Anil Deshmukh, Central Bureau of Investigation (CBI) 
ಸುದ್ದಿಗಳು

[ಅನಿಲ್‌ ದೇಶಮುಖ್ ಪ್ರಕರಣ] ವಾಜೆ ಹೇಳಿಕೆ ಕುರಿತಂತೆ ವ್ಯತಿರಿಕ್ತ ಅಭಿಪ್ರಾಯ ವ್ಯಕ್ತಪಡಿಸಿದ ಎರಡು ನ್ಯಾಯಾಲಯಗಳು

ದೇಶಮುಖ್ ಅವರಿಗೆ ಜಾಮೀನು ನೀಡುವ ಆದೇಶದಲ್ಲಿ ವಾಜೆ ಅವರ ಹೇಳಿಕೆಯ ಖಚಿತತೆಯನ್ನು ಬಾಂಬೆ ಹೈಕೋರ್ಟ್ ಪ್ರಶ್ನಿಸಿತ್ತು. ಅದಾದ ಕೆಲ ದಿನಗಳ ಬಳಿಕ ಸಿಬಿಐ ನ್ಯಾಯಾಲಯ ವಾಜೆ ಹೇಳಿಕೆ ಕಡೆಗಣಿಸುವಂತಿಲ್ಲ ಎಂದಿದೆ.

Bar & Bench

ಮಹಾರಾಷ್ಟ್ರ ಮಾಜಿ ಗೃಹ ಸಚಿವ ಎನ್‌ಸಿಪಿ ನಾಯಕ ಅನಿಲ್‌ ದೇಶಮುಖ್‌ ಅವರ ವಿರುದ್ಧ ದಾಖಲಾಗಿರುವ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳ ಕುರಿತು, ವಜಾಗೊಂಡಿರುವ ಪೊಲೀಸ್‌ ಅಧಿಕಾರಿ ಸಚಿನ್‌ ವಾಜೆ ನೀಡಿದ್ದ ಹೇಳಿಕೆಗಳ ಸಾಕ್ಷ್ಯಾತ್ಮಕ ತೂಕಕ್ಕೆ ಸಂಬಂಧಿಸಿದಂತೆ ಎರಡು ನ್ಯಾಯಾಲಯಗಳು ವ್ಯತಿರಿಕ್ತ ಅಭಿಪ್ರಾಯ ವ್ಯಕ್ತಪಡಿಸಿವೆ.  

ಭ್ರಷ್ಟಾಚಾರ ಪ್ರಕರಣದಲ್ಲಿ ದೇಶಮುಖ್‌ಗೆ ಜಾಮೀನು ನಿರಾಕರಿಸುವಂತೆ ವಾಜೆ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ನಿರ್ಲಕ್ಷಿಸಲಾಗದು. ದೇಶಮುಖ್‌ ಅವರು ಬಾರ್‌ ಮಾಲೀಕರಿಂದ ಲಂಚದ ಹಣ ವಸೂಲಿ ಮಾಡಲು ವಾಜೆ ಮತ್ತಿತರರನ್ನು ಬಳಸಿದ್ದರು ಎಂಬ ಆರೋಪ ದೃಢಪಟ್ಟಿದೆ ಎಂದು ವಿಶೇಷ ನ್ಯಾಯಾಧೀಶ ಎಸ್‌ ಎಚ್‌ ಗಾಲ್ವಾನಿ ತಿಳಿಸಿದ್ದರು.

ಜಾಮೀನು ವಿಚಾರಣೆಯ ಹಂತದಲ್ಲಿ ವಾಜೆ ಅವರ ಹೇಳಿಕೆ ಪ್ರಮುಖ ಪಾತ್ರ ವಹಿಸಿದ್ದು ಅದನ್ನು ಪುರಸ್ಕರಿಸುವ ಕುರಿತು ವಿಚಾರಣೆಯ ಹಂತದಲ್ಲಿ ಮಾತ್ರ ಗಮನಹರಿಸಲಾಗುವುದು ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದರು.

“ಹೇಳಿಕೆಗಳನ್ನು ಈ ಹಂತದಲ್ಲಿ ಕಡೆಗಣಿಸುವಂತಿಲ್ಲ ಮತ್ತು ಹೇಳಿಕೆ ನೀಡಿದವರು ಚರ್ಚಿಸಿದ ಮತ್ತು ಬಹಿರಂಗಪಡಿಸಿದ ಸಂಗತಿಗಳನ್ನು ಜಾಮೀನು ಅರ್ಜಿಯ ವಿಚಾರಣೆ ಹಂತದಲ್ಲಿ ಸುಲಭವಾಗಿ ತಳ್ಳಿಹಾಕಲಾಗದು. ಅಂತಹ ಸಾಕ್ಷಿಗಳನ್ನು ಪುರಸ್ಕರಿಸುವುದು ವಿಚಾರಣೆಯ ಹಂತದ ವಿಚಾರವಾಗಿದೆ. ಜಾಮೀನು ಮಂಜೂರಾತಿಗಾಗಿ ಮಾಡಿದ ಪ್ರಾರ್ಥನೆಗೆ ಉತ್ತರ ನೀಡಲು ಸಾಕ್ಷ್ಯಗಳ ಸಮರ್ಪಕತೆ ಅಥವಾ ಕೊರತೆ ಆಧಾರವಾಗದು” ಎಂದು ಅವರು ವಿವರಿಸಿದರು.

·ಆದರೆ ಅ. 4ರಂದು ಬಾಂಬೆ ಹೈಕೋರ್ಟ್‌ ನೀಡಿದ್ದ ತೀರ್ಪಿನಲ್ಲಿ “ಜಾರಿ ನಿರ್ದೇಶನಾಲಯ (ಇ ಡಿ) ಮುಖ್ಯವಾಗಿ ಅವಲಂಬಿಸಿರುವ ವಾಜೆ ಅವರ ಹೇಳಿಕೆಗೆ ಖಚಿತತೆಯ ಕೊರತೆ ಇದೆ ಎಂದಿತ್ತು. ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮತ್ತು ನಿಯುಕ್ತಿಗೆ ಸಂಬಂಧಿಸಿದಂತೆ ಅನುಚಿತ ಪ್ರಭಾವ ಬೀರುವುದಕ್ಕಾಗಿ ಅಪರಾಧಕ್ಕೆ ಕುಮ್ಮಕ್ಕು ನೀಡಲಾಗಿದೆ ಎಂಬ ಕುರಿತು ಯಾವುದೇ ಸ್ಪಷ್ಟ ಆರೋಪವಿಲ್ಲ. ಪೋಲೀಸ್ ಅಧಿಕಾರಿಯಾಗಿ ವಾಜೆ ಅವರ ಅಧಿಕಾರಾವಧಿ ವಿವಾದಾಸ್ಪದವಾಗಿದೆ ಎಂದಿದ್ದ ಹೈಕೋರ್ಟ್‌ ಈ ಹಿನ್ನೆಲೆಯಲ್ಲಿ ದೇಶಮುಖ್‌ ಅವರಿಗೆ ಜಾಮೀನು ನೀಡಿತ್ತು. ಇದನ್ನು ಸುಪ್ರೀಂ ಕೋರ್ಟ್‌ ಕೂಡ ಎತ್ತಿ ಹಿಡಿದಿತ್ತು.