N Chandrababu Naidu
N Chandrababu Naidu 
ಸುದ್ದಿಗಳು

ಆಂಧ್ರಪ್ರದೇಶ ಕೌಶಲ್ಯಾಭಿವೃದ್ಧಿ ಹಗರಣ: ಇಂದು ಚಂದ್ರಬಾಬು ನಾಯ್ಡು ಗೃಹ ಬಂಧನ ಮನವಿಯ ವಿಚಾರಣೆ ಸಾಧ್ಯತೆ

Bar & Bench

ಆಂಧ್ರಪ್ರದೇಶ ಕೌಶಲ್ಯಾಭಿವೃದ್ಧಿ ಯೋಜನೆ ಹಗರಣಕ್ಕೆ ಸಂಬಂಧಿಸಿದಂತೆ 14 ದಿನಗಳ ನ್ಯಾಯಾಂಗ ಬಂಧನಕ್ಕೊಳಗಾಗಿರುವ ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಕ್ಷದ ನಾಯಕ ಎನ್ ಚಂದ್ರಬಾಬು ನಾಯ್ಡು ಅವರನ್ನು ಗೃಹಬಂಧನಕ್ಕೆ ಒಪ್ಪಿಸಬೇಕು ಎಂದು ಕೋರಲಾದ ಅರ್ಜಿಯನ್ನು ವಿಜಯವಾಡದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ವಿಶೇಷ ನ್ಯಾಯಾಲಯ ಇಂದು (ಸೋಮವಾರ) ವಿಚಾರಣೆ ನಡೆಸುವ ಸಾಧ್ಯತೆ ಇದೆ.  

ಭಾನುವಾರ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದ್ದ ನ್ಯಾಯಾಲಯ ಗೃಹ ಬಂಧನ ಕುರಿತು ಆದೇಶ ನೀಡಲು ನಿರಾಕರಿಸಿತ್ತು. ನಾಯ್ಡು ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಅವರು ಆಂಧ್ರ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಜಡ್‌ ಪ್ಲಸ್‌ ಭದ್ರತೆ ವ್ಯಾಪ್ತಿಗೆ ಒಳಪಡುತ್ತಾರೆ, ಅವರಿಗೆ ಜೀವ ಬೆದರಿಕೆ ಇರುವುದನ್ನು ಪರಿಗಣಿಸಿ ಗೃಹಬಂಧನದಲ್ಲಿರಿಸಬೇಕು ಎಂದಿದ್ದರು.

ಕೌಶಲ್ಯಾಭಿವೃದ್ಧಿ ಯೋಜನೆಗಾಗಿ ಮೀಸಲಿಟ್ಟ ಸರ್ಕಾರಿ ಹಣವನ್ನು ನಕಲಿ ಬಿಲ್‌ ಸೃಷ್ಟಿಸಿ ವಿವಿಧ ಬೇನಾಮಿ ಕಂಪೆನಿಗಳಿಗೆ ವರ್ಗಾಯಿಸಿದ್ದಕ್ಕೆ ಸಂಬಂಧಿಸಿದ ಹಗರಣ ಇದಾಗಿದ್ದು ನಾಯ್ಡು ಅವರನ್ನು ಶನಿವಾರ ಬಂಧಿಸಲಾಗಿತ್ತು. ಸಿಐಡಿ ಮತ್ತು ಚಂದ್ರಬಾಬು ನಾಯ್ಡು ಪರ ವಕೀಲರ ವಾದ ಆಲಿಸಿದ  ನ್ಯಾಯಾಲಯ ಭಾನುವಾರ ನಾಯ್ಡು ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿತು.

ಸಿಐಡಿ ರಿಮಾಂಡ್‌ ರಿಪೋರ್ಟ್‌ ಪ್ರಶ್ನಿಸಿದ್ದ ನಾಯ್ಡು ಅವರು ತಮ್ಮನ್ನು ಸುಳ್ಳೇ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ವಿಜಯವಾಡ ನ್ಯಾಯಾಲಯದ ಮುಂದೆ ಪ್ರತಿಪಾದಿಸಿದ್ದರು. ಭ್ರಷ್ಟಾಚಾರ ತಡೆ ಕಾಯಿದೆಯ ಸೆಕ್ಷನ್ 17ಎಯನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ ಎಂದು ಅವರು ಹೇಳಿದ್ದರು.

ಅಧಿಕೃತ ಕರ್ತವ್ಯ ನಿರ್ವಹಿಸಿದ ಸಾರ್ವಜನಿಕ ಹುದ್ದೆಯಲ್ಲಿರುವವರ ವಿರುದ್ಧ ವಿಚಾರಣೆ ನಡೆಸಲು ಪೂರ್ವಾನುಮತಿ ಅಗತ್ಯ ಎಂದು ಕಾಯಿದೆಯ ಸೆಕ್ಷನ್ 17ಎ ಹೇಳುತ್ತದೆ. ತಾನು ಮುಖ್ಯಮಂತ್ರಿಯಾಗಿದ್ದರಿಂದ ಈ ಪ್ರಕರಣದಲ್ಲಿ ರಾಜ್ಯದ ರಾಜ್ಯಪಾಲರು ಅನುಮತಿ ನೀಡಬೇಕಾದ ಅಧಿಕಾರ ಹೊಂದಿರುತ್ತಾರೆ. ಹಾಗಿದ್ದರೂ ರಾಜ್ಯಪಾಲರ ಪೂರ್ವಾನುಮತಿ ಪಡೆಯದೆ ಭ್ರಷ್ಟಾಚಾರ ಪ್ರಕರಣದಲ್ಲಿ ತಮ್ಮ ವಿಚಾರಣೆಗೆ ಮುಂದಾಗಿರುವುದು ಸರಿಯಲ್ಲ ಎಂದು ನಾಯ್ಡು ವಾದಿಸಿದ್ದರು.

ಹಿಂದಿನ ಆಂಧ್ರಪ್ರದೇಶ ಸರ್ಕಾರ ಯೋಜನೆಗಾಗಿ ಕೌಶಲ್ಯ ಉದ್ಯಮಶೀಲತೆ ಮತ್ತು ನಾವೀನ್ಯತೆ ಇಲಾಖೆಯಡಿ ₹ 360 ಕೋಟಿ ಮೀಸಲಿಟ್ಟಿತ್ತು. ಇದನ್ನು 2015-16 ರ ಆರ್ಥಿಕ ವರ್ಷಕ್ಕೆ ರಾಜ್ಯ ಬಜೆಟ್‌ನಲ್ಲಿ ಸಂಯೋಜಿಸಲಾಗಿತ್ತು. ಈ ಹಂಚಿಕೆಯು ಅನುಮೋದಿತ ಬಜೆಟ್‌ನ ಭಾಗವಾಗಿರುವುದರಿಂದ, ಕ್ರಿಮಿನಲ್ ಮೊಕದ್ದಮೆಗಳ ಮೂಲಕ ವಿಚಾರಣೆ ನಡೆಸಬಾರದು ಎಂದು ಮನವಿಯಲ್ಲಿ ಪ್ರತಿಪಾದಿಸಲಾಗಿತ್ತು.

ಹಣ ದುರುಪಯೋಗ ಪಡಿಸಿಕೊಳ್ಳುವಲ್ಲಿ ತಮ್ಮ ಪಾತ್ರ ಇಲ್ಲ ಎಂದು ಸಿಐಡಿ ರಿಮಾಂಡ್‌ ರಿಪೋರ್ಟ್‌ ಕೂಡ ಹೇಳುತ್ತದೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 9, 2021ರಂದು ದಾಖಲಾದ ಎಫ್‌ಐಆರ್‌ನಲ್ಲಿ ತಮ್ಮ ವಿರುದ್ಧ ಯಾವುದೇ ಆರೋಪ ಇಲ್ಲ ಎಂದು ನಾಯ್ಡು ತಮ್ಮನ್ನು ಸಮರ್ಥಿಸಿಕೊಂಡಿದ್ದರು.

ಆದರೆ ಸಿಐಡಿಯು ವಾದ ಮಂಡಿಸಿ ಪ್ರಾಥಮಿಕವಾಗಿ ತಂತ್ರಜ್ಞಾನ ಪಾಲುದಾರರಿಂದ ಧನಸಹಾಯ ಪಡೆದ ಯೋಜನೆಯಾಗಿ ಆರಂಭವಾದ ಯೋಜನೆಯು ನಂತರ ತ್ರಿಪಕ್ಷೀಯ ಒಪ್ಪಂದದ ಮೂಲಕ ಕಾನೂನುಬಾಹಿರವಾಗಿ ಸರ್ಕಾರದ ಅನುದಾನಿತ ಉದ್ಯಮವಾಗಿ ಪರಿವರ್ತನೆಯಾಯಿತು ಎಂದು ಹೇಳಿತು.

ನಾಯ್ಡು ಅವರನ್ನು ರಾಜಮಂಡ್ರಿ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದ್ದು, ಮನೆ ಊಟ, ಪ್ರತ್ಯೇಕ ಕೊಠಡಿ ಹಾಗೂ ಭದ್ರತೆಯ ಸೌಲಭ್ಯ ಕಲ್ಪಿಸಲಾಗಿದೆ.