ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ ಅವರ ಪುತ್ರಿ ಸುಮಾ ಎಸ್. ಸಾಹುಕಾರ ಅವರಿಗೆ ಬೆಂಗಳೂರಿನ ನಗರದ ಸತ್ರ ನ್ಯಾಯಾಲಯವು ಈಚೆಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಕೆಪಿಎಸ್‌ಸಿ ನೇಮಕಾತಿಗಾಗಿ ಸುಳ್ಳು ಆದಾಯ ಪ್ರಮಾಣ ಪತ್ರ ಸಲ್ಲಿಸಿದ ಆರೋಪದಡಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ಸುಮಾ ನಿರೀಕ್ಷಣಾ ಜಾಮೀನು ಕೋರಿದ್ದರು.
ಈ ಸಂಬಂಧ ಅವರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರಾಘವೇಂದ್ರ ಎಸ್.ಚನ್ನಬಸಪ್ಪ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶಿಸಿದ್ದಾರೆ. ಅರ್ಜಿದಾರರ ಪರ ಹಿರಿಯ ವಕೀಲ ಎಂ ಅರುಣ್ ಶ್ಯಾಮ್ ವಾದ ಮಂಡಿಸಿದ್ದರು.
ಅರ್ಜಿದಾರರು ₹1 ಲಕ್ಷ ಮೊತ್ತದ ಬಾಂಡ್ ಮತ್ತು ಪ್ರತಿ ತಿಂಗಳ ಮೊದಲ ಶನಿವಾರದಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯ ನಡುವೆ ತನಿಖಾಧಿಕಾರಿ ಮುಂದೆ ಹಾಜರಾಗಬೇಕು ಎಂಬುದೂ ಸೇರಿದಂತೆ ಸಾಂಪ್ರದಾಯಿಕ ಷರತ್ತುಗಳನ್ನು ವಿಧಿಸಲಾಗಿದೆ.