Karnataka HC and Justice Suraj Govindaraj 
ಸುದ್ದಿಗಳು

ಸರ್ಕಾರಿ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಬಂದ ತಕ್ಷಣ ವರ್ಗಾವಣೆ ಪರಿಹಾರವಲ್ಲ: ಹೈಕೋರ್ಟ್‌

ತನಿಖೆಗೆ ಅಡ್ಡಿಯಾಗುವಂತ ಪರಿಸ್ಥಿತಿಯಿದ್ದರೆ ಅಧಿಕಾರಿಯನ್ನು ಮಧ್ಯಂತರ ಅವಧಿಗೆ ಅಮಾನತು ಮಾಡಬಹುದು. ಈ ಪ್ರಕ್ರಿಯೆ ನಡೆಸದೆ ಏಕಾಏಕಿ ವರ್ಗಾವಣೆ ಮಾಡುವುದು ಪರಿಹಾರವಲ್ಲ ಎಂದಿರುವ ನ್ಯಾಯಾಲಯ.

Bar & Bench

ಸರ್ಕಾರಿ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಎದುರಾದಾಗ ತಕ್ಷಣವೇ ವರ್ಗಾವಣೆ ಮಾಡುವುದು ಪರಿಹಾರವಲ್ಲ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅಲ್ಲದೇ, ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರನ್ನು ಅವಧಿ ಪೂರ್ವ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದ್ದ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಕ್ರಮವನ್ನು ಪುರಸ್ಕರಿಸಿದೆ.

ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಯಾಗಿದ್ದ ಡಾ.ಬಸನಗೌಡ ಅವರನ್ನು ವರ್ಗಾವಣೆ ಮಾಡಿದ್ದ ಸರ್ಕಾರದ ಆದೇಶ ಕ್ರಮವನ್ನು ಕೆಎಟಿ ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ಡಾ.ಬಸನಗೌಡ ಹುದ್ದೆಗೆ ವರ್ಗಾವಣೆಗೊಂಡಿದ್ದ ಡಾ.ಶಶಿ ಪಾಟೀಲ್ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರ ನೇತೃತ್ವದ ವಿಭಾಗೀಯ ಪೀಠ ವಜಾ ಮಾಡಿದೆ.

“ಸರ್ಕಾರಿ ಅಧಿಕಾರಿಯ ವಿರುದ್ಧ ಆರೋಪ ಕೇಳಿಬಂದಾಗ, ಆ ಕುರಿತು ಸಂಬಂಧಪಟ್ಟ ಪ್ರಾಧಿಕಾರದಿಂದ ಆಂತರಿಕ ವಿಚಾರಣೆ ನಡೆಸಿ ಸತ್ಯಾಸತ್ಯತೆ ಅವಲೋಕಿಸಬೇಕು. ಆರೋಪ ಸಾಬೀತಾದಲ್ಲಿ ಶಿಸ್ತುಕ್ರಮ ಕೈಗೊಳ್ಳಬೇಕು. ತನಿಖೆಗೆ ಅಡ್ಡಿಯಾಗುವಂತ ಪರಿಸ್ಥಿತಿಯಿದ್ದರೆ ಅಧಿಕಾರಿಯನ್ನು ಮಧ್ಯಂತರ ಅವಧಿಗೆ ಅಮಾನತು ಮಾಡಬಹುದು. ಈ ಪ್ರಕ್ರಿಯೆ ನಡೆಸದೆ ಏಕಾಏಕಿ ವರ್ಗಾವಣೆ ಮಾಡುವುದು ಪರಿಹಾರವಲ್ಲ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

“ಇಂಥ ಬೆಳವಣಿಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಸರ್ಕಾರ ತನ್ನ ಅಧಿಕಾರ ತ್ಯಜಿಸಿದಂತಾಗಲಿದೆ” ಎಂದಿರುವ ಪೀಠವು ಕೆಎಟಿ ಆದೇಶವನ್ನು ಪುರಸ್ಕರಿಸಿದೆ. ಜತೆಗೆ, ಬಸನಗೌಡ ವಿರುದ್ಧದ ಆರೋಪ ಸಂಬಂಧ ಅಗತ್ಯವಿದ್ದರೆ ಕಾನೂನು ಪ್ರಕಾರ ಕ್ರಮಕೈಗೊಳ್ಳಲು ಸರ್ಕಾರಕ್ಕೆ ಮುಕ್ತವಾಗಿದೆ ಎಂದು ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ: ಡಾ.ಬಸನಗೌಡ ಎಂಬುವರು 2022ರ ಜನವರಿ 13ರಿಂದ ಧಾರವಾಡ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಧಾರವಾಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 100ಕ್ಕೂ ಹೆಚ್ಚು ವೈದ್ಯರು 2022ರ ಜುಲೈ 13ರಂದು ಆರೋಗ್ಯ ಇಲಾಖೆಗೆ ದೂರು ಸಲ್ಲಿಸಿ, ಬಸನಗೌಡ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಇದರಿಂದ ಅವರನ್ನು 2022ರ ಅಕ್ಟೋಬರ್‌ 1ರಂದು ಸರ್ಕಾರ ವರ್ಗಾವಣೆ ಮಾಡಿತ್ತು. ಈ ಹುದ್ದೆಗೆ ಡಾ.ಶಶಿ ಪಾಟೀಲ್ ಅವರನ್ನು ನಿಯೋಜಿಸಿತ್ತು.

ಸರ್ಕಾರದ ಆದೇಶ ಪ್ರಶ್ನಿಸಿ ಬಸನಗೌಡ ಕೆಎಟಿಯಲ್ಲಿ ಅರ್ಜಿ ಸಲ್ಲಿಸಿ, ಗ್ರೂಪ್ ಎ ವೃಂದದ ಅಧಿಕಾರಿಗಳನ್ನು ಕನಿಷ್ಠ ಎರಡು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ವರ್ಗಾವಣೆ ಮಾಡುವಂತಿಲ್ಲ. ಒಂದು ವರ್ಷಕ್ಕಿಂತ ಕಡಿಮೆ ಅವಧಿಗೆ ತಮ್ಮನ್ನು ವರ್ಗಾವಣೆ ಮಾಡಲಾಗಿದೆ. ಅಲ್ಲದೆ, ಸ್ಥಳೀಯ ಸಂಸದರು ನನ್ನ ವರ್ಗಾವಣೆಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದರು. ಸರ್ಕಾರದ ಆದೇಶವನ್ನು ಕೆಎಟಿ ರದ್ದುಪಡಿಸಿತ್ತು. ಇದರಿಂದ ಡಾ. ಶಶಿ ಪಾಟೀಲ್ ಹೈಕೋರ್ಟ್ ಮೆಟ್ಟಿಲೇರಿ, ಬಸನಗೌಡ ವಿರುದ್ಧ ಗಂಭೀರ ಆರೋಪ ಕೇಳಿಬಂದಿತ್ತು. ಅವರು ವಿರುದ್ಧ ಪ್ರಾಥಮಿಕ ತನಿಖೆಯನ್ನೂ ಆರಂಭಿಸಲಾಗಿತ್ತು. ಆದರೆ, ಜಿಲ್ಲಾ ಆರೋಗ್ಯ ಇಲಾಖೆ ಮುಖ್ಯಸ್ಥರಾದ ಕಾರಣ ಅವರು ಅದೇ ಹುದ್ದೆ ಮುಂದುವರಿದರೆ ತನಿಖೆ ಮೇಲೆ ಪ್ರಭಾವ ಬೀರಬಹುದು ಎಂಬ ಅಂಶವನ್ನು ಪರಿಗಣಿಸಿ ಮುಖ್ಯಮಂತ್ರಿಗಳು ಸೂಚನೆ ಮೇರೆಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದ್ದರು. ಆರೋಗ್ಯ ಇಲಾಖೆ ಸಹ ಇದೇ ವಾದವನ್ನು ನ್ಯಾಯಾಲಯದ ಮುಂದೆ ಇಟ್ಟಿತ್ತು. ಈ ವಾದವನ್ನು ಹೈಕೋರ್ಟ್ ಪುರಸ್ಕರಿಸಿಲ್ಲ.