CJ Ritu Raj Awasthi and Justice Suraj Govindraj, Karnataka HC

 
ಸುದ್ದಿಗಳು

[ಅಮೃತ್‌ ಮಹಲ್‌ ಕಾವಲ್‌ ಒತ್ತುವರಿ] ಕಾವಲುದಾರರಿಗೆ ಭೂಮಿ ನೀಡುವಂತಿಲ್ಲ, ಅಗತ್ಯವಾದರೆ ಸಂಬಳ ನೀಡಿ: ಹೈಕೋರ್ಟ್‌ ಆದೇಶ

ಬಸೂರು ಅಮೃತ್‌ ಮಹಲ್‌ ಕಾವಲ್‌ನಲ್ಲಿ ಕಾವಲುದಾರರು 41 ಎಕರೆ ಒತ್ತುವರಿ ಮಾಡಿದ್ದು, ಅದನ್ನು ತೆರವು ಮಾಡಿ ಭೂಮಿ ವಶಕ್ಕೆ ಪಡೆಯಲಾಗಿದೆ. ಕೆಲವು ಕಡೆ ಬೆಳೆ ಇರುವುದರಿಂದ ಕಟಾವು ಮಾಡಿಕೊಳ್ಳಲು ಕಾವಲುದಾರರಿಗೆ 15 ದಿನಗಳ ಕಾಲಾವಕಾಶ ನೀಡಲಾಗಿದೆ.

Siddesh M S

"ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಬಸೂರು ವ್ಯಾಪ್ತಿಯಲ್ಲಿನ ಅಮೃತ್‌ ಮಹಲ್‌ ಕಾವಲ್‌ನ ಕಾವಲುದಾರರಿಗೆ ಜೀವನ ನಡೆಸಲು ಎರಡು ಎಕರೆ ಭೂಮಿ ನೀಡಿದರೆ ಸಂರಕ್ಷಿತ ಭೂಮಿಯನ್ನು ಒತ್ತುವರಿಯಾಗದಂತೆ ತಡೆಯುವ ಕೆಲಸಕ್ಕೆ ಹಿನ್ನಡೆಯಾಗುತ್ತದೆ. ಹೀಗಾಗಿ, ಕಾವಲುದಾರರ ಸೇವೆ ಅಗತ್ಯವಾದರೆ ಸರ್ಕಾರ ಅವರಿಗೆ ಸಂಬಳ ನೀಡಿ ಅವರ ಸೇವೆ ಬಳಸಿಕೊಳ್ಳಬೇಕು. ಸಂರಕ್ಷಿತ ಪ್ರದೇಶದ ಬಳಿ ಕಾವಲುದಾರರಿಗೆ ಸರ್ಕಾರ ಭೂಮಿ ನೀಡುವಂತಿಲ್ಲ" ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಮಹತ್ವದ ಆದೇಶ ಮಾಡಿದೆ.

ವನ್ಯಜೀವಿ ಸಂರಕ್ಷಣಾ ಕಾರ್ಯಪಡೆ ಮತ್ತು ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಕಾವಲುದಾರರಿಗೆ ಭೂಮಿ ನೀಡಿದರೆ ಸಂರಕ್ಷಿತ ಭೂಮಿಯನ್ನು ಒತ್ತುವರಿಯಾಗದಂತೆ ತಡೆಯುವುದಕ್ಕೆ ಸಮಸ್ಯೆಯಾಗುತ್ತದೆ. ಅಂತಿಮವಾಗಿ ಇದು ಸಂರಕ್ಷಿತ ಭೂಮಿಯ ಒತ್ತುವರಿಯಲ್ಲಿ ಅಂತ್ಯ ಕಾಣುತ್ತದೆ. ಇದಕ್ಕಾಗಿ ಉಳುಮೆ ಮಾಡಿ ಬದುಕು ನಡೆಸಲು ಕಾವಲುದಾರರಿಗೆ ಭೂಮಿ ನೀಡುವ ಕೆಲಸವನ್ನು ಸರ್ಕಾರ ನಿಲ್ಲಿಸಬೇಕು ಎಂದು ಪೀಠವು ಆದೇಶ ಮಾಡಿದೆ.

ಕಾವಲುದಾರರು ಭೂಮಿಯನ್ನು ಉಳುಮೆ ಮಾಡಲು ನಿರ್ದಿಷ್ಟ ಮೊತ್ತವನ್ನು ಅಂಚೆ ಇಲಾಖೆಯಲ್ಲಿ ಠೇವಣಿ ಇಟ್ಟು ಅಂಚೆ ಪ್ರತಿಯನ್ನು ಭದ್ರತಾ ಠೇವಣಿಯನ್ನಾಗಿ ಹಾಜರುಪಡಿಸಬೇಕು ಎಂದು ಈ ಹಿಂದೆ ಸರ್ಕಾರಿ ಸುತ್ತೋಲೆಯಲ್ಲಿ ಹೇಳಲಾಗಿತ್ತು. ಸದರಿ ಸರ್ಕಾರಿ ಸುತ್ತೋಲೆಯ ಸಿಂಧುತ್ವವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ಆರು ವರ್ಷಗಳಲ್ಲಿ ಸುತ್ತೋಲೆಯ ನಿಬಂಧನೆಯನ್ನು ಪೂರೈಸಬೇಕು ಎಂದು ಕಾವಲುದಾರರಿಗೆ ಆದೇಶಿಸಿ ನ್ಯಾಯಾಲಯವು ಮನವಿ ವಿಲೇವಾರಿ ಮಾಡಿತ್ತು. ಯಾವ ರೀತಿಯಲ್ಲೂ ಆಕ್ಷೇಪಿತ ಪ್ರದೇಶದಲ್ಲಿ ಉಳುಮೆ ಮಾಡುವ ಅಧಿಕಾರವನ್ನು ನ್ಯಾಯಾಲಯವು ಕಾವಲುದಾರರಿಗೆ ನೀಡಿರಲಿಲ್ಲ ಎಂದು ಪೀಠವು ಆದೇಶದಲ್ಲಿ ದಾಖಲಿಸಿದೆ.

2008ರ ಫೆಬ್ರವರಿ 6ರ ಸರ್ಕಾರದ ಆದೇಶಕ್ಕೆ ಸಂಬಂಧಿಸಿದಂತೆ ಕಾವಲುದಾರರ ಹಕ್ಕುಗಳನ್ನು ರಕ್ಷಿಸುವ ವಿಚಾರದಲ್ಲಿ ಸರ್ಕಾರದ ವಕೀಲರು ತೋರುತ್ತಿರುವ ಆಸಕ್ತಿಯನ್ನು ಮೆಚ್ಚಲು ನಮಗೆ ಸಾಧ್ಯವಾಗುತ್ತಿಲ್ಲ. ಏಕೆಂದರೆ, ಸರ್ಕಾರದ ಭೂಮಿಯನ್ನು ಕಾವಲುದಾರರು ಅತಿಕ್ರಮಿಸುತ್ತಾರೆ ಎಂಬುದು ನಮ್ಮ ನಿಲುವಾಗಿದೆ. ಹೀಗಾಗಿ, ರಾಜ್ಯ ಸರ್ಕಾರವು ಸೇರಿದಂತೆ ಪ್ರತಿವಾದಿಗಳು ಆಕ್ಷೇಪಿತ ಪ್ರದೇಶದಲ್ಲಿನ ಒತ್ತುವರಿ ತೆರವು ಮತ್ತು ಅದನ್ನು ಸಂರಕ್ಷಿಸುವುದಕ್ಕೆ ಸಂಬಂಧಿಸಿದಂತೆ ಕೈಗೊಳ್ಳಲಾಗುವ ಕ್ರಮದ ಕುರಿತು ಅನುಪಾಲನಾ ಅಫಿಡವಿಟ್‌ ಸಲ್ಲಿಸಬೇಕು ಎಂದು ಪೀಠವು ನಿರ್ದೇಶಿಸಿದ್ದು, ವಿಚಾರಣೆಯನ್ನು ಫೆಬ್ರವರಿ 23ಕ್ಕೆ ಮುಂದೂಡಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲೆ ಜಯ್ನಾ ಕೊಠಾರಿ ಅವರು “ಭೂಮಿಯ ಎಲ್ಲೆ ಗುರುತಿಸಲು ಯಾವುದೇ ವಿಧಾನ ಅನುಸರಿಸಲಾಗಿಲ್ಲ. ಕಾವಲುದಾರರಿಗೆ ತಾತ್ಕಾಲಿಕವಾಗಿ ಆ ಭೂಮಿಯಲ್ಲಿ ಬೆಳೆದು ಜೀವನ ನಡೆಸಲು ಅವಕಾಶ ಮಾಡಿಕೊಟ್ಟಿರಬಹುದು. ಇದು ಅಂತಿಮವಾಗಿ ಸಂರಕ್ಷಿತ ಪ್ರದೇಶದ ಒತ್ತುವರಿಗೆ ನಾಂದಿ ಹಾಡಲಿದೆ” ಎಂದು ತಕರಾರು ಎತ್ತಿದ್ದರು.

ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲೆ ಎಚ್‌ ವಾಣಿ ಅವರು “2008ರ ಫೆಬ್ರವರಿ 6ರ ಸರ್ಕಾರದ ಆದೇಶದಂತೆ ಕಾವಲುದಾರರು ತಲಾ 2 ಎಕರೆ ಭೂಮಿಯಲ್ಲಿ ಉಳುಮೆ ಮಾಡಿ ಜೀವನ ನಡೆಸಲು ಅರ್ಹರಾಗಿದ್ದಾರೆ. ಅವರಿಗೆ 2021ರ ಸೆಪ್ಟೆಂಬರ್‌ 22ರ ಏಕಸದಸ್ಯ ಪೀಠದ ಆದೇಶದಲ್ಲಿ ರಕ್ಷಣೆ ಒದಗಿಸಲಾಗಿದೆ” ಎಂದು ಸಮರ್ಥಿಸಿದರು.

ಅಧಿಕಾರಿಗಳ ಖುದ್ದು ಹಾಜರಾತಿ

ಕಳೆದ ವಿಚಾರಣೆಯಲ್ಲಿ ನ್ಯಾಯಾಲಯ ನಿರ್ದೇಶಿಸಿದ್ದ ಹಿನ್ನೆಲೆಯಲ್ಲಿ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಂಜಯ್‌ ಬಿಜ್ಜೂರ್‌ ಮತ್ತು ಪಶುಸಂಗೋಪನಾ ಇಲಾಖೆಯ ಅಮೃತ್‌ ಮಹಲ್‌ ಜಾನುವಾರು ಸಂವರ್ಧನಾ ಕೇಂದ್ರದ ಉಪ ನಿರ್ದೇಶಕ ಡಾ. ಹನುಮಂತ ನಾಯ್ಕ್‌ ಕರ್ಬರಿ ಅವರು ನ್ಯಾಯಾಲಯದ ಮುಂದೆ ಖುದ್ದಾಗಿ ಹಾಜರಾಗಿದ್ದರು.

ಆಕ್ಷೇಪಿತ ಭೂಮಿಯನ್ನು ಕಾವಲುದಾರರು ಒತ್ತುವರಿ ಮಾಡಿರುವುದಕ್ಕೆ ಸಂಬಂಧಿಸಿದಂತೆ ಬಸೂರು ಅಮೃತ್‌ ಮಹಲ್‌ ಕಾವಲ್‌ ಕೃಷ್ಣಮೃಗ ಸಂರಕ್ಷಿತ ಮೀಸಲು ನಿರ್ವಹಣಾ ಸಮಿತಿಯನ್ನು ರಚಿಸಲಾಗಿದೆ. ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯ ಜೊತೆಗೆ ಚರ್ಚೆ ನಡೆಸಿದ್ದು, ನ್ಯಾಯಾಲಯದ ಆದೇಶ ಪಾಲನೆಗೆ ಸಂಬಂಧಿಸಿದಂತೆ ತಕ್ಷಣ ಕ್ರಮಕೈಗೊಳ್ಳುವಂತೆ ಅವರಿಗೆ ಮನವಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರು ಒತ್ತುವರಿ ತೆರೆವು ಮಾಡುವುದಕ್ಕೆ ಸಂಬಂಧಿಸಿದಂತೆ ವಿಶೇಷ ಕಾರ್ಯಪಡೆ ಸಮಿತಿ ಸಭೆ ನಡೆಸಿ ನಿರ್ದೇಶನಗಳನ್ನು ನೀಡಿದ್ದಾರೆ. ಅಗತ್ಯ ಕ್ರಮಕೈಗೊಂಡು ಒತ್ತುವರಿ ತೆರವು ಮಾಡಲಾಗಿದೆ. ಒತ್ತುವರಿ ತೆರವು ಮಾಡುವುದು ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ವ್ಯಾಪ್ತಿಗೆ ಬರಲಿದ್ದು, ಈ ವಿಚಾರದಲ್ಲಿ ಅರಣ್ಯ ಇಲಾಖೆಯ ನೇರ ಪಾತ್ರವಿಲ್ಲ ಎಂದು ಸಂಜಯ್‌ ಬಿಜ್ಜೂರ್‌ ಅಫಿಡವಿಟ್‌ನಲ್ಲಿ ವಿವರಿಸಿದ್ದಾರೆ. ಹೀಗಾಗಿ, ಬಿಜ್ಜೂರ್‌ ಅವರ ಅಫಿಡವಿಟ್‌ ಅನ್ನು ಆದೇಶದಲ್ಲಿ ದಾಖಲಿಸಿಕೊಳ್ಳಲಾಗಿದೆ ಎಂದು ಪೀಠವು ಹೇಳಿದೆ.

41 ಎಕರೆ ಒತ್ತುವರಿ ತೆರವು

ಬಸೂರು ಅಮೃತ್‌ ಮಹಲ್‌ ಕಾವಲ್‌ನಲ್ಲಿ ಕಾವಲುದಾರರು 41 ಎಕರೆ ಒತ್ತುವರಿ ಮಾಡಿದ್ದು, ಅದನ್ನು ತೆರವು ಮಾಡಿ ಭೂಮಿ ವಶಕ್ಕೆ ಪಡೆಯಲಾಗಿದೆ. ಕೆಲವು ಕಡೆ ಬೆಳೆ ಇರುವುದರಿಂದ ಅದನ್ನು ಕಟಾವು ಮಾಡಿಕೊಳ್ಳಲು ಕಾವಲುದಾರರಿಗೆ 15 ದಿನಗಳ ಕಾಲಾವಕಾಶ ನೀಡಲಾಗಿದ್ದು, ಆ ಬಳಿಕ ಅವರು ಅದನ್ನು ಸಂಬಂಧಿತ ಪ್ರಾಧಿಕಾರದ ವಶಕ್ಕೆ ನೀಡಬೇಕು. ಡಾ. ಹನುಮಂತ್‌ ನಾಯ್ಕ್‌ ಅವರ ಅಫಿಡವಿಟ್‌ನಲ್ಲಿ 2008ರ ಫೆಬ್ರವರಿ 6ರ ಸರ್ಕಾರದ ಆದೇಶದಂತೆ ಒಂಭತ್ತು ಕಾವಲುದಾರರಿಗೆ ತಲಾ 2 ಎಕರೆ ಭೂಮಿಯನ್ನು ತಾತ್ಕಾಲಿಕವಾಗಿ ನೀಡಬೇಕು ಎಂದು ಉಲ್ಲೇಖಿಸಲಾಗಿದೆ ಎಂದು ಪೀಠವು ದಾಖಲಿಸಿಕೊಂಡಿದೆ.