Navin Sinha, Rohinton Fali Nariman centre, KM Joseph 
ಸುದ್ದಿಗಳು

ಸಕಾರಣದ ವಿನಾ ಯಾವುದೇ ನ್ಯಾಯಾಲಯ ನೀಡುವ ತಡೆಯಾಜ್ಞೆ ಆರು ತಿಂಗಳೊಳಗೆ ಅಂತ್ಯಗೊಳ್ಳುತ್ತದೆ: ʼಸುಪ್ರೀಂʼ ಪುನರುಚ್ಚಾರ

ಉತ್ತಮ ಕಾರಣಗಳಿಲ್ಲದಿದ್ದರೆ ಹೈಕೋರ್ಟ್ ಸೇರಿದಂತೆ ಯಾವುದೇ ನ್ಯಾಯಾಲಯ ನೀಡುವ ಯಾವುದೇ ತಡೆಯಾಜ್ಞೆ ಆರು ತಿಂಗಳೊಳಗೆ ತಾನೇತಾನಾಗಿ ಅಂತ್ಯಗೊಳ್ಳುತ್ತದೆ ಎಂದು ಸುಪ್ರೀಂಕೋರ್ಟ್‌ ಪುನರುಚ್ಚರಿಸಿದೆ.

Bar & Bench

ಸಕಾರಣವಿಲ್ಲದ ಸಂದರ್ಭದಲ್ಲಿ ಯಾವುದೇ ನ್ಯಾಯಾಲಯ ನೀಡುವ ತಡೆಯಾಜ್ಞೆ ಆರು ತಿಂಗಳಲ್ಲಿ ತಾನೇತಾನಾಗಿ ಅಂತ್ಯಗೊಳ್ಳುತ್ತದೆ ಎಂದು ಸುಪ್ರೀಂಕೋರ್ಟ್‌ ತನ್ನ ಆದೇಶದ ಮೂಲಕ ʼದೇಶದ ಎಲ್ಲಾ ನ್ಯಾಯಾಧೀಶರಿಗೆ ಮತ್ತೆ ನೆನಪು ಮಾಡಿಕೊಟ್ಟಿದೆ (ಏಷ್ಯನ್ ರೀಸರ್ಫೇಸಿಂಗ್ ರೋಡ್ ಏಜೆನ್ಸಿ ಪ್ರೈವೇಟ್ ಲಿಮಿಟೆಡ್ ವರ್ಸಸ್‌ ಸಿಬಿಐ).

ಏಷ್ಯನ್ ರೀಸರ್ಫೇಸಿಂಗ್ ರೋಡ್ ಏಜೆನ್ಸಿ ಪ್ರೈವೇಟ್ ಲಿಮಿಟೆಡ್ ವರ್ಸಸ್‌ ಸಿಬಿಐ ಪ್ರಕರಣದಲ್ಲಿ ಈ ಹಿಂದೆ ನ್ಯಾಯಾಲಯವು ತಡೆಯಾಜ್ಞೆಯು ಆರು ತಿಂಗಳೊಳಗೆ ಅಂತ್ಯವಾಗುತ್ತದೆ ಎನ್ನುವ ತಡೆಯಾಜ್ಞೆ ಅಂತ್ಯಗೊಳ್ಳುವ ಕಾನೂನನ್ನು ರೂಪಿಸಿತ್ತು. ಅದೇ ಅದೇಶವನ್ನೇ ನ್ಯಾಯಮೂರ್ತಿಗಳಾದ ರೋಹಿಂಟನ್ ಫಾಲಿ ನಾರಿಮನ್, ನವೀನ್ ಸಿನ್ಹಾ ಮತ್ತು ಕೆ ಎಂ ಜೋಸೆಫ್ ಅವರಿದ್ದ ಪೀಠವು ಪುನರುಚ್ಚರಿಸಿತು. ಹಿಂದಿನ ಆದೇಶ ಹೀಗಿದೆ:

