಿದಂತೆ ಸಕ್ಷಮ ಪ್ರಾಧಿಕಾರಗಳು ಪರಿಶೀಲಿಸಿ, ಮರು ಪರಿಗಣಿಸಿ ಹಾಲಿ ಇರುವ ನೀತಿಯ ಚೌಕಟನ್ನು ತಿದ್ದುಪಡಿ ಮಾಡಬೇಕು. ರೈತ ಸೊಸೈಟಿಗಳಿಗೆ ಕೃಷಿ ಸಬ್ಸಿಡಿ ವಿಸ್ತರಿಸುವ ಸಂಬಂಧ ಆರು ತಿಂಗಳಲ್ಲಿ ಸೂಕ್ತ ಮಾರ್ಗಸೂಚಿಗಳನ್ನು ರೂಪಿಸಬೇಕು. ಪರಿಷ್ಕೃತ ಚೌಕಟ್ಟಿನ ಬಳಿಕ ವಿದ್ಯುತ್ ಸಬ್ಸಿಡಿ ನೀಡುವ ಸಂಬಂಧ ಅರ್ಜಿದಾರರು ವಿಸ್ತೃತ ಮನವಿ ಸಲ್ಲಿಸಬಹುದು” ಎಂದು ನ್ಯಾಯಾಲಯ ಆದೇಶಿಸಿದೆ.
“ಪ್ರತಿಯೊಬ್ಬ ರೈತನ ತಲಾದಾಯ ವಿದ್ಯುತ್ ಬಳಕೆ (ಪರ್‌ಕ್ಯಾಪಿಟಾ ಕನ್‌ಸಮ್ಷನ್), ಭೂಮಿ ಮಾಲೀಕತ್ವ ಅಥವಾ ಪ್ರತಿಯೊಬ್ಬ ಸದಸ್ಯರ ಸರಾಸರಿ ವಿದ್ಯುತ್ ಬಳಕೆಯನ್ನು ಆಧರಿಸಿ ನೋಂದಾಯಿತ ರೈತ ಸೊಸೈಟಿಗಳಿಗೆ ವಿದ್ಯುತ್ ಬಳಕೆಗೆ ಸಂಬಂಧಿಸಿದ ಪ್ರೋತ್ಸಾಹ ಧನ ನೀಡುವ ಸಂಬಂಧ ಹಾಲಿ ಇರುವ ನೀತಿಯನ್ನು ಪರಿಶೀಲಿಸಿ ಅದಕ್ಕೆ ತಿದ್ದುಪಡಿ ಮಾಡಬೇಕು” ಎಂದೂ ನ್ಯಾಯಾಲಯ ಹೇಳಿದೆ.
“ರೈತರು ಕ್ಷಮತೆ ಮತ್ತು ಸುಸ್ಥಿರತೆ ಹೆಚ್ಚಿಸಲು ಸೊಸೈಟಿ ಮಾಡಿಕೊಂಡಿದ್ದು, ಅವರನ್ನು ದಂಡಿಸುವುದು ಅಸಮರ್ಥನೀಯ ಕ್ರಮ. ಸೊಸೈಟಿಯಲ್ಲಿರುವ ರೈತರ ವಿದ್ಯುತ್ ಬಳಕೆಯು ನಿಗದಿತ ವಿದ್ಯುತ್ ಬಳಕೆದಾರರಗಿಂತ ಹೆಚ್ಚಾಗಿದೆ ಎಂಬ ಕಾರಣಕ್ಕೆ ಅವರಿಗೆ ಪ್ರೋತ್ಸಾಹ ಧನ ನಿರಾಕರಿಸುವುದು ಅಸಾಂವಿಧಾನಿಕ. ಇದು ತಾರತಮ್ಯದ ಕ್ರಮವಾಗಿದ್ದು, ಕೃಷಿ ಪ್ರೋತ್ಸಾಹ ಧನಗಳ ಉದ್ದೇಶಗಳಿಗೆ ಹೊಂದಿಕೆಯಾಗುವುದಿಲ್ಲ. ಕೃಷಿ ಪ್ರೋತ್ಸಾಹ ಧನವನ್ನು ಸಣ್ಣ ರೈತರಿಗೆ ಸಮಾನವಾದ ಸಂಪನ್ಮೂಲ ದೊರೆಯುವಂತೆ ಹಾಗೂ ಸುಸ್ಥಿರ ಕೃಷಿ ಚಟುವಟಿಕೆಗೆ ಬೆಂಬಲಿಸಲು ಜಾರಿಗೊಳಿಸಲಾಗಿದೆ” ಎಂದು ಪೀಠ ವಿವರಿಸಿದೆ.
“ಕೋವಿಡ್ 19 ಎಂಬ ಕಾರಣಕ್ಕೆ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಯಾಗಿರುವುದಕ್ಕೆ ಯಾವುದೇ ಸಾಕ್ಷ್ಯವಿಲ್ಲದಿದ್ದರೂ ಅಥವಾ ನಿರ್ದಿಷ್ಟವಾಗಿ ಸರ್ಕಾರದ ಆದೇಶ ಇರದಿದ್ದರು ಗುತ್ತಿಗೆ ಹೊಣೆಗಾರಿಕೆಯ ಅನ್ವಯ ವಿದ್ಯುತ್ ಶುಲ್ಕ ಪಾವತಿಸುವುದಿಲ್ಲ ಎಂದು ಹೇಳಲಾಗದು. ಹೆಸ್ಕಾಂನೊಂದಿಗೆ ಕಾರರು ಮಾಡಿಕೊಂಡು ಈಗ ರೈತರಿಗೆ ಸೌಲಭ್ಯ ಸಿಗುತ್ತದೆ ಎಂದ ಮಾತ್ರಕ್ಕೆ ಗುತ್ತಿಗೆಯನ್ನು ಏಕಪಕ್ಷೀಯವಾಗಿ ಅರ್ಜಿದಾರರು ಬದಲಾಯಿಸಲಾಗದು” ಎಂದು ನ್ಯಾಯಾಲಯ ಹೇಳಿದೆ.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಶ್ರೀಧರ್ ಪ್ರಭು ಅವರು “ರೈತರು ಸೊಸೈಟಿ ರೂಪಿಸಿಕೊಂಡಿರುವುದರಿಂದ ಅವರಿಗೆ ವಿದ್ಯುತ್ ಪೂರೈಕೆ ಸಬ್ಸಿಡಿ ಇಲ್ಲ. ಏಕೆಂದರೆ ಸಬ್ಸಿಡಿ ವ್ಯವಸ್ಥೆಯು ವ್ಯಕ್ತಿಗತ ರೈತರಿಗೆ ಮಾತ್ರ ಎಂದು ಹೇಳಲಾಗುತ್ತಿದೆ. ವ್ಯಕ್ತಿಗತ ಮತ್ತು ಸಹಕಾರಿ ರೈತರೊಬ್ಬರು ಬಳಸುವ ತಲಾ ವಿದ್ಯುತ್ ಒಂದೇ ಆಗಿದೆ. ಅದಾಗ್ಯೂ, ಸಬ್ಸಿಡಿಗೆ ಸೊಸೈಟಿ ರೂಪಿಸಿಕೊಂಡಿರುವ ರೈತರನ್ನು ಪರಿಗಣಿಸದಿರುವುದು ಸ್ವೇಚ್ಛೆಯ ಕ್ರಮ. ಮೀಟರ್ ಇಲ್ಲದ 8,24,822 ಐಪಿ ಸೆಟ್‌ಗಳಿಗೆ ಹೆಸ್ಕಾಂಗೆ ರಾಜ್ಯ ಸರ್ಕಾರ ಸಬ್ಸಿಡಿ ಬಿಡುಗಡೆ ಮಾಡಿದೆ. ಈ ಐಪಿ ಸೆಟ್‌ಗಳು 5929.74 ದಶಲಕ್ಷ ಯೂನಿಟ್ ಬಳಕೆ ಮಾಡಿವೆ. ಇಲ್ಲಿ ಸಬ್ಸಿಡಿಯು ತಾರತಮ್ಯ ಮಾತ್ರವಲ್ಲದೇ ವಿದ್ಯುಚ್ಛಕ್ತಿ ಕಾಯಿದೆ 2003ರ ಸೆಕ್ಷನ್ 55ರ ಉಲ್ಲಂಘನೆಯಾಗಿದೆ. ಇದರ ಪ್ರಕಾರ ಸೂಕ್ತ ಮೀಟರ್ ಹೊಂದಬೇಕಿದ್ದು, ಮೀಟರ್ ಹೊಂದಿರುವವರಿಗೆ ಮಾತ್ರ ಸಬ್ಸಿಡಿ ನೀಡಬೇಕು ಎಂದಿದೆ” ಎಂದು ವಾದಿಸಿದ್ದರು.
ರಾಜ್ಯ ಸರ್ಕಾರದ ಪರ ವಕೀಲರಾದ ಅಶೋಕ್ ಟಿ. ಕಟ್ಟೀಮನಿ, ಬಿ ಎಸ್ ಕಾಮ್ಟೆ ಮತ್ತು ಶಿವರಾಜ್ ಪಿ. ಮುಧೋಳ ಅವರು “ಸರ್ಕಾರದ ಆದೇಶವು 10 ಅಶ್ವಶಕ್ತಿ (ಎಚ್‌ಪಿ) ಅಥವಾ ಅದಕ್ಕಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವ ಬಡ ರೈತರಿಗೆ ಮಾತ್ರ ಆದೇಶ ಅನ್ವಯಿಸುತ್ತದೆ. ಅರ್ಜಿದಾರ ಸೊಸೈಟಿಗಳು ಹೆಸ್ಕಾಂನೊಂದಿಗೆ 2016ರಲ್ಲಿ ಒಪ್ಪಂದ ಮಾಡಿಕೊಂಡಿದ್ದು, ಅವರು ಬಳಕೆ ಮಾಡಿರುವ ವಿದ್ಯುತ್ ಆಧರಿಸಿ ಶುಲ್ಕ ವಿಧಿಸಲಾಗಿದೆ. ಸೊಸೈಟಿಯ ಸದಸ್ಯರಾಗಿದ್ದರೂ ರೈತರು ವ್ಯಕ್ತಿಗತವಾಗಿ ಸರ್ಕಾರದ ಸೌಲಭ್ಯ ಪಡೆಯಬಹುದಾಗಿದೆ. ಇದಕ್ಕೆ ವಿರುದ್ಧವಾಗಿ ಅವರು ಸೊಸೈಟಿ ರೂಪಿಸಿಕೊಂಡಿದ್ದರೆ ಅಂಥವರಿಗೆ ಸೌಲಭ್ಯ ದೊರೆಯುವುದಿಲ್ಲ. ಇದು ಸರ್ಕಾರದ ನೀತಿಯ ಭಾಗ. ಅರ್ಜಿದಾರ ಸೊಸೈಟಿಗಳು ಹಿಂಬಾಕಿಯಿಂದ ಮುಕ್ತಿ ಪಡೆಯಲು ನ್ಯಾಯಾಲಯದ ಮುಂದೆ ಬಂದಿವೆ” ಎಂದು ಆಕ್ಷೇಪಿಸಿದ್ದರು.
ಪ್ರಕರಣದ ಹಿನ್ನೆಲೆ: ಶ್ರೀಮಂತ (ತಾತ್ಯಾ) ಪಾಟೀಲ್ ನೀರು ಬಳಕೆದಾರರ ಸಂಘ ಮತ್ತು ರವಳನಾತ್ ಏತ ನೀರು ಬಳಕೆದಾರರ ಸಂಘಗಳು ಹೆಸ್ಕಾಂನ ನೋಂದಾಯಿತ ಗ್ರಾಹಕರಾಗಿದ್ದು, ಏತ ನೀರಾವರಿ ಯೋಜನೆ/ಏತ ನೀರಾವರಿ ಸೊಸೈಟಿ ಅನ್ವಯ ಅವರಿಗೆ 90 ಅಶ್ವಶಕ್ತಿ ಹಾಗೂ 100 ಅಶ್ವಶಕ್ತಿ ವಿದ್ಯುತ್ ಮಂಜೂರು ಮಾಡಲಾಗಿತ್ತು. ಇದರ ಭಾಗವಾಗಿ ಅರ್ಜಿದಾರರು ಅಥಣಿಯ ಪಾರ್ಥನಹಳ್ಳಿ ಮತ್ತು ಮಧಭಾವಿಯಲ್ಲಿ ಅಂದಾಜು 5,79,65,417 ರೂಪಾಯಿ ವೆಚ್ಚದಲ್ಲಿ ಕ್ರಮವಾಗಿ 200 ಮತ್ತು 103 ಎಕರೆಗೆ ನೀರುಣಿಸಲು ಕೃಷ್ಣಾ ನದಿಗೆ ಏತ ನೀರಾವರಿ ಯೋಜನೆ ನಿರ್ಮಿಸಿದ್ದಾರೆ.
ವಿದ್ಯುಚ್ಛಕ್ತಿ ಕಾಯಿದೆ ಸೆಕ್ಷನ್ 55ರ ಅಡಿ ಮೀಟರ್ ಅಳಡಿವಡಿಸಿ ವಿದ್ಯುತ್ ಪೂರೈಸುವುದು ಹೆಸ್ಕಾಂ ಶಾಸನಬದ್ಧ ಕೆಲಸವಾಗಿದೆ. ಹೆಸ್ಕಾಂ ಸೇರಿದಂತೆ ಬೇರೆ ವಿದ್ಯುತ್ ಪೂರೈಕೆ ಸಂಸ್ಥೆಗಳು ಯಾವ ಕಾರಣಕ್ಕಾಗಿ ಹಂಚಿಕೆ ಪರವಾನಗಿ ನೀಡುತ್ತಿಲ್ಲ ತಿಳಿಯುತ್ತಿಲ್ಲ. ಅದಾಗ್ಯೂ, ಮೀಟರ್ ಇಲ್ಲದವರಿಗೂ ರಾಜ್ಯ ವಿದ್ಯುಚ್ಛಕ್ತಿ ನಿಯಂತ್ರಣ ಸಂಸ್ಥೆ (ಕೆಇಆರ್‌ಸಿ) ವಿದ್ಯುತ್ ದರ ಪಟ್ಟಿ ಆದೇಶದ ಪ್ರಕಾರ ಇಂಧನ ಇಲಾಖೆಯು ಸಬ್ಸಿಡಿ ನೀಡಲು ಅವಕಾಶ ಮಾಡಿಕೊಟ್ಟಿದೆ. 2019-20ನೇ ಸಾಲಿನಲ್ಲಿ ವಾರ್ಷಿಕ ವರದಿಯಲ್ಲಿ ಎಚ್‌ಟಿ- 3(a) ವಿಭಾಗದಡಿ 307 ಮೀಟರ್‌ಗಳಿದ್ದು, ಇವುಗಳಿಂದ 54,15,48,345 ರೂಪಾಯಿ ಆದಾಯ ಪಡೆಯಲಾಗಿದೆ. ಇದೇ ವರದಿಯಲ್ಲಿ ಒಟ್ಟಾರೆ 10 ಅಶ್ವಶಕ್ತಿಯ 8,00,606 ಐಪಿ ಸೆಟ್‌ಗಳ ಪೈಕಿ 1,57,232 ಮೀಟರ್ ಹೊಂದಿರುವ ಐಪಿ ಸೆಟ್‌ಗಳಿದ್ದು, ಇದಕ್ಕಾಗಿ ಇಂಧನ ಇಲಾಖೆಯಿಂದ ಹೆಸ್ಕಾಂ 3995.18 ಕೋಟಿ ರೂಪಾಯಿ ಸಬ್ಸಿಡಿ ಪಡೆದಿದೆ. ಇಂಧನ ಇಲಾಖೆಯು ಒಟ್ಟು 5067.69 ಸಬ್ಸಿಡಿ ಬಿಡುಗಡೆ ಮಾಡಿದೆ. ಅಂದಾಜು ವಿದ್ಯುತ್ ಬಳಕೆ ಆಧಾರಿಸಿ ಮೀಟರ್ ಹೊಂದಿಲ್ಲದ ಐಪಿ ಸೆಟ್‌ಗಳಿಗೂ ಇಂಧನ ಇಲಾಖೆಯು ಸಬ್ಸಿಡಿ ನೀಡಿದೆ. ಇದು 2003ರ ಕಾಯಿದೆ ಮತ್ತು ಸರ್ಕಾರದ ಆದೇಶಕ್ಕೆ ವಿರುದ್ಧವಾಗಿದೆ ಎಂದು ಹೇಳಲಾಗಿದೆ.
ವ್ಯಕ್ತಿಗತ ಐಪಿ ಸೆಟ್ ಹೊಂದಿರುವವರು ಒಂದಕ್ಕಿಂತ ಹೆಚ್ಚಿಗೆ ಐಪಿಗೆ ಸಬ್ಸಿಡಿ ಪಡೆಯುತ್ತಿದ್ದರೂ ಸೊಸೈಟಿ ರೂಪಿಸಿ ಅದರ ಮೂಲಕ ವ್ಯವಸ್ಥೆ ಮಾಡಿಕೊಂಡಿರುವವರಿಗೆ ಸಬ್ಸಿಡಿ ವಿಸ್ತರಿಸಿಲ್ಲ ಎಂಬುದು ಅರ್ಜಿದಾರರ ಆಕ್ಷೇಪವಾಗಿತ್ತು.