Karnataka High Court 
ಸುದ್ದಿಗಳು

ಅಮೃತ್‌ ಮಹಲ್‌ ಕಾವಲ್‌ ಒತ್ತುವರಿ: ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಖುದ್ದು ಹಾಜರಾತಿಗೆ ಹೈಕೋರ್ಟ್‌ ನಿರ್ದೇಶನ

ಪಶು ಸಂಗೋಪನಾ ಇಲಾಖೆಯ ಅಮೃತ್‌ ಮಹಲ್‌ ಜಾನುವಾರು ಸಂವರ್ಧನಾ ಕೇಂದ್ರದ ಉಪ ನಿರ್ದೇಶಕರೂ ನ್ಯಾಯಾಲಯದ ಮುಂದೆ ಹಾಜರಿರಬೇಕು ಎಂದು ಪೀಠವು ಆದೇಶ ಮಾಡಿದೆ.

Bar & Bench

ಸಂರಕ್ಷಿತ ಮೀಸಲು ಭೂಪ್ರದೇಶ ಎಂದು ಪರಿಗಣಿಸಲಾಗಿರುವ ಅಮೃತ್‌ ಮಹಲ್‌ ಕಾವಲ್‌ ಭೂಪ್ರದೇಶ ಅತಿಕ್ರಮಿಸಿರುವುದನ್ನು ತೆರವುಗೊಳಿಸುವ ಸಂಬಂಧ ನೀಡಲಾಗಿರುವ ನಿರ್ದೇಶನವನ್ನು ಪಾಲಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಫೆಬ್ರವರಿ 8ರಂದು ಖುದ್ದು ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ಸೋಮವಾರ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

ವನ್ಯಜೀವಿ ಸಂರಕ್ಷಣಾ ಕಾರ್ಯಪಡೆ ಮತ್ತು ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ನೇತೃತ್ವದ ವಿಭಾಗೀಯ ಪೀಠವು ಪಶುಸಂಗೋಪನಾ ಇಲಾಖೆಯ ಅಮೃತ್‌ ಮಹಲ್‌ ಜಾನುವಾರು ಸಂವರ್ಧನಾ ಕೇಂದ್ರದ ಉಪ ನಿರ್ದೇಶಕರೂ ನ್ಯಾಯಾಲಯದ ಮುಂದೆ ಹಾಜರಿರಬೇಕು ಎಂದು ಆದೇಶ ಮಾಡಿದೆ.

ಸಂರಕ್ಷಿತ ಮೀಸಲು ಭೂಪ್ರದೇಶದ ಒತ್ತುವರಿಯಾಗಿರುವುದರ ಕುರಿತು ನ್ಯಾಯಾಲಯವು 2020ರ ಮಾರ್ಚ್‌ 5ರ ಆದೇಶದಲ್ಲಿ ವಿಸ್ತೃತವಾಗಿ ದಾಖಲಿಸಿದೆ. 2018ರ ಆದೇಶದ ಅನ್ವಯ ರಚಿಸಲಾದ ವಿಶೇಷ ಕಾರ್ಯಪಡೆಯು ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಪರಿಶೀಲಿಸುವಂತೆ ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನ್ಯಾಯಾಲಯ ನಿರ್ದೇಶಿಸಿತ್ತು. ಈ ಸಂಬಂಧ ಅಫಿಡವಿಟ್‌ ಸಲ್ಲಿಸಲು 2020ರ ಮಾರ್ಚ್‌ 31ರವರೆಗೆ ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನ್ಯಾಯಾಲಯವು ಕಾಲಾವಕಾಶ ನೀಡಿತ್ತು.

ಇದಾದ ಬಳಿಕ ಅರಣ್ಯ ಇಲಾಖೆಯು ಅನುಪಾಲನಾ ವರದಿ ಸಲ್ಲಿಸಲು ಸಾಕಷ್ಟು ಕಾಲಾವಕಾಶ ತೆಗೆದುಕೊಂಡಿರುವುದನ್ನು ನ್ಯಾಯಾಲಯ ಪರಿಗಣನೆಗೆ ತೆಗೆದುಕೊಂಡಿದೆ. “ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಕೈಗೊಳ್ಳಲಾಗಿರುವ ಕ್ರಮದ ಕುರಿತು 2021ರ ನವೆಂಬರ್‌ 26ರಂದು ಸಲ್ಲಿಸಲಾಗಿರುವ ಅನುಪಾಲನಾ ವರದಿಯು ತೃಪ್ತಿ ತಂದಿಲ್ಲ. ಪಶು ಸಂಗೋಪನಾ ಇಲಾಖೆಯ ಕಾರ್ಯದರ್ಶಿಯ ನೇತೃತ್ವದಲ್ಲಿ 2021ರ ಆಗಸ್ಟ್‌ 11ರಂದು ನಡೆಸಲಾದ ಸಭೆಯಲ್ಲಿ ಚಿಕ್ಕಮಗಳೂರಿನಲ್ಲಿ 4,266 ಎಕರೆ ಭೂಮಿ ಒತ್ತುವರಿಯಾಗಿದೆ ಎಂದು ಹೇಳಲಾಗಿದೆ. ಆದರೆ, ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಅನುಪಾಲನಾ ವರದಿಯಲ್ಲಿ ಚಿಕ್ಕಮಗಳೂರಿನಲ್ಲಿ ಯಾವುದೇ ಭೂ ಒತ್ತುವರಿಯಾಗಿಲ್ಲ ಎಂದು ತಿಳಿಸಲು ಪ್ರಯತ್ನಿಸಲಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲೆ ಜಯ್ನಾ ಕೊಠಾರಿ ಅವರು “ವನ್ಯಜೀವಿ ಸಂರಕ್ಷಣಾ ಕಾಯಿದೆ ಅಡಿ ಮೀಸಲು ಭೂಪ್ರದೇಶವನ್ನು ಸಂರಕ್ಷಿಸಬೇಕಿದೆ. ಆದರೆ, ಅಪಾರ ಪ್ರಮಾಣದ ಭೂಮಿಯನ್ನು ಒತ್ತುವರಿ ಮಾಡಿದ್ದರೂ ಅದನ್ನು ತೆರವುಗೊಳಿಸುವ ಸಂಬಂಧ ಯಾವುದೇ ಕ್ರಮಕೈಗೊಂಡಿಲ್ಲ. ಪ್ರತಿವಾದಿಗಳು ನ್ಯಾಯಾಲಯದ ಆದೇಶವನ್ನು ಪಾಲಿಸಲು ವಿಳಂಬ ನೀತಿ ಅನುಸರಿಸುತ್ತಿದ್ದಾರೆ” ಎಂದು ಪೀಠದ ಗಮನಸೆಳೆದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲೆ ಎಚ್‌ ವಾಣಿ ಅವರು “ಸದರಿ ಪ್ರಕರಣವು ಪಶು ಸಂಗೋಪನಾ ಇಲಾಖೆಯ ವ್ಯಾಪ್ತಿಗೆ ಬರಲಿದೆ. ಹೀಗಾಗಿ, ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಖುದ್ದು ಹಾಜರಾತಿಗೆ ವಿನಾಯಿತಿ ನೀಡಬೇಕು” ಎಂದು ಕೋರಿದರು.

ಇದನ್ನು ಒಪ್ಪದ ಪೀಠವು ಒಂದು ಹಂತದಲ್ಲಿ "ನ್ಯಾಯಾಲಯದ ಆದೇಶ ಪಾಲಿಸದಿರುವುದಕ್ಕೆ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲಾಗುವುದು" ಎಂದು ಮೌಖಿಕವಾಗಿ ಹೇಳಿತು.