Kerala HC, Gold, UAPA  
ಸುದ್ದಿಗಳು

ಯುಎಪಿಎ ಪ್ರಕರಣಗಳಲ್ಲಿ ಯಾವುದೇ ಕಾರಣಕ್ಕೂ ನಿರೀಕ್ಷಣಾ ಜಾಮೀನು ನೀಡುವಂತಿಲ್ಲ: ಕೇರಳ ಹೈಕೋರ್ಟ್

ಕೃತ್ಯಗಳು ಯುಎಪಿಎ ಕಾಯಿದೆ ವ್ಯಾಪ್ತಿಗೆ ಒಳಪಟ್ಟಿದ್ದರೆ ಸಿಆರ್‌ಪಿಸಿ ಸೆಕ್ಷನ್ 438ರ ಅಡಿಯಲ್ಲಿ ಸಲ್ಲಿಸಲಾದ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ನಿರ್ವಹಿಸಲಾಗದು ಎಂದು ಪೀಠ ಅಭಿಪ್ರಾಯಪಟ್ಟಿದೆ.

Bar & Bench

ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆಯ (ಯುಎಪಿಎ) ನಿಯಮಾವಳಿಗಳಲ್ಲಿ ನಿರೀಕ್ಷಣಾ ಜಾಮೀನು ಮಂಜೂರಾತಿಗೆ ಇರುವ ಪ್ರತಿಬಂಧ ನಿಚ್ಚಳವಾದುದಾಗಿದೆ ಎಂದು ಕೇರಳ ಹೈಕೋರ್ಟ್ ಶುಕ್ರವಾರ ಹೇಳಿದೆ [ಅಹಮ್ಮದ್‌ಕುಟ್ಟಿ ಪೋತಿಯಿಲ್ ತೊಟ್ಟಿಪರಂಬಿಲ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಕೃತ್ಯಗಳು ಯುಎಪಿಎ ವ್ಯಾಪ್ತಿಗೆ ಒಳಪಟ್ಟಿದ್ದರೆ ಸಿಆರ್‌ಪಿಸಿ ಸೆಕ್ಷನ್ 438ರ ಅಡಿಯಲ್ಲಿ ಸಲ್ಲಿಸಲಾದ ನಿರೀಕ್ಷಣಾ ಜಾಮೀನು ಅರ್ಜಿಗಳನ್ನುನಿರ್ವಹಿಸಲಾಗದು ಎಂದು ನ್ಯಾಯಮೂರ್ತಿಗಳಾದ ಪಿ ಬಿ ಸುರೇಶ್ ಕುಮಾರ್ ಮತ್ತು ಸಿ ಎಸ್ ಸುಧಾ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.

"ಯುಎಪಿ ಕಾಯಿದೆಯಡಿ ಶಿಕ್ಷಾರ್ಹ ಅಪರಾಧ ಎಸಗಿದ್ದಾರೆ ಎಂಬ ಆರೋಪ ಹೊತ್ತ ಯಾವುದೇ ವ್ಯಕ್ತಿಯನ್ನು ಒಳಗೊಂಡ ಯಾವುದೇ ಪ್ರಕರಣಕ್ಕೆ ಸಿಆರ್‌ಪಿಸಿ ಸೆಕ್ಷನ್ 438ನ್ನು ಅನ್ವಯಿಸದೇ ಇರುವುದು ಸಂಪರ್ಣ ನಿಚ್ಚಳವಾಗಿದೆ" ಎಂದು ಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.

ಯುಎಪಿಎ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ನೀಡಿದರೆ, ಆರೋಪಿಗಳು ಬೇಷರತ್ತಾಗಿ ನಿರೀಕ್ಷಣಾ ಜಾಮೀನು ಪಡೆಯುವ ಅಸಂಬದ್ಧ ಸ್ಥಿತಿ ತಲೆದೋರಲಿದ್ದು ಸಾಮಾನ್ಯ ಜಾಮೀನು ನೀಡುವಿಕೆ ಎಂಬುದು ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ ಎಂಬುದಾಗಿ ಪೀಠ ತರ್ಕಿಸಿದೆ.

ಎಂಥದ್ದೇ ಸಂದರ್ಭದಲ್ಲೂ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡುವ ಕುರಿತು ಕಾಯಿದೆ ಚಿಂತಿಸುವುದಿಲ್ಲ ಎಂಬುದರಲ್ಲಿ ಯಾವುದೇ ಸಂದೇಹ ಇಲ್ಲ ಎಂದು ಕೂಡ ನ್ಯಾಯಾಲಯ ನುಡಿದಿದೆ.

ಈ ಅಭಿಪ್ರಾಯಕ್ಕೆ ಬರಲು ಇನ್ನೊಂದು ಕಾರಣವೆಂದರೆ ನಿರೀಕ್ಷಣಾ ಜಾಮೀನು ಪಡೆಯುವ ಹಕ್ಕು ಮೂಲಭೂತ ಹಕ್ಕಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ರಾಜತಾಂತ್ರಿಕ ಮಾರ್ಗಗಳ ಮೂಲಕ ಅರಬ್‌ ಸಂಯುಕ್ತ ಸಂಸ್ಥಾನದಿಂದ ಕಳ್ಳಸಾಗಣೆ ಮಾಡಲಾಗಿದ್ದ ಗಮನಾರ್ಹ ಪ್ರಮಾಣದ ಚಿನ್ನವನ್ನು ಸುಂಕಾಧಿಕಾರಿಗಳು ವಶಪಡಿಸಿಕೊಂಡ 2020ರ ಕುಖ್ಯಾತ ಚಿನ್ನ ಕಳ್ಳಸಾಗಣೆ ಪ್ರಕರಣದ  ಆರೋಪಿಯೊಬ್ಬರು ಸಲ್ಲಿಸಿದ ಮೇಲ್ಮನವಿಗೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿದೆ. ಪಿ ಸರಿತ್ ಮತ್ತು ಸ್ವಪ್ನಾ ಸುರೇಶ್ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ.