ಸುದ್ದಿಗಳು

ರೂ.100 ಕೋಟಿ ವಸೂಲಿ ಮಾಡುವಂತೆ ಎನ್‌ಸಿಪಿಯ ದೇಶ್‌ಮುಖ್, ಶಿವಸೇನೆಯ ಪರಬ್ ಸೂಚಿಸಿದ್ದರು: ಎನ್ಐಎಗೆ ವಜೆ ಹೇಳಿಕೆ

Bar & Bench

ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಎನ್‌ಸಿಪಿಯ ಅನಿಲ್‌ ದೇಶ್‌ಮುಖ್‌ ಮತ್ತು ಸಂಸದೀಯ ವ್ಯವಹಾರ ಮತ್ತು ಸಾರಿಗೆ ಸಚಿವ ಶಿವಸೇನೆಯ ಅನಿಲ್‌ ಪರಬ್‌ ಅವರು ತಮಗೆ ರೂ.100 ಕೋಟಿ ವಸೂಲಿ ಮಾಡುವಂತೆ ಸೂಚಿಸಿದ್ದರು ಎಂದು ಅಮಾನತುಗೊಂಡಿರುವ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಜೆ ಅವರು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಿಶೇಷ ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದಾರೆ.

ಆದರೆ ಹೇಳಿಕೆಯನ್ನು ಅಧಿಕೃತವಾಗಿ ಪರಿಗಣಿಸಲು ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಪಿ ಆರ್‌ ಸಿತ್ರೆ ನಿರಾಕರಿಸಿ, ಕಾನೂನು ಪ್ರಕ್ರಿಯೆಯ ಅನುಸಾರ ಸಿಆರ್‌ಪಿಸಿ ಸೆಕ್ಷನ್‌ 164 ರ ಅಡಿಯಲ್ಲಿ ಹೇಳಿಕೆ ನೀಡುವಂತೆ ವಜೆ ಅವರಿಗೆ ನಿರ್ದೇಶಿಸಿದರು.

ಮುಂಬೈನ 1,650 ಬಾರ್ ಮತ್ತು ರೆಸ್ಟೋರೆಂಟ್‌ಗಳಿಂದ ಹಣ ವಸೂಲಿ ಮಾಡುವಂತೆ 2020ರ ಅಕ್ಟೋಬರ್‌ನಲ್ಲಿ ದೇಶ್‌ಮುಖ್‌ ಸೂಚಿಸಿದ್ದರು ಎಂದು ಮುಂಬೈ ಮಾಜಿ ಪೊಲೀಸ್‌ ಆಯುಕ್ತ ಪರಮ್‌ ಬೀರ್‌ ಸಿಂಗ್‌ ಆರೋಪಗಳನ್ನು ವಜೆ ಕೈಬರಹದ ಪತ್ರದಲ್ಲಿ ದೃಢಪಡಿಸಿದ್ದರು. 2021ರ ಜನವರಿಯಲ್ಲಿಯೂ ಸಚಿವರಿಂದ ಅದೇ ರೀತಿಯ ಬೇಡಿಕೆ ಬಂದಿದ್ದು ಇಬ್ಬರೂ ನಂತರ ಅಧಿಕೃತ ಬಂಗಲೆಯಲ್ಲಿ ಭೇಟಿಯಾಗಿದ್ದೆವು. ಸಭೆ ನಡೆದದ್ದಕ್ಕೆ ದೇಶಮುಖ್‌ ಅವರ ಕಾರ್ಯದರ್ಶಿ ಸಾಕ್ಷಿ. ದೇಶಮುಖ್‌ ಅವರು ಪ್ರತಿ ಬಾರ್‌ ಮತ್ತು ರೆಸ್ಟೋರೆಂಟ್‌ನಿಂದ 3ರಿಂದ 3.5 ಲಕ್ಷ ರೂ ಸಂಗ್ರಹಿಸುವಂತೆ ಸೂಚಿಸಿದ್ದರು. ಇದು ನನ್ನ ಸಾಮರ್ಥ್ಯವನ್ನು ಮೀರಿದ್ದಾಗಿದೆ ಎಂಬುದಾಗಿ ತಿಳಿಸಿ ನಿರಾಕರಿಸಿದೆ ಎಂದು ವಜೆ ಪತ್ರದಲ್ಲಿ ತಿಳಿಸಿದ್ದಾರೆ.

ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ ಅವರು ತಮ್ಮನ್ನು ಪೊಲೀಸ್‌ ಇಲಾಖೆಗೆ ಮರುನೇಮಕ ಮಾಡಿರುವುದನ್ನು ರದ್ದು ಪಡಿಸಲು ಮುಂದಾಗಿದ್ದರು. ಆದರೆ ದೇಶ್‌ಮುಖ್‌ ಅವರು ರೂ.2 ಕೋಟಿ ನೀಡಿದರೆ ಮರುನೇಮಕಾತಿಗೆ ಪವಾರ್‌ ಮನವೊಲಿಸುವುದಾಗಿ ತಿಳಿಸಿದ್ದರು. ಆದರೆ ಅಷ್ಟು ಹಣ ಪಾವತಿಸುವ ಸಾಮರ್ಥ್ಯ ಇಲ್ಲ ಎಂದು ಹೇಳಿದ್ದೆ. ಆಗ ದೇಶ್‌ಮುಖ್‌ ನಂತರ ಹಣ ಪಾವತಿಸುವಂತೆ ಸೂಚಿಸಿದ್ದರು ಎಂದು ವಜೆ ಹೇಳಿದ್ದಾರೆ.

ಅಲ್ಲದೆ ಮಹಾರಾಷ್ಟ್ರ ಸಂಸದೀಯ ವ್ಯವಹಾರ ಮತ್ತು ಸಾರಿಗೆ ಸಚಿವ ಶಿವಸೇನೆಯ ಅನಿಲ್‌ ಪರಬ್‌ ಅವರು ತನಗಾಗಿ ಹಣ ವಸೂಲಿ ಮಾಡಿಕೊಡುವಂತೆ ಕೇಳಿದ್ದರು ಎಂದು ಕೂಡ ವಜೆ ಆರೋಪಿಸಿದ್ದಾರೆ. 2020 ರ ಜುಲೈ- ಆಗಸ್ಟ್‌ನಲ್ಲಿ ತಮ್ಮನ್ನು ಭೇಟಿಯಾದ ಪರಬ್‌ ಅವರು ತನಿಖೆ ಎದುರಿಸುತ್ತಿರುವ ಸೈಫೀ ಬುರ್ಹಾನಿ ಅಪ್ಲಿಫ್ಟ್‌ಮೆಂಟ್ ಟ್ರಸ್ಟ್‌ನಿಂದ (ಎಸ್‌ಬಿಯುಟಿ) ರೂ.50 ಕೋಟಿ ವಸೂಲಿ ಮಾಡುವಂತೆ ಸೂಚಿಸಿದ್ದರು. ಎಸ್‌ಬಿಯುಟಿಯಲ್ಲಿ ನನಗೆ ಯಾರೂ ಗೊತ್ತಿಲ್ಲದ ಕಾರಣ ಈ ಕೆಲಸ ನನ್ನಿಂದಾಗದು ಮತ್ತು ಪ್ರಕರಣದ ತನಿಖೆ ಮೇಲೆ ನನಗೆ ನಿಯಂತ್ರಣ ಇಲ್ಲ ಎಂದು ಹೇಳಿದ್ದಾಗಿ ವಜೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ನಂತರ ಬೃಹನ್‌ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ ಪಟ್ಟಿ ಮಾಡಲಾಗಿರುವ ಗುತ್ತಿಗೆದಾರರ ವಿರುದ್ಧ ತನಿಖೆ ನಡೆಸಿ ಅವರಿಂದ ತಲಾ 2 ಕೋಟಿ ರೂ ವಸೂಲಿ ಮಾಡಿಕೊಡುವಂತೆಯೂ ಪರಬ್ ಸೂಚಿಸಿದ್ದರು. ದೇಶ್‌ಮುಖ್‌ ಮತ್ತು ಪರಬ್ ಅವರು ಹಣ ವಸೂಲಿಯ ಬೇಡಿಕೆ ಇಡುತ್ತಿದ್ದಾರೆ ಎಂದು ಪೊಲೀಸ್‌ ಕಮಿಷನರ್‌ ಅವರಿಗೆ ತಿಳಿಸಿದಾಗ ಅವರು ಹೇಳಿದ್ದನ್ನು ಮಾಡದಂತೆ ಕೇಳಿಕೊಂಡರು. ನಾನು ಈ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ಮುಂದಿನ ದಿನಗಳಲ್ಲಿ ನಾನು ಸುಳ್ಳೇ ವಿವಾದದಲ್ಲಿ ಸಿಲುಕಿಕೊಳ್ಳುತ್ತೇನೆ ಎಂದು ಹೇಳಿದೆ. ಕಮಿಷನರ್‌ ನನ್ನನ್ನು ಪ್ರೋತ್ಸಾಹಿಸಿದರು ಮತ್ತು ಯಾರಿಂದಲೇ ಆಗಲೀ ಅಥವಾ ಯಾರಿಗೇ ಆಗಲಿ ಅಕ್ರಮ ಹಣ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿಕೊಳ್ಳಬಾರದು ಎಂದು ನನಗೆ ಸ್ಪಷ್ಟವಾಗಿ ಸೂಚಿಸಿದರು ಎಂದು ವಜೆ ಹೇಳಿದ್ದಾರೆ.

ಉದ್ಯಮಿ ಮುಕೇ ಶ್‌ ಅಂಬಾನಿ ಮನೆ ಬಳಿ ಪತ್ತೆಯಾದ ಸ್ಫೋಟಕಯುಕ್ತ ವಾಹನ ಮತ್ತು ಉದ್ಯಮಿ ಮನ್‌ಸುಖ್‌‌ ಹಿರೇನ್‌ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ 9 ರವರೆಗೆ ವಜೆ ಅವರನ್ನು ಎನ್‌ಐಎ ವಶಕ್ಕೆ ನೀಡಲಾಗಿದೆ. ಈ ಹಿಂದೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್‌ ಠಾಕ್ರೆ ಅವರಿಗೆ ಬರೆದ ಪತ್ರದಲ್ಲಿ ಮುಂಬೈ ಮಾಜಿ ಪೊಲೀಸ್‌ ಆಯುಕ್ತ ಪರಮ್‌ ಬೀರ್‌ ಸಿಂಗ್‌ ಅವರು ಪ್ರತಿ ತಿಂಗಳು ಬಾರ್ ಮತ್ತು ರೆಸ್ಟೋರೆಂಟ್‌ಗಳಿಂದ ರೂ.100 ಕೋಟಿ ಸಂಗ್ರಹಿಸಲು ವಜೆ ಸೇರಿದಂತೆ ಪೊಲೀಸ್‌ ಅಧಿಕಾರಿಗಳಿಗೆ ದೇಶ್‌ಮುಖ್‌ ಸೂಚಿಸಿದ್ದರು ಎಂದು ಆರೋಪಿಸಿದ್ದರು. ಸಿಂಗ್‌ ಆರೋಪಗಳಿಗೆ ಸಂಬಂಧಿಸಿದಂತೆ ವಜೆ ಅವರ ವಿಚಾರಣೆ ನಡೆಸಲು ಎನ್‌ಐಎ ನ್ಯಾಯಾಲಯ ಬುಧವಾರ ಸಿಬಿಐಗೆ ಅನುಮತಿ ನೀಡಿತ್ತು.