ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಬಸೂರು ವ್ಯಾಪ್ತಿಯಲ್ಲಿನ ಅಮೃತ್ ಮಹಲ್ ಕಾವಲ್‌ನ ಕಾವಲುದಾರರು ಒತ್ತುವರಿ ಮಾಡಿದ್ದ 41 ಎಕರೆ ಭೂಪ್ರದೇಶವನ್ನು ತೆರವುಗೊಳಿಸಲಾಗಿದೆಯೋ ಇಲ್ಲವೋ ಎಂಬುದನ್ನು ಸ್ಥಳಕ್ಕೆ ತೆರಳಿ, ಪರಿಶೀಲಿಸಿ ವರದಿ ಸಲ್ಲಿಸಲು ಸಹಾಯಕ ಆಯುಕ್ತರ ಶ್ರೇಣಿಗೆ ಸಮನಾದ ಅಧಿಕಾರಿ ನೇಮಕ ಮಾಡುವಂತೆ ಜಿಲ್ಲಾಧಿಕಾರಿಗೆ ಸೋಮವಾರ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ವನ್ಯಜೀವಿ ಸಂರಕ್ಷಣಾ ಕಾರ್ಯಪಡೆ ಮತ್ತು ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲೆ ಜಯ್ನಾ ಕೊಠಾರಿ ಅವರು “ಪಶುಸಂಗೋಪನಾ ಇಲಾಖೆಯ ಅಮೃತ್ ಮಹಲ್ ಜಾನುವಾರು ಸಂವರ್ಧನಾ ಕೇಂದ್ರದ ಉಪ ನಿರ್ದೇಶಕ ಡಾ. ಹನುಮಂತ ನಾಯ್ಕ್ ಕರ್ಬರಿ ಫೆಬ್ರವರಿ 24ರಂದು ಅನುಪಾಲನಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಇದರಲ್ಲಿ 9 ಕಾವಲುದಾರರು 41 ಎಕರೆ ಭೂಮಿಯನ್ನು ಒತ್ತುವರಿ ಮಾಡಿದ್ದರು. ಇದನ್ನು ವಶಕ್ಕೆ ಪಡೆದು, ಸುತ್ತಲೂ ಟ್ರೆಂಚ್ ನಿರ್ಮಿಸಿ ಆಕ್ಷೇಪಾರ್ಹವಾದ ಭೂಮಿಯನ್ನು ಸಂರಕ್ಷಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ, ವಾಸ್ತವದಲ್ಲಿ ಬೇರೆ ಪರಿಸ್ಥಿತಿ ಇದೆ” ಎಂದರು.
“ಸರ್ಕಾರದ ಅನುಪಾಲನಾ ವರದಿಗೂ ವಾಸ್ತವಕ್ಕೂ ವ್ಯತ್ಯಾಸವಿದೆ. ಕಾವಲುದಾರರು ಇನ್ನೂ ಭೂಮಿಯಲ್ಲಿ ಉಳುಮೆ ನಡೆಸುತ್ತಿದ್ದಾರೆ. ಕೆಲವು ಕಡೆ ಬಿಟ್ಟು ಬೇರೆಲ್ಲೂ ಟ್ರೆಂಚ್ ನಿರ್ಮಾಣ ಮಾಡಿರುವುದು ಕಂಡು ಬಂದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಆಕ್ಷೇಪಣೆ ಮತ್ತು ಫೋಟೊಗಳನ್ನು ಲಗತ್ತಿಸಿದ್ದೇವೆ” ಎಂದು ಪೀಠದ ಗಮನ ಸೆಳೆದರು.
ಇದನ್ನು ದಾಖಲಿಸಿಕೊಂಡ ನ್ಯಾಯಾಲಯವು “ಪಶುಸಂಗೋಪನಾ ಇಲಾಖೆಯ ಅಮೃತ್ ಮಹಲ್ ಜಾನುವಾರು ಸಂವರ್ಧನಾ ಕೇಂದ್ರದ ಉಪ ನಿರ್ದೇಶಕ ಡಾ. ಹನುಮಂತ ನಾಯ್ಕ್ ಕರ್ಬರಿ ಅವರು ಸಲ್ಲಿಸಿರುವ ಅನುಪಾಲನಾ ವರದಿಯು ಸರಿಯೋ, ತಪ್ಪೋ ಎಂಬುದನ್ನು ಸ್ಥಳಕ್ಕೆ ತೆರಳಿ ಪರಿಶೀಲಿಸಲು ಚಿಕ್ಕಮಗಳೂರು ಜಿಲ್ಲಾಧಿಕಾರಿ ಅವರು ಸಹಾಯಕ ಆಯುಕ್ತರ ಶ್ರೇಣಿಗಿಂತ ಕೆಳಗಿರದ ಅಧಿಕಾರಿಯನ್ನು ನೇಮಕ ಮಾಡಬೇಕು. ಆ ಅಧಿಕಾರಿಯು ಅರ್ಜಿದಾರರು ಹಾಗೂ ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಿ ಸ್ಥಳ ಪರಿಶೀಲಿಸಿ ಮುಂದಿನ ವಿಚಾರಣೆ ವೇಳೆಗೆ ವರದಿ ಸಲ್ಲಿಸಬೇಕು” ಎಂದು ಆದೇಶಿಸಿದ್ದು, ವಿಚಾರಣೆಯನ್ನು ಮಾರ್ಚ್ 23ಕ್ಕೆ ಮುಂದೂಡಿದೆ.