ಕೇರಳ ಸ್ಟೋರಿ ಚಿತ್ರ ಬಿಡುಗಡೆಗೆ ತಡೆ ನೀಡುವ ಅಥವಾ ಕೇರಳ ಹೈಕೋರ್ಟ್‌ನಲ್ಲಿ ಪ್ರಕರಣದ ತುರ್ತು ವಿಚಾರಣೆಗೆ ಸಂಬಂಧಿಸಿದಂತೆ ಯಾವುದೇ ಆದೇಶ ನೀಡಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ.
ಇನ್ನು ಮುಂದೆ ಪ್ರಕರಣ ತಮ್ಮ ಮುಂದೆ ಇಲ್ಲದಿರುವುದರಿಂದ ಅವರು ಆದೇಶ ಹೊರಡಿಸುವುದು ಅನುಚಿತವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಹಾಗೂ ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ತಿಳಿಸಿತು.
“ಪ್ರಕರಣವನ್ನು ಇನ್ನೂ ವಿಚಾರಣೆ ನಡೆಸಲಾಗದು. ಸೆನ್ಸಾರ್ ಮಂಡಳಿ (ಸಿಬಿಎಫ್‌ಸಿ) ಸಿನಿಮಾಗೆ ಪ್ರಮಾಣಪತ್ರ ನೀಡಿದೆ. ಕೇರಳ ಹೈಕೋರ್ಟ್ ತಡೆ ನೀಡಲು ನಿರಾಕರಿಸಿದೆ. ನಾವು ನಿನ್ನೆ ನಿರಾಕರಿಸಿದ್ದೇವೆ. ಹೀಗೆ ಮೂರು ಹಂತಗಳಾದ ಬಳಿಕ ಈಗ ಮತ್ತೆ ಪ್ರಕರಣ ಆಲಿಸುವುದು ಅನುಚಿತವಾಗುತ್ತದೆ” ಎಂದು ಸಿಜೆಐ ಹೇಳಿದರು.
ಅಲ್ಲದೆ ನ್ಯಾಯಾಲಯ ನಿರ್ಮಾಪಕರು ಮತ್ತು ನಟರ ಶ್ರಮವನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದಿತು. “ಚಿತ್ರ ನಿರ್ಮಾಪಕರ ದೃಷ್ಟಿಯಿಂದ ಯೋಚಿಸಿ. ಎಷ್ಟು ಸವಾಲುಗಳನ್ನು ಎದುರಿಸಲು ಸಾಧ್ಯ? ಪ್ರತಿಯೊಂದು ಸಮಯದಲ್ಲೂ ಸವಾಲು ಹಾಕಲಾಗುತ್ತದೆ. ಕೆಲ ಸಂದರ್ಭದಲ್ಲಿ ಕೇರಳದಲ್ಲಿ, ಮತ್ತೊಂದು ಸಂದರ್ಭದಲ್ಲಿ ಮದ್ರಾಸ್ ಹೈಕೋರ್ಟ್‌ನಲ್ಲಿ” ಎಂದು ಸಿಜೆಐ ಚಂದ್ರಚೂಡ್ ತಿಳಿಸಿದರು. ಪ್ರಕರಣವನ್ನು ಹಿರಿಯ ನ್ಯಾಯವಾದಿ ಹುಝೆಫಾ ಅಹ್ಮದಿ ನ್ಯಾಯಾಲಯದೆದುರು ಪ್ರಸ್ತಾಪಿಸಿದ್ದರು.
ಕೇರಳ ಹೈಕೋರ್ಟ್‌ಗೆ ಮತ್ತೆರಡು ಅರ್ಜಿ
ಕೇರಳ ಸ್ಟೋರಿ ಚಿತ್ರದ ಬಿಡುಗಡೆ ಪ್ರಶ್ನಿಸಿ ಕೇರಳ ಹೈಕೋರ್ಟ್‌ನಲ್ಲಿ ಎರಡು ಹೊಸ ಅರ್ಜಿಗಳು ಸಲ್ಲಿಕೆಯಾಗಿವೆ.
ಮೊಹಮ್ಮದ್ ರಜಾಕ್ ಕೆವಿ ಮತ್ತು ತಮನ್ನಾ ಸುಲ್ತಾನಾ ಎಂಬವವರು ಅರ್ಜಿಗಳನ್ನು ಸಲ್ಲಿಸಿದ್ದಾರೆ, ನಾಳೆ ಚಲನಚಿತ್ರ ಬಿಡುಗಡೆಯಾಗಲಿರುವುದರಿಂದ ಪ್ರಕರಣವನ್ನು ಪಟ್ಟಿ ಮಾಡುವಂತೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ಅರ್ಜಿದಾರರ ಪರ ವಕೀಲ ರಾಕೇಶ್ ಕೆ ಅವರು ಪತ್ರ ಬರೆದಿದ್ದಾರೆ.
ಪತ್ರದಲ್ಲಿ “ಜಾಮಿಯತ್- ಉಲಾಮಾ- ಇ- ಹಿಂದ್ ಸಲ್ಲಿಸಿದ್ದ ಅರ್ಜಿಯನ್ನು ನಿನ್ನೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ʼಅರ್ಜಿದಾರರು ಹೈಕೋರ್ಟ್‌ಗಳನ್ನು ಸಂಪರ್ಕಿಸಬಹುದುʼ ಎಂದು ತಿಳಿಸಿತ್ತು. ಹೀಗಾಗಿ ಪ್ರಕರಣದ ತುರ್ತು ಪಟ್ಟಿಗಾಗಿ ವಿನಂತಿಯನ್ನು ಪರಿಗಣಿಸಬಹುದುʼ ಎಂದು ವಿವರಿಸಲಾಗಿದೆ.
ಚಿತ್ರ ಬಿಡುಗಡೆ ಪ್ರಶ್ನಿಸಿರುವ ಮತ್ತೊಂದು ಅರ್ಜಿ ಈಗಾಗಲೇ ಕೇರಳ ಹೈಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿದೆ.