ಆಂಟಿಲಿಯಾ ಬಾಂಬ್ ಬೆದರಿಕೆ ಪ್ರಕರಣ ಮತ್ತು ಉದ್ಯಮಿ ಮನ್‌ಸುಖ್ ಹಿರೇನ್ ಹತ್ಯೆಗೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮಾ ಅವರಿಗೆ ಸುಪ್ರೀಂ ಕೋರ್ಟ್ ಬುಧವಾರ ಜಾಮೀನು ನೀಡಿದೆ [ಪ್ರದೀಪ್ ರಾಮೇಶ್ವರ ಶರ್ಮಾ ಮತ್ತು ಎನ್‌ಐಎ ಇನ್ನಿತರರ ನಡುವಣ ಪ್ರಕರಣ].
ತಮಗೆ ಜಾಮೀನು ನಿರಾಕರಿಸಿದ್ದ ಬಾಂಬೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಶರ್ಮಾ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ಪಿ ಎಸ್ ನರಸಿಂಹ ಅವರಿದ್ದ ಪೀಠ ಪುರಸ್ಕರಿಸಿತು.
ಶರ್ಮಾ ಮತ್ತು ಮುಂಬೈನ ಮತ್ತೊಬ್ಬ ವಜಾಗೊಂಡ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಸೇರಿದಂತೆ ಇತರ ಆರೋಪಿಗಳು ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ನಿವಾಸದ ಬಳಿ ಸ್ಫೋಟಕ ತುಂಬಿದ ಎಸ್‌ಯುವಿಯನ್ನು ಇರಿಸಲು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಫೆಬ್ರವರಿ 2021 ರಲ್ಲಿ ಉದ್ಯಮಿ ಮನ್‌ಸುಖ್ ಹಿರೇನ್ ಹತ್ಯೆ ಪ್ರಕರಣದಲ್ಲಿಯೂ ಅವರು ಆರೋಪಿಗಳಾಗಿದ್ದರು.
ಕಳೆದ ಜನವರಿಯಲ್ಲಿ ಬಾಂಬೆ ಹೈಕೋರ್ಟ್ ಶರ್ಮಾ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನಡೆಸುತ್ತಿರುವ ತನಿಖೆಯ ಬಗ್ಗೆ ಹೈಕೋರ್ಟ್ ಅತೃಪ್ತಿ ವ್ಯಕ್ತಪಡಿಸಿದ್ದರೂ ಶರ್ಮಾರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಏಕೆಂದರೆ ಹಿರೇನ್ ಹತ್ಯೆ ಪ್ರಕರಣದಲ್ಲಿ ಶರ್ಮಾ ಭಾಗಿಯಾಗಿದ್ದಾರೆ ಎನ್ನುವುದನ್ನು ಸೂಚಿಸುವಂತಹ ಸಾಕ್ಷ್ಯಗಳಲ್ಲಿ ಹುರುಳಿದೆ ಎಂದು ಹೈಕೋರ್ಟ್ ತಿಳಿಸಿತ್ತು.