Andhra Pradesh High Court 
ಸುದ್ದಿಗಳು

ನ್ಯಾಯಾಂಗ ನಿಂದನೆ: ಇಬ್ಬರು ಐಎಎಸ್‌ ಸೇರಿದಂತೆ ಐವರು ಅಧಿಕಾರಿಗಳಿಗೆ ಜೈಲು ಶಿಕ್ಷೆ ವಿಧಿಸಿದ ಆಂಧ್ರಪ್ರದೇಶ ಹೈಕೋರ್ಟ್

ನ್ಯಾಯಾಲಯದ ಆದೇಶಗಳನ್ನು ತ್ವರಿತವಾಗಿ ಪಾಲಿಸಲಾಗಿದೆಯೆ ಎಂದು ನೋಡಿಕೊಳ್ಳುವುದು ಪ್ರತಿವಾದಿಗಳ ಜವಾಬ್ದಾರಿ. ಆದೇಶ ಪಾಲಿಸಲು ಯಾವುದೇ ತೊಂದರೆಯಾದರೆ ಅವರು ಗಡುವು ವಿಸ್ತರಿಸುವಂತೆ ಕೋರಿ ನ್ಯಾಯಾಲಯವನ್ನು ಸಂಪರ್ಕಿಸಬೇಕಾಗುತ್ತದೆ ಎಂದಿದೆ ಪೀಠ.

Bar & Bench

ನ್ಯಾಯಾಂಗ ನಿಂದನೆಗಾಗಿ ಆಂಧ್ರಪ್ರದೇಶ ಹೈಕೋರ್ಟ್ ಇತ್ತೀಚೆಗೆ ಇಬ್ಬರು ಐಎಎಸ್‌ ಅಧಿಕಾರಿಗಳು ಹಾಗೂ ಮೂವರು ಸರ್ಕಾರಿ ಅಧಿಕಾರಿಗಳಿಗೆ ಒಂದು ತಿಂಗಳ ಕಾಲ ಸಾದಾ ಜೈಲು ಶಿಕ್ಷೆ ವಿಧಿಸಿದೆ [ಬಿ ಸುರೇಂದ್ರ ಮತ್ತು ದ್ವಾರಕಾ ತಿರುವಲ ರಾವ್‌ ನಡುವಣ ಪ್ರಕರಣ].

ಸೇವಾ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಉದ್ದೇಶಪೂರ್ವಕವಾಗಿ ನ್ಯಾಯಾಲಯ ಆಗಸ್ಟ್ 2022ರಲ್ಲಿ ನೀಡಿದ್ದ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ಆರೋಪಿಗಳು ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ನ್ಯಾ, ಕೆ ಮನ್ಮಥ ರಾವ್ ಅವರು ತಿಳಿಸಿದ್ದಾರೆ.

ಆದೇಶ ಪಾಲಿಸದೇ ಇರಲು ಕಾರಣವೇನು ಎಂಬುದನ್ನು ವಿವರಿಸದೆ ಅಥವಾ ಆದೇಶ ಪಾಲನೆಗಾಗಿ ಸಮಾಯವಕಾಶ ವಿಸ್ತರಿಸಲು ಕೋರದೆ ನ್ಯಾಯಾಲಯದ ಆದೇಶ ಪಾಲನೆಯಲ್ಲಿ ಆರೋಪಿಗಳು ವಿನಾಕಾರಣ ವಿಳಂಬ ಮಾಡಿದ್ದಾರೆ. ಮಾತ್ರವಲ್ಲ ಆದೇಶ ಪಾಲನೆಗಾಗಿ ಗಡುವು ವಿಸ್ತರಿಸಿದ್ದರೂ ಆದೇಶ ಪಾಲನೆ ತಪ್ಪಿಸಲು ಯತ್ನಿಸಿದ್ದಾರೆ ಎಂಬುದಾಗಿ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.

ನ್ಯಾಯಾಲಯದ ಆದೇಶ ಜಾರಿಗೆ ತರುವಂತೆ ಪ್ರತಿವಾದಿಗಳಿಗೆ ಮನವಿ ಮಾಡಿದರೂ ಕೂಡ ಅವರು ನಮ್ಮ ಸೇವೆ ಖಾಯಂಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು.

ಆದರೆ ಇದಕ್ಕೆ ಆಕ್ಷೇಪಿಸಿದ್ದ ಪ್ರತಿವಾದಿಗಳು ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದು ವಿಚಾರಣೆ ಇನ್ನೂ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಆದೇಶ ಪಾಲಿಸಿಲ್ಲ. ಸಾಮಾನ್ಯವಾಗಿ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದಾಗ ನ್ಯಾಯಾಂಗ ನಿಂದನೆ ಪ್ರಕ್ರಿಯೆಯನ್ನು ನ್ಯಾಯಾಲಯ ಆರಂಭಿಸುವುದಿಲ್ಲ ಇಲ್ಲವೇ ತೀರ್ಪು ನೀಡುವುದಿಲ್ಲ. ಜೊತೆಗೆ ರಿಟ್ ನಿಯಮಗಳ ಅಡಿಯಲ್ಲಿ, ಆದೇಶ ಜಾರಿಗೆ ಯಾವುದೇ ಕಾಲಮಿತಿಯನ್ನು ನಿಗದಿಪಡಿಸದಿದ್ದರೆ, ಅದನ್ನು ಎರಡು ತಿಂಗಳಲ್ಲಿ ಜಾರಿಗೊಳಿಸಬಹುದು ಎಂದು ವಾದ ಮಂಡಿಸಿದ್ದರು.  

ಆದರೆ ನ್ಯಾಯಾಲಯವು “ವಾಸ್ತವವಾಗಿ ರಿಟ್ ಮೇಲ್ಮನವಿಯನ್ನು ನವೆಂಬರ್ 2022 ರಲ್ಲಿ ಸಲ್ಲಿಸಲಾಗಿದೆ. ಪ್ರತಿವಾದಿಗಳು ವಾದಿಸಿದಂತೆ ಇನ್ನೂ ಎರಡು ತಿಂಗಳ ಅವಧಿಯು 01.10.2022 ರಂದು ಮುಕ್ತಾಯಗೊಳ್ಳಬೇಕಿತ್ತು. ನ್ಯಾಯಾಂಗ ನಿಂದನೆ ಪ್ರಕರಣವನ್ನು ನವೆಂಬರ್ 2022 ರಲ್ಲಿ ದಾಖಲಿಸಲಾಗಿದೆ. ಪ್ರತಿವಾದಿಗಳು ಎರಡು ತಿಂಗಳ ಅವಧಿ ಮುಗಿದ ನಂತರವೂ ನ್ಯಾಯಾಲಯದ ಆದೇಶ ಪಾಲಿಸದೆ ಉದ್ದೇಶಪೂರ್ವಕವಾಗಿ ಪ್ರಕರಣವನ್ನು ವಿಳಂಬಗೊಳಿಸಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ ಎಂದು ಹೇಳಿದೆ.  

ವಾದಗಳನ್ನು ಪರಿಶೀಲಿಸಿದ ಏಕಸದಸ್ಯ ಪೀಠ, ಇತ್ಯರ್ಥಗೊಂಡ ಕಾನೂನಿನ ಪ್ರಕಾರ, ಮೇಲ್ಮನವಿಯಲ್ಲಿನ ಪ್ರಕ್ರಿಯೆಗಳಿಗೆ ತಡೆ ನೀಡದ ಹೊರತು, ನ್ಯಾಯಾಲಯವು ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳನ್ನು ಆರಂಭಿಸಬಹುದಾಗಿದೆ ಎಂದು ಕೂಡ ಹೇಳಿದೆ. ಇದಲ್ಲದೆ ಮೇಲ್ಮನವಿ ಬಾಕಿ ಇರುವ ಹಿನ್ನೆಲೆಯಲ್ಲಿ ಹಲವು ಬಾರಿ ಪ್ರಕರಣವನ್ನು ಮುಂದೂಡಲಾಗಿತ್ತು ಎಂದು ಕೂಡ ತಿಳಿಸಲಾಗಿದೆ.

ನ್ಯಾಯಾಲಯದ ಆದೇಶಗಳನ್ನು ತ್ವರಿತವಾಗಿ ಪಾಲಿಸಲಾಗಿದೆಯೆ ಎಂದು ನೋಡಿಕೊಳ್ಳುವುದು ಪ್ರತಿವಾದಿಗಳ ಜವಾಬ್ದಾರಿ. ಆದೇಶ ಪಾಲಿಸಲು ಯಾವುದೇ ತೊಂದರೆಯಾದರೆ ಅವರು ಗಡುವು ವಿಸ್ತರಿಸುವಂತೆ ಕೋರಿ ನ್ಯಾಯಾಲಯವನ್ನು ಸಂಪರ್ಕಿಸಬೇಕಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಸ್ತುತ ಪ್ರಕರಣದಲ್ಲಿ, ರಿಟ್ ಮೇಲ್ಮನವಿ ಆರು ತಿಂಗಳಿನಿಂದ ಬಾಕಿ ಉಳಿದಿದೆ ಎಂಬುದನ್ನು ಪ್ರತಿಪಾದಿಸುವುದನ್ನು ಹೊರತುಪಡಿಸಿ ಪ್ರತಿವಾದಿಗಳು ಆದೇಶ ಪಾಲನೆಗೆ ಯಾವುದೇ ಯತ್ನ ಮಾಡಿಲ್ಲ ಎಂದು ಹೇಳಿದ ನ್ಯಾಯಾಲಯ ಪ್ರತಿವಾದಿಗಳು ನ್ಯಾಯಾಂಗ ನಿಂದನೆ ಪ್ರಕರಣದ ದೋಷಿಗಳು ಎಂದು ಪರಿಗಣಿಸಿದೆ.