Supreme Court of India 
ಸುದ್ದಿಗಳು

ಅಂತರಿಕ್ಷ್‌-ದೇವಾಸ್ ಪ್ರಕರಣ: 560 ದಶಲಕ್ಷ ಡಾಲರ್ ಪಾವತಿ ಆದೇಶ ರದ್ದುಗೊಳಿಸಿದ್ದ ತೀರ್ಪು ಎತ್ತಿಹಿಡಿದ ಸುಪ್ರೀಂ

ದೇವಾಸ್ ಪರವಾಗಿ ನೀಡಲಾಗಿದ್ದ ಮಧ್ಯಸ್ಥಿಕೆ ತೀರ್ಪನ್ನು ದೆಹಲಿ ಹೈಕೋರ್ಟ್ ರದ್ದುಗೊಳಿಸಿತ್ತು. ಈ ತೀರ್ಪಿನಲ್ಲಿ ಮಧ್ಯ ಪ್ರವೇಶಿಸಲು ನ್ಯಾಯಾಲಯ ನಿರಾಕರಿಸಿತು.

Bar & Bench

ಬೆಂಗಳೂರು ಮೂಲದ ನವೋದ್ಯಮ ದೇವಾಸ್‌ ಮಲ್ಟಿಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ಗೆ ಕೇಂದ್ರ ಸರ್ಕಾರದ ಸ್ವಾಮ್ಯತ್ವ ಹೊಂದಿರುವ ಅಂತರಿಕ್ಷ್‌ ಕಾರ್ಪೊರೇಷನ್‌ ಬಡ್ಡಿಯೊಂದಿಗೆ 560 ದಶಲಕ್ಷ ಡಾಲರ್‌ ಪಾವತಿಸಬೇಕೆಂದು ಅಂತರರಾಷ್ಟ್ರೀಯ ವಾಣಿಜ್ಯ ಮಂಡಳಿ (ಐಸಿಸಿ) ನೀಡಿದ್ದ ಮಧ್ಯಸ್ಥಿಕೆ ತೀರ್ಪನ್ನು ಎತ್ತಿಹಿಡಿಯಲು ಈಚೆಗೆ ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಆ ಮೂಲಕ  ದೇವಾಸ್‌ ಮತ್ತು  ಆಂತರಿಕ್ಷ್‌  ನಡುವೆ ಒಂದು ದಶಕ ಕಾಲ ನಡೆದ ವಾಜ್ಯಕ್ಕೆ ಅದು ಇತಿಶ್ರೀ ಹಾಡಿದೆ [ದೇವಾಸ್‌ ಎಂಪ್ಲಾಯಿಸ್‌ ಫಂಡ್‌ ಅಮೆರಿಕ ಎಲ್‌ಎಲ್‌ಸಿ ಮತ್ತು ಅಂತರಿಕ್ಷ್‌ ಕಾರ್ಪೊರೇಷನ್‌ ಲಿಮಿಟೆಡ್‌ ಇನ್ನಿತರರ ನಡುವಣ ಪ್ರಕರಣ].

ದೆಹಲಿ ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ನ್ಯಾಯಮೂರ್ತಿಗಳಾದ ಎಸ್ ರವೀಂದ್ರ ಭಟ್ (ಈಗ ನಿವೃತ್ತರು) ಮತ್ತು ಅರವಿಂದ್ ಕುಮಾರ್ ಅವರಿದ್ದ ಪೀಠ ಅಕ್ಟೋಬರ್ 6 ರಂದು ನಿರಾಕರಿಸಿದೆ.

“ಆಕ್ಷೇಪಿತ ಆದೇಶ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎನ್ನುವುದು ಈ ನ್ಯಾಯಾಲಯದ ಅಭಿಪ್ರಾಯವಾಗಿದೆ. ಅದರಂತೆ ವಿಶೇಷ ಅನುಮತಿ ಅರ್ಜಿಯನ್ನು ವಜಾಗೊಳಿಸಲಾಗಿದೆ” ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಕರಣದ ಸಂಬಂಧ ಮಧ್ಯಸ್ಥಿಕೆ ತೀರ್ಪನ್ನು ಸೆಪ್ಟೆಂಬರ್ 14, 2015ರಲ್ಲಿ ನೀಡಿದ್ದ ಐಸಿಸಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ವಾಣಿಜ್ಯ ವಿಭಾಗವಾದ ಅಂತರಿಕ್ಷ್‌ಗೆ ಒಪ್ಪಂದದ ರದ್ದಿನಿಂದಾಗಿ ಉಂಟಾದ ನಷ್ಟಕ್ಕೆ ಪರಿಹಾರವಾಗಿ 560 ದಶಲಕ್ಷ ಡಾಲರ್ ನೀಡುವಂತೆ ಸೂಚಿಸಿತ್ತು.

ಆದರೆ ಪೇಟೆಂಟ್ ಅಕ್ರಮ ಮತ್ತು ವಂಚನೆ ಎಸಗಿರುವ ಮತ್ತು ದೇಶದ ಸಾರ್ವಜನಿಕ ನೀತಿಯೊಂದಿಗೆ ಸಂಘರ್ಷದಲ್ಲಿರುವ ಕಾರಣಕ್ಕೆ ತೀರ್ಪನ್ನು ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿ ಸಂಜೀವ್‌ ಸಚ್‌ದೇವ್‌ ರದ್ದುಗೊಳಿಸಿದ್ದರು. ಈ ಆದೇಶವನ್ನು ದೆಹಲಿ ಹೈಕೋರ್ಟ್‌ ವಿಭಾಗೀಯ ಪೀಠ ಎತ್ತಿಹಿಡಿದಿತ್ತು. ಆ ಮೂಲಕ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ದೇವಾಸ್‌ ಎಂಪ್ಲಾಯಿಸ್‌ ಮಾರಿಷಸ್‌ ಪ್ರೈವೇಟ್‌ ಲಿಮಿಟೆಡ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್‌ ವಜಾಗೊಳಿಸಿತ್ತು.

ಹೀಗಾಗಿ ಸುಪ್ರೀಂ ಕೋರ್ಟ್‌ಗೆ ದೇವಾಸ್‌ ಎಂಪ್ಲಾಯಿಸ್‌ ಫಂಡ್‌ ಅಮೆರಿಕ ಎಲ್‌ಎಲ್‌ಸಿ ಪ್ರಸ್ತುತ ಮೇಲ್ಮನವಿ ಸಲ್ಲಿಸಿತು.

ದೇವಾಸ್‌ ಸಂಸ್ಥೆಯು ಮಾರಿಷಸ್ ಮತ್ತು ಅಮೆರಿಕ ಸಂಸ್ಥೆಗಳ ಒಡೆತನದ ಬೆಂಗಳೂರು ಮೂಲದ ಸ್ಟಾರ್ಟ್‌ಅಪ್ ಆಗಿದೆ. ಡಿಜಿಟಲ್ ಮಲ್ಟಿಮೀಡಿಯಾ ಸೇವೆ ಮುಂದುವರಿಸಲು ₹1,00,000 ಷೇರು ಬಂಡವಾಳದೊಂದಿಗೆ ಇಸ್ರೋದ ಇಬ್ಬರು ನಿವೃತ್ತ ಉದ್ಯೋಗಿಗಳು ಇದನ್ನು ಸ್ಥಾಪಿಸಿದರು ಎಂದು ಹೇಳಲಾಗಿದೆ.

ಎರಡು ಉಪಗ್ರಹಗಳ ತಯಾರಿಕೆ, ನಿರ್ವಹಣೆ ಹಾಗೂ ಉಡಾವಣೆಗೆ ಅಂತರಿಕ್ಷ್‌ ಮತ್ತು ದೇವಾಸ್‌ ನಡುವೆ ಒಪ್ಪಂದ ಏರ್ಪಟ್ಟಿತ್ತು. ಆ ಉಪಗ್ರಹಗಳ ತರಂಗಾಂತರ ಸಾಮರ್ಥ್ಯವನ್ನು ದೇವಾಸ್‌ಗೆ ಗುತ್ತಿಗೆ ನೀಡಲಾಗಿತ್ತು. ಭಾರತದಾದ್ಯಂತ ಮಲ್ಟಿಮೀಡಿಯಾ ಸೇವೆಗಳನ್ನು ಒದಗಿಸಲು ದೇವಾಸ್ ಈ ಬ್ಯಾಂಡ್‌ವಿಡ್ತ್ ಅನ್ನು ಬಳಸುವುದರಲ್ಲಿತ್ತು.

ಆದರೆ ನೀತಿ ನಿರ್ಧಾರಗಳಲ್ಲಿನ ಬದಲಾವಣೆಗಳಿಂದಾಗಿ ಅಂತರಿಕ್ಷ್‌ ಒಪ್ಪಂದವನ್ನು 2011ರಲ್ಲಿ ಕೊನೆಗೊಳಿಸಿತು. ಇದು ಎರಡು ಪಕ್ಷಕಾರರ ನಡುವೆ ಕಾನೂನು ಹೋರಾಟಕ್ಕೆ ಮುನ್ನುಡಿ ಬರೆಯಿತು. ಸೆಪ್ಟೆಂಬರ್ 14, 2015ರಲ್ಲಿ ದೇವಾಸ್‌ ಪರವಾಗಿ ಐಸಿಸಿ ತೀರ್ಪು ನೀಡಿತು.

ಅಂತರಿಕ್ಷ್‌ ಮತ್ತು ದೇವಾಸ್‌ನ ಹಿಂದಿನ ಆಡಳಿತ ಮಂಡಳಿಗಳು ನಡೆಸಿದ ಭ್ರಷ್ಟಾಚಾರ, ವಂಚನೆ ಮತ್ತು ಅಪರಾಧದ ಕೃತ್ಯಗಳಿಂದಾಗಿ ಮಧ್ಯಸ್ಥಿಕೆ ತೀರ್ಪಿಗೆ ಸಂಬಂಧಿಸಿದ ಒಪ್ಪಂದ ಸಂಪೂರ್ಣ ಮುರಿದುಬಿದ್ದಿದೆ ಎಂದು ಅಂತರಿಕ್ಷ್‌ ವಾದಿಸಿತ್ತು.

ಅಂತರಿಕ್ಷ್‌ ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಮತ್ತು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಗಳು (ಎನ್‌ಸಿಎಲ್‌ಎಟಿ) ವಂಚನೆ ಆಧಾರದಲ್ಲಿ ದೇವಾಸ್‌ ಜೊತೆಗಿನ ಒಪ್ಪಂದ ಮುಕ್ತಾಯಗೊಳಿಸುವಂತೆ ಆದೇಶಿಸಿದ್ದವು.

ಈ ತೀರ್ಪನ್ನು ದೇವಾಸ್‌ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಆದರೆ ದೇವಬಾಸ್‌ ಮೋಸದ ಮತ್ತು ಕಾನೂನುಬಾಹಿರ ಉದ್ದೇಶಗಳಿಗಾಗಿ ರೂಪುಗೊಂಡಿದೆ ಎಂದು ಘೋಷಿಸಿದ್ದ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯ ಜ. 17ರಂದು ಎತ್ತಿಹಿಡಿದಿತ್ತು.

ದೇವಾಸ್ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ, ಹಿರಿಯ ವಕೀಲರಾದ ಸುಹೇಲ್ ದತ್, ವಕೀಲರಾದ ಅನುರಾಧಾ ದತ್, ಲಿನ್ ಪಿರೇರಾ, ಪ್ರಿಯಾಂಕಾ ಎಂಪಿ, ಚೈತನ್ಯ ಕೌಶಿಕ್, ಶಿವಾಂಗಿ ಸೂದ್, ಸೃಷ್ಟಿ ಪ್ರಕಾಶ್, ಅರ್ಕಪ್ರವ ದಾಸ್ ಮತ್ತು ಬಿ ವಿಜಯಲಕ್ಷ್ಮಿ ಮೆನನ್ ವಾದ ಮಂಡಿಸಿದ್ದರು.

ಅಂತರಿಕ್ಷ್‌ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಎನ್ ವೆಂಕಟರಮಣ್‌ ಅವರೊಂದಿಗೆ ವಕೀಲರಾದ ಅಜಯ್ ಭಾರ್ಗವ, ವನಿತಾ ಭಾರ್ಗವ, ಅರವಿಂದ್ ರೇ, ಚಂದ್ರಶೇಖರ ಭಾರತಿ, ಅಪೂರ್ವ ಜೈನ್, ದಿವ್ಯಾ ಯಾದವ್, ರಾಹುಲ್ ವಿಜಯಕುಮಾರ್, ಶ್ರುತಿ ಶಿವಕುಮಾರ್, ಅಮೃತಾ ಚಂದ್ರಮೌಳಿ ಮತ್ತು ಶಿವಶಂಕರ್ ಜಿ, ಖೈತಾನ್ ಆ್ಯಂಡ್ ಕೋ  ವಾದಿಸಿದ್ದರು.

ಚಿನ್ಮೊಯ್ ರಾಯ್ ಅಂತರಿಕ್ಷ್‌ನ ಆಂತರಿಕ ಸಲಹೆಗಾರರಾಗಿದ್ದರು. ಕೇವಿಯಟ್‌ಗೆ ಸಂಬಂಧಿಸಿದಂತೆ ಟ್ರಿಲೀಗಲ್ ಸಂಸ್ಥೆಯ ವಕೀಲರಾದ ಆಬರ್ಟ್ ಸೆಬಾಸ್ಟಿಯನ್ ಮತ್ತು ಏಂಜೆಲಿಕಾ ಅವಸ್ಥಿ ವಾದ ಮಂಡಿಸಿದ್ದರು.

[ಆದೇಶದ ಪ್ರತಿಯನ್ನುಇಲ್ಲಿ ಓದಿ]

Devas_Employees_Fund_US_LLC_vs_Antrix_Corporation_Limited_and_ors (1).pdf
Preview