ಸುದ್ದಿಗಳು

ಎಂಎಲ್‌ಸಿ ಚುನಾವಣೆಯಲ್ಲಿ ಮತ ಚಲಾಯಿಸಲು ಅನುಮತಿ ಕೋರಿ ಬಾಂಬೆ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ ದೇಶ್‌ಮುಖ್

Bar & Bench

ಮುಂಬರುವ ಮಹಾರಾಷ್ಟ್ರ ವಿಧಾನ ಪರಿಷತ್‌ ಚುನಾವಣೆಗೆ ಮತ ಚಲಾಯಿಸಲು ಒಂದು ದಿನದ ಮಟ್ಟಿಗೆ ತಮ್ಮನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಕೋರಿ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಮಗೆ ಜಾಮೀನು ನೀಡಬೇಕೆಂದು ಕೋರಿರುವ ಅರ್ಜಿಯಲ್ಲೇ ಈ ಮನವಿಯನ್ನೂ ಸಲ್ಲಿಸಲಾಗಿದೆ. ನ್ಯಾಯಮೂರ್ತಿ ಎನ್ ಜೆ ಜಾಮ್‌ದಾರ್‌ ಅವರು ಜೂನ್ 15ರಂದು ಮಧ್ಯಂತರ ಅರ್ಜಿಯ ವಿಚಾರಣೆ ನಡೆಸಲಿದ್ದಾರೆ. ದೇಶ್‌ಮುಖ್‌ ಅವರು ರಾಜ್ಯಸಭೆ ಚುನಾವಣೆಯಲ್ಲಿ ಮತದಾನ ಮಾಡಲು ಒಂದು ದಿನದ ಮಟ್ಟಿಗೆ ಜಾಮೀನು ನೀಡುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಬಾಂಬೆ ಹೈಕೋರ್ಟ್‌ ಕೆಲ ದಿನಗಳ ಹಿಂದೆ ತಿರಸ್ಕರಿಸಿತ್ತು. ಬೇರೊಂದು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗುವ ಸಚಿವ ನವಾಬ್‌ ಮಲಿಕ್‌ ಅವರ ಇದೇ ರೀತಿಯ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ದೇಶ್‌ಮುಖ್‌ ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆ ವೇಳೆಯೂ ಸಹ ಮತಚಲಾಯಿಸುವ ಸಲುವಾಗಿ ಒಂದು ದಿನದ ಜಾಮೀನು ಕೋರಿದ್ದರು. ಅದರೆ, ಮುಂಬೈನ ವಿಚಾರಣಾ ನ್ಯಾಯಾಲಯವೊಂದು ಅದನ್ನು ತಿರಸ್ಕರಿಸಿತ್ತು. ಆ ಆದೇಶದ ವಿರುದ್ಧ ದೇಶ್‌ಮುಖ್‌ ಹೈಕೋರ್ಟ್ ಮೆಟ್ಟಿಲೇರಿದ್ದರು.