Sachin Waze and NIA 
ಸುದ್ದಿಗಳು

ಆಂಟಿಲಿಯಾ ಪ್ರಕರಣ: ಯುಎಪಿಎ ಅಡಿ ವಿಚಾರಣೆಗೆ ಅನುಮತಿ ಪ್ರಶ್ನಿಸಿದ್ದ ವಾಜೆ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ಮುಂಬೈನಲ್ಲಿ ಉದ್ಯಮಿ ಮುಕೇಶ್‌ ಅಂಬಾನಿ ಮನೆಯ ಸಮೀಪ ಸ್ಫೋಟಕ ತುಂಬಿದ್ದ ಕಾರನ್ನು ನಿಲ್ಲಿಸಿದ್ದ ಪ್ರಕರಣದಲ್ಲಿ ವಾಜೆ ಪಾತ್ರದ ಕುರಿತು ವಿಚಾರಣೆಗೆ ಕಳೆದ ವರ್ಷ ಕೇಂದ್ರ ಗೃಹ ಸಚಿವಾಲಯ ಅನುಮತಿಸಿತ್ತು.

Bar & Bench

ಆಂಟಿಲಿಯಾ ಸ್ಫೋಟಕ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಅಡಿ ಮುಂಬೈನ ಮಾಜಿ ಪೊಲೀಸ್‌ ಅಧಿಕಾರಿ ಸಚಿನ್‌ ವಾಜೆ ಅವರ ವಿಚಾರಣೆಗೆ ಕೇಂದ್ರ ಗೃಹ ಇಲಾಖೆಯು ಅನುಮತಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ದೆಹಲಿ ಹೈಕೋರ್ಟ್‌ ವಜಾ ಮಾಡಿದೆ.

ನ್ಯಾಯಮೂರ್ತಿಗಳಾದ ಮುಕ್ತಾ ಗುಪ್ತಾ ಮತ್ತು ಅನೀಶ್‌ ದಯಾಳ್‌ ಅವರ ನೇತೃತ್ವದ ವಿಭಾಗೀಯ ಪೀಠವು ಅರ್ಜಿ ವಜಾ ಮಾಡಿದೆ.

ಮುಂಬೈನಲ್ಲಿ ಉದ್ಯಮಿ ಮುಕೇಶ್‌ ಅಂಬಾನಿ ಮನೆಯ ಸಮೀಪ ಸ್ಫೋಟಕ ತುಂಬಿದ್ದ ಕಾರು ನಿಂತಿದ್ದ ಪ್ರಕರಣ ಮತ್ತು ವಾಹನ ಬಿಡಿಭಾಗಗಳ ಡೀಲರ್‌ ಹಿರೇನ್‌ ಮನ್ಸುಖ್‌ ಅವರ ಕೊಲೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ವಾಜೆ ಪಾತ್ರದ ಕುರಿತು ವಿಚಾರಣೆಗೆ ಕಳೆದ ವರ್ಷ ಕೇಂದ್ರ ಗೃಹ ಸಚಿವಾಲಯ ಅನುಮತಿಸಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ವಿಚಾರಗಳು ಮುಂಬೈನಲ್ಲಿ ಘಟಿಸಿವೆ. ಹೀಗಾಗಿ, ಹಾಲಿ ಮನವಿಯನ್ನು ಬಾಂಬೆ ಹೈಕೋರ್ಟ್‌ ಮಾತ್ರ ವಿಚಾರಣೆ ನಡೆಸಬಹುದು ಎಂದು ಅರ್ಜಿಯ ನಿರ್ವಹಣೆಯ ಕುರಿತು ಕೇಂದ್ರ ಸರ್ಕಾರವು ಪ್ರಾಥಮಿಕ ಆಕ್ಷೇಪ ಎತ್ತಿತ್ತು.

ದೆಹಲಿಯಲ್ಲಿರುವ ಕೇಂದ್ರ ಗೃಹ ಸಚಿವಾಲಯವು ವಿಚಾರಣೆಗೆ ಅನುಮತಿಸಿ ಆದೇಶ ಮಾಡಿರುವುದರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ಗೆ ಪ್ರಾದೇಶಿಕ ನ್ಯಾಯವ್ಯಾಪ್ತಿ ಇದೆ ಎಂದು ವಾಜೆ ವಾದಿಸಿದ್ದರು. ಅಲ್ಲದೆ ಈ ಕುರಿತು ದೆಹಲಿ ಹೈಕೋರ್ಟ್‌ ವಿಭಾಗೀಯ ಪೀಠವೊಂದು ತೀರ್ಪನ್ನು ನೀಡಿದ್ದು, ಅದನ್ನು ಸುಪ್ರೀಂ ಕೋರ್ಟ್‌ ಸಹ ಎತ್ತಿಹಿಡಿದಿದೆ ಎಂದು ಹೇಳಿದ್ದರು.