ಹೈಕೋರ್ಟ್‌ನಲ್ಲಿ ಅಪಾರ ಸಂಖ್ಯೆಯಲ್ಲಿ ಬಾಕಿ ಇರುವ ಸಿವಿಲ್ ವ್ಯಾಜ್ಯಗಳ ಹೊರೆ ತಗ್ಗಿಸಲು ಮತ್ತು ನಿಯಮಿತ ಪ್ರಥಮ ಮೇಲ್ಮನವಿಗಳನ್ನು (ಆರ್‌ಎಫ್‌ಎ) ನಿರ್ಧರಿಸಲು ತೆಗೆದುಕೊಳ್ಳಲಾಗುವ ಸಮಯದ ಉಳಿತಾಯ ದೃಷ್ಟಿಯಿಂದ ಕರ್ನಾಟಕ ಸಿವಿಲ್ ನ್ಯಾಯಾಲಯಗಳ ಕಾಯಿದೆ ಮತ್ತು ಕರ್ನಾಟಕ ಹೈಕೋರ್ಟ್ ಕಾಯಿದೆಗಳ ತಿದ್ದುಪಡಿಯ ಸಿಂಧುತ್ವವನ್ನು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಎತ್ತಿಹಿಡಿದಿದೆ.
ಕರ್ನಾಟಕ ಹೈಕೋರ್ಟ್ ಕಾಯಿದೆ ತಿದ್ದುಪಡಿ–2023ರ ಅನುಷ್ಠಾನಕ್ಕೆ ಸಂಬಂಧಿಸಿದಂತೆ 2024ರ ಜೂನ್ 19ರಂದು ಹೊರಡಿಸಲಾಗಿರುವ ಅಧಿಸೂಚನೆಯು ಸಂವಿಧಾನದ 14 ಮತ್ತು ಇತರ ನಿಬಂಧನೆಗಳಿಗೆ ವಿರುದ್ಧವಾಗಿದೆ ಮತ್ತು ಅಧಿಕಾರ ವ್ಯಾಪ್ತಿಯನ್ನು ಮೀರಿದ ಕ್ರಮ ಎಂದು ಆಕ್ಷೇಪಿಸಿ ಹೊಸಕೋಟೆ ತಾಲ್ಲೂಕು ನಂದಗುಡಿ ಹೋಬಳಿಯ ನಾರಾಯಣಮ್ಮ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಹಾಗೂ ಕಲಬುರಗಿಯ ಏಕಸದಸ್ಯ ಪೀಠದ ಆದೇಶದಲ್ಲಿ ಮಾರ್ಪಾಡು ಮಾಡಬೇಕು ಎಂದು ಕೋರಿ ರಾಯಚೂರಿನ ಬ್ರಾಹ್ಮಣವಾಡಿಯ ಬಾಬು ರಾವ್ ಮತ್ತು ಸೇಡಂ ತಾಲ್ಲೂಕಿನ ಕೂಕನಳ್ಳಿಯ ಗುರುಲಿಂಗಪ್ಪ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಲೇವಾರಿ ಮಾಡಿರುವ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ಸಿ ಎಂ ಪೂಣಚ್ಚ ಅವರ ನೇತೃತ್ವದ ವಿಭಾಗೀಯ ಪೀಠ ಈ ಕುರಿತ ವಿಸ್ತೃತ ತೀರ್ಪು ಪ್ರಕಟಿಸಿದೆ.
ತಿದ್ದುಪಡಿ ಕಾಯಿದೆಯು 2007ರ ಆಗಸ್ಟ್ 28ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೆ ತರುವ ಸರ್ಕಾರದ ಆದೇಶಕ್ಕೆ ಅಸ್ತು ಎಂದಿರುವ ಪೀಠವು ‘ಇನ್ನು ಮುಂದೆ 2007ರಿಂದ ಹೈಕೋರ್ಟ್‌ನಲ್ಲಿ ಬಾಕಿ ಇರುವ ಅಪೀಲುಗಳೆಲ್ಲಾ ಜಿಲ್ಲಾ ನ್ಯಾಯಾಲಯದಲ್ಲೇ ತೀರ್ಮಾನವಾಗುತ್ತವೆ. ಈಗಾಗಲೇ ತೀರ್ಮಾನಗೊಂಡಿರುವ ಡಿಕ್ರಿಗಳಿಗೆ ಮತ್ತು ಅವುಗಳಿಗೆ ನೀಡಲಾಗಿರುವ ತಡೆ ಆದೇಶಗಳು ಹಾಗೇ ಇರುತ್ತವೆ. ಹೈಕೋರ್ಟ್‌ನಲ್ಲಿರುವ ಪೆಂಡಿಂಗ್ ಮೇಲ್ಮನವಿಗಳು ಎಲ್ಲಿಗೆ ಬಂದು ನಿಂತಿವೆಯೋ ಅಲ್ಲಿಂದ ಮುಂದಕ್ಕೆ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾವಣೆ ಆಗುತ್ತವೆ ಮತ್ತು ಹೈಕೋರ್ಟ್‌ನಲ್ಲಿ ಈವರೆಗೆ ಆಗಿರುವ ಆದೇಶಗಳು ಸಿಂಧು ಆಗಿರುತ್ತವೆ ಎಂದು ಸ್ಪಷ್ಟಪಡಿಸಿದೆ.
ಈ ವಿಷಯದಲ್ಲಿ ಬೆಂಗಳೂರಿಗೇ ಪ್ರತ್ಯೇಕ ಕಾಯಿದೆ ಇದ್ದು; ಬೆಂಗಳೂರು ನಗರ ಸಿವಿಲ್ ನ್ಯಾಯಾಲಯದ ತೀರ್ಪುಗಳ ಮೇಲಿನ ಆರ್‌ಎಫ್‌ಎಗಳ ವಿಚಾರಣೆಯನ್ನು ಹೈಕೋರ್ಟ್ ನಡೆಸುವುದನ್ನು ಮುಂದುವರಿಸಲಿದೆ.
ಕರ್ನಾಟಕ ಸಿವಿಲ್ ನ್ಯಾಯಾಲಯಗಳ ಕಾಯಿದೆ–1964ರ ಕಾಯಿದೆ ಅಡಿಯಲ್ಲಿ ಬೆಂಗಳೂರು ಹೊರತುಪಡಿಸಿದ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುವ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯಗಳು ಮತ್ತು ಬೆಂಗಳೂರು ನಗರ ಸಿವಿಲ್ ನ್ಯಾಯಾಲಯ ಕಾಐದೆ–1979 ಮತ್ತು ಕರ್ನಾಟಕ ಸಣ್ಣ ವ್ಯಾಜ್ಯ ನ್ಯಾಯಾಲಯಗಳ ಕಾಯಿದೆ–1964ರ ಅಡಿಯಲ್ಲಿ ಕಾರ್ಯ ನಿರ್ವಹಿಸುವ ನ್ಯಾಯಾಧೀಶರ ನಡುವೆ ಸ್ಪಷ್ಟವಾದ ವ್ಯತ್ಯಾಸವಿದೆ ಎಂಬುದನ್ನು ಪೀಠ ತೀರ್ಪಿನಲ್ಲಿ ಉಲ್ಲೇಖಿಸಿದೆ.
ಬೆಂಗಳೂರಿನಲ್ಲಿ, ಬೆಂಗಳೂರು ನಗರ ಸಿವಿಲ್ ನ್ಯಾಯಾಲಯದಲ್ಲಿ ಮೂಲ ನ್ಯಾಯವ್ಯಾಪ್ತಿಯನ್ನು ಚಲಾಯಿಸುವ ನಗರ ಸಿವಿಲ್ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸುವವರು ಜಿಲ್ಲಾ ನ್ಯಾಯಾಧೀಶರ ಕೇಡರ್‌ನಲ್ಲಿರುವ ನ್ಯಾಯಾಧೀಶರು. ಹೀಗಾಗಿ, ಹೈಕೋರ್ಟ್‌ಗೆ ಇರುವ ಮೊದಲ ಮೇಲ್ಮನವಿಗಳು ಮತ್ತು ನಗರ ಸಿವಿಲ್ ನ್ಯಾಯಾಧೀಶರು ಮೂಲ ನ್ಯಾಯವ್ಯಾಪ್ತಿಯನ್ನು ಚಲಾಯಿಸುವ ಆದೇಶಗಳು, ತೀರ್ಪುಗಳು ಮತ್ತು ತೀರ್ಪುಗಳಿಂದ ಉಂಟಾಗುವ ಮೇಲ್ಮನವಿಗಳನ್ನು ಸೀಮಿತಗೊಳಿಸಿದ್ದಕ್ಕಾಗಿ ಹೈಕೋರ್ಟ್ ತಿದ್ದುಪಡಿ ಕಾಯಿದೆಯನ್ನು ತಪ್ಪೆಂದು ಹೇಳಲಾಗುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
ಈತನಕ ₹5 ಲಕ್ಷ ಮೌಲ್ಯದ ಒಳಗಿನ ಅಸಲು ದಾವೆಗಳನ್ನು (ಒಎಸ್) ಸಿವಿಲ್ ಜಡ್ಜ್ ಮುನ್ಸೀಫ್ ಕೋರ್ಟ್‌ಗಳು ವಿಚಾರಣೆ ನಡೆಸುತ್ತಿದ್ದವು. ₹5 ಲಕ್ಷಕ್ಕೂ ಮೇಲ್ಪಟ್ಟಿದ್ದರೆ ಮಿತಿಗೆ ಒಳಪಡದಂತೆ ಹಿರಿಯ ವಿಭಾಗಕ್ಕೆ ಬರುತ್ತಿದ್ದವು. ಈ ಕೋರ್ಟ್‌ಗಳಲ್ಲಿ ನೀಡಲಾದ ಡಿಕ್ರಿಯನ್ನು ಪ್ರಶ್ನಿಸಲಾದ ಮೊದಲ ಮೇಲ್ಮನವಿಗಳಲ್ಲಿ ₹10 ಲಕ್ಷ ಮೌಲ್ಯದ ಒಳಗಿದ್ದರೆ ಜಿಲ್ಲಾ ನ್ಯಾಯಾಲಯಕ್ಕೆ ಹೋಗುತ್ತಿದ್ದವು. ₹10 ಲಕ್ಷ ಮೌಲ್ಯಕ್ಕೆ ಮೇಲ್ಪಟ್ಟಿದ್ದರೆ ನಿಯಮಿತ ಮೊದಲ ಮೇಲ್ಮನವಿಗಳಾಗಿ (ಆರ್‌ಎಫ್‌ಎ) ಹೈಕೋರ್ಟ್‌ಗೆ ಬರುತ್ತಿದ್ದವು. ಸರ್ಕಾರದ ತಿದ್ದುಪಡಿ ಮುಖೇನ ಇದನ್ನು ತಪ್ಪಿಸಿ 2007ರ ನಂತರದ ಎಲ್ಲಾ ಮೊದಲ ಅಪೀಲುಗಳನ್ನು ಜಿಲ್ಲಾ ನ್ಯಾಯಾಲಯ ವ್ಯಾಪ್ತಿಗೆ ನೀಡಲಾಗಿದೆ. ಈ ವಿಷಯದಲ್ಲಿ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್‌ಗೆ ಅನ್ವಯ ಆಗದಂತೆ ಇದನ್ನು ಬದಲಾವಣೆ ಮಾಡಲಾಗಿದೆ. ತಿದ್ದುಪಡಿಯ ಅನುಸಾರ ಈಗ ಕಿರಿಯ ವಿಭಾಗಕ್ಕೆ 15 ಲಕ್ಷ ಮಿತಿ ವಿಧಿಸಲಾಗಿದೆ.