ಅವುಲಪಲ್ಲಿ ಜಲಾಶಯಕ್ಕೆ ನೀಡಲಾಗಿದ್ದ ಪರಿಸರ ಅನುಮೋದನೆಯನ್ನು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯು (ಎನ್‌ಜಿಟಿ) ರದ್ದುಪಡಿಸಿರುವುದನ್ನು ಪ್ರಶ್ನಿಸಿ ಆಂಧ್ರ ಪ್ರದೇಶ ಸರ್ಕಾರವು ಸೋಮವಾರ ಸುಪ್ರೀಂ ಕೋರ್ಟ್ ಕದ ತಟ್ಟಿದೆ.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಜೆ ಬಿ ಪರ್ದಿವಾಲಾ ಅವರ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ಹಿರಿಯ ವಕೀಲ ಮುಕುಲ್ ರೋಹಟ್ಗಿ ಅವರು ಪ್ರಕರಣ ಉಲ್ಲೇಖಿಸಿದರು. ಇದಕ್ಕೆ ಪೀಠವು ಪ್ರಕರಣವನ್ನು ಮೇ 17ಕ್ಕೆ ವಿಚಾರಣೆಗೆ ನಿಗದಿಪಡಿಸಲಾಗುವುದು ಎಂದಿತು.
“ಇದೊಂದು ವಿಶಿಷ್ಟ ಪ್ರಕರಣ. ಎನ್‌ಜಿಟಿ ಆದೇಶವನ್ನು ಪ್ರಶ್ನಿಸಿದ್ದೇವೆ. ಜಲಾಶಯಕ್ಕೆ ₹3 ಸಾವಿರ ಕೋಟಿ ತಗುಲಲಿದ್ದು, ಪರಿಸರ ಅನುಮೋದನೆ ರದ್ದುಪಡಿಸಲಾಗಿದೆ. ಮುಂಗಾರು ಸಮೀಪಿಸುತ್ತಿದ್ದು, ನಿನ್ನೆ ಮೇಲ್ಮನವಿ ಸಲ್ಲಿಸಲಾಗಿದೆ” ಎಂದು ರೋಹಟ್ಗಿ ಹೇಳಿದರು.
ಇದಕ್ಕೆ ಸಿಜೆಐ ಅವರು “ಇದೊಂದು ಸಾರ್ವಜನಿಕ ಯೋಜನೆಯಾಗಿರುವುದರಿಂದ ನಾವು ಪ್ರಕರಣವನ್ನು ನಾಡಿದ್ದು ವಿಚಾರಣೆಗೆ ಪಟ್ಟಿ ಮಾಡುತ್ತೇವೆ” ಎಂದರು.
ಆಂಧ್ರ ಪ್ರದೇಶ ರಾಜ್ಯ ಪರಿಸರ ಪರಿಣಾಮ ವಿಶ್ಲೇಷಣಾ ಪ್ರಾಧಿಕಾರವು (ಎಸ್‌ಇಐಎಎ) ಅವುಲಪಲ್ಲಿ ಜಲಾಶಯ ನಿರ್ಮಾಣಕ್ಕೆ ನೀಡಿದ್ದ ಪರಿಸರ ಒಪ್ಪಿಗೆಯನ್ನು ಮೇ 11ರಂದು ಚೆನ್ನೈನಲ್ಲಿರುವ ಎನ್‌ಜಿಟಿಯು ರದ್ದುಪಡಿಸಿತ್ತು. ಅಲ್ಲದೇ, ರಾಜ್ಯ ಜಲಸಂಪನ್ಮೂಲ ಇಲಾಖೆಗೆ ₹100 ಕೋಟಿ ದಂಡ ವಿಧಿಸಿತ್ತು.
ಎಸ್‌ಇಐಎಎ ಪರಿಸರ ಅನುಮೋದನೆ ನೀಡಿರುವುದನ್ನು ಪ್ರಶ್ನಿಸಿ ರೈತರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಪುಷ್ಪಾ ಸತ್ಯನಾರಾಯಣ ಮತ್ತು ತಜ್ಞ ಸದಸ್ಯರಾದ ಸತ್ಯಗೋಪಾಲ್ ಕೊಲ್ರಾಪಾಟಿ ಅವರು “ಪರಿಸರ ಮಾನದಂಡಗಳಿಗೆ ವಿರುದ್ಧವಾಗಿ ಎಸ್‌ಇಐಎಎಗೆ ವಂಚಿಸಿ, ತಪ್ಪು ಮಾಹಿತಿ ನೀಡುವ ಮೂಲಕ ಜಲಸಂಪನ್ಮೂಲ ಇಲಾಖೆಯು ನೀರಾವರಿ ಯೋಜನೆ ಜಾರಿ ಮಾಡುತ್ತಿದೆ” ಆದೇಶದಲ್ಲಿ ಹೇಳಿದ್ದರು.
2.50 ಟಿಎಂಸಿ ಅಡಿಯ ಸಾಮರ್ಥ್ಯದ ಅವುಲಪಲ್ಲಿ ಸಮನ್ವಯ ಜಲಾಶಯಕ್ಕೆ ಮಾತ್ರ ಪರಿಸರ ಅನುಮೋದನೆ ಪಡೆಯಲಾಗಿದೆ ಎಂದು ಮೇಲ್ಮನವಿಯಲ್ಲಿ ಉಲ್ಲೇಖಿಸಲಾಗಿದೆ.