High Court of Karnataka 
ಸುದ್ದಿಗಳು

ಅಮೃತ್ ಮಹಲ್ ಕಾವಲ್‌ ಒತ್ತುವರಿ ಪರಿಶೀಲನಾ ವರದಿ ಸಲ್ಲಿಕೆ; ಪ್ರತಿಕ್ರಿಯೆ ಸಲ್ಲಿಸಲು ಅನುಮತಿಸಿದ ಹೈಕೋರ್ಟ್‌

ಕಳೆದ ವಿಚಾರಣೆ ವೇಳೆ ನ್ಯಾಯಾಲಯ ನೀಡಿದ್ದ ನಿರ್ದೇಶನದಂತೆ ತರೀಕೆರೆ ಉಪ ವಿಭಾಗಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ನ್ಯಾಯಾಲಯಕ್ಕೆ ಮೆಮೊ ಸಲ್ಲಿಸಿದ ಸರ್ಕಾರ.

Bar & Bench

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬಸೂರು ವ್ಯಾಪ್ತಿಯಲ್ಲಿನ ಅಮೃತ್ ಮಹಲ್ ಕಾವಲ್‌ನಲ್ಲಿ ನಡೆದಿದ್ದ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ನ್ಯಾಯಾಲಯದ ನಿರ್ದೇಶನದಂತೆ ಸಂಬಂಧಪಟ್ಟ ಅಧಿಕಾರಿಯಿಂದ ಸ್ಥಳ ಪರಿಶೀಲನೆ ನಡೆಸಲಾಗಿದೆ ಎಂದು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ಈಚೆಗೆ ಮಾಹಿತಿ ನೀಡಿದೆ.

ಒತ್ತುವರಿ ತೆರವಿಗೆ ಕೋರಿ ವನ್ಯಜೀವಿ ಸಂರಕ್ಷಣಾ ಕಾರ್ಯಪಡೆ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್ ಆರ್ ಕೃಷ್ಣಕುಮಾರ್ ಅವರಿದ್ದ ಪೀಠ ವಿಚಾರಣೆ ನಡೆಸಿತು.

ಸರ್ಕಾರದ ಪರ ವಕೀಲರು ಅಮೃತ್ ಮಹಲ್ ಕಾವಲ್‌ನಲ್ಲಿ ಕಾವಲುದಾರರು ಒತ್ತುವರಿ ಮಾಡಿದ್ದ 41 ಎಕರೆ ಭೂಪ್ರದೇಶವನ್ನು ತೆರವುಗೊಳಿಸಲಾಗಿದೆ. ಕಳೆದ ವಿಚಾರಣೆ ವೇಳೆ ನ್ಯಾಯಾಲಯ ನೀಡಿದ್ದ ನಿರ್ದೇಶನದಂತೆ ತರೀಕೆರೆ ಉಪ ವಿಭಾಗಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿಸಿ, ಪರಿಶೀಲನಾ ವರದಿಯನ್ನು ಮೆಮೊದೊಂದಿಗೆ ಪೀಠಕ್ಕೆ ಸಲ್ಲಿಸಿದರು.

ಅರ್ಜಿದಾರರ ಪರ ಹಿರಿಯ ವಕೀಲೆ ಜಯ್ನಾ ಕೊಠಾರಿ ಅವರು ವರದಿಯಲ್ಲಿರುವ ಅಂಶಗಳನ್ನು ಪರಿಶೀಲಿಸಿ, ಪ್ರತಿಕ್ರಿಯಿಸಲು ಆರು ವಾರ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ಅದನ್ನು ಪರಿಗಣಿಸಿದ ಪೀಠವು ವಿಚಾರಣೆಯನ್ನು ಬೇಸಿಗೆ ರಜೆಯ ನಂತರಕ್ಕೆ ಮುಂದೂಡಿತು.

ಸ್ಥಳ ಪರಿಶೀಲನೆ ವರದಿ ಸಲ್ಲಿಸಲು ನಿರ್ದೇಶನ: ಮಾರ್ಚ್‌ 7ರಂದು ಅರ್ಜಿ ವಿಚಾರಣೆಗೆ ಬಂದಿದ್ದಾಗ, ಪಶುಸಂಗೋಪನಾ ಇಲಾಖೆಯ ಅಮೃತ್ ಮಹಲ್ ಜಾನುವಾರು ಸಂವರ್ಧನಾ ಕೇಂದ್ರದ ಉಪ ನಿರ್ದೇಶಕ ಡಾ. ಹನುಮಂತ ನಾಯ್ಕ ಕರ್ಬರಿ ಅನುಪಾಲನಾ ವರದಿ ಸಲ್ಲಿಸಿ, ವಿವಾದಿತ ಪ್ರದೇಶದಲ್ಲಿ 9 ಕಾವಲುದಾರರು 41 ಎಕರೆ ಭೂಮಿಯನ್ನು ಒತ್ತುವರಿ ಮಾಡಿದ್ದರು. ಇದನ್ನು ವಶಕ್ಕೆ ಪಡೆದು, ಸುತ್ತಲೂ ಟ್ರೆಂಚ್ ನಿರ್ಮಿಸಿ, ಸಂರಕ್ಷಿಸಲಾಗಿದೆ ಎಂದು ತಿಳಿಸಿದ್ದರು.

ಅದನ್ನು ಆಕ್ಷೇಪಿಸಿದ್ದ ಅರ್ಜಿದಾರರ ಪರ ವಕೀಲರು, ಸರ್ಕಾರದ ಅನುಪಾಲನಾ ವರದಿಗೂ ವಾಸ್ತವಕ್ಕೂ ವ್ಯತ್ಯಾಸವಿದೆ. ಕಾವಲುದಾರರು ಇನ್ನೂ ಭೂಮಿಯಲ್ಲಿ ಉಳುಮೆ ನಡೆಸುತ್ತಿದ್ದಾರೆ. ಕೆಲವೆಡೆ ಬಿಟ್ಟು ಬೇರೆಲ್ಲೂ ಟ್ರೆಂಚ್ ನಿರ್ಮಾಣ ಮಾಡಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಅದನ್ನು ಪರಿಗಣಿಸಿದ ಪೀಠವು ಒತ್ತುವರಿ ತೆರವಿನ ಸತ್ಯಾಸತ್ಯತೆ ಪರಿಶೀಲಿಸಲು ಚಿಕ್ಕಮಗಳೂರು ಜಿಲ್ಲಾಧಿಕಾರಿ ಒಬ್ಬ ಅಧಿಕಾರಿಯನ್ನು ನೇಮಕ ಮಾಡಬೇಕು. ಆ ಅಧಿಕಾರಿ ಸ್ಥಳ ಪರಿಶೀಲನೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿತ್ತು.