"ಭವಿಷ್ಯದಲ್ಲಿ ತಡೆಯಜ್ಞೆ ಮಂಜೂರು ಮಾಡುವ ವೇಳೆ, ವಿವರಣಾ ಆದೇಶದ ಮೂಲಕ ಇದೇ ರೀತಿಯ ವಿಸ್ತರಣೆ ದೊರೆಯದ ಹೊರತು ತಡೆಯಾಜ್ಞೆ ಹೊರಡಿಸಿದ ದಿನದಿಂದ ಆರು ತಿಂಗಳ ಅವಧಿಯಲ್ಲಿ ಅದು ಅಂತ್ಯಗೊಳ್ಳುತ್ತದೆ. ಒಂದೊಮ್ಮೆ ತಡೆಯಾಜ್ಞೆ ವಿಸ್ತರಿಸಿದ್ದಲ್ಲಿ, ವಿಚಾರಣೆ ಅಂತ್ಯಗೊಳಿಸುವುದಕ್ಕಿಂತಲೂ ತಡೆಯಾಜ್ಞೆ ಮುಂದುವರೆಸುವುದು ಹೆಚ್ಚು ಮಹತ್ವದ್ದು ಎಂಬುದನ್ನು ವಿವರಣಾ ಆದೇಶ ಸಾಬೀತುಪಡಿಸಬೇಕು. ಸಿವಿಲ್‌ ಅಥವಾ ಕ್ರಿಮಿನಲ್‌ ವಿಚಾರಣೆಗೆ ನೀಡಿದ ತಡೆಯಾಜ್ಞೆಯನ್ನು ವಿಚಾರಣಾ ನ್ಯಾಯಾಲಯದ ಮುಂದಿರಿಸಿದರೆ ಅದು ಆದೇಶದ ಆರು ತಿಂಗಳ ಅವಧಿ ಮೀರುವುದಕ್ಕೂ ಮುನ್ನ ದಿನಾಂಕವನ್ನು ನಿಗದಿಪಡಿಸಿ ಪ್ರಕರಣವನ್ನು ಆಲಿಸಬೇಕು. ಏಕೆಂದರೆ, ಒಮ್ಮೆ ತಡೆಯಾಜ್ಞೆಯ ಅವಧಿ ಮುಗಿದ ನಂತರ ತಡೆಯಾಜ್ಞೆಯ ವಿಸ್ತರಣೆಯ ಆದೇಶವನ್ನು ಒಂದೊಮ್ಮೆ ಮುಂದಿರಿಸದೆ ಹೋದಲ್ಲಿ, ವಿಚಾರಣೆಯು ಆಂಭವಾಗುವಂತಿರಬೇಕು.

2019ರ ಡಿಸೆಂಬರ್‌ನಲ್ಲಿ, ಪುಣೆಯ ಹೆಚ್ಚುವರಿ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್‌ ಅವರು ಸುಪ್ರೀಂಕೋರ್ಟ್‌ ಆದೇಶದನ್ವಯ ಆರು ತಿಂಗಳ ಅವಧಿ ಮುಗಿದ ನಂತರ ವಿಚಾರಣೆಯನ್ನು ಪುನರಾರಂಭಿಸಲು ನಿರಾಕರಿಸಿ ಬದಲಿಗೆ ವಿಚಾರಣೆ ಪುನರಾರಂಭಿಸಲು ಬಾಂಬೆ ಹೈಕೋರ್ಟ್‌ ಮೊರೆ ಹೋಗುವಂತೆ ಆದೇಶ ಹೊರಡಿಸಿದ್ದನ್ನು ತ್ರಿಸದಸ್ಯರ ಪೀಠ ಪ್ರಸ್ತಾಪಿಸಿತು. ಅಂತಹ ಆದೇಶ "ಸುಪ್ರೀಂಕೋರ್ಟ್ ತೀರ್ಪನ್ನು ಉಲ್ಲಂಘಿಸುತ್ತದೆ" ಎಂದು ಪೀಠವು ಗುರುತಿಸಿತು.

ಭಾರತದ ಸಂವಿಧಾನದಡಿಯ ಪಿರಮಿಡ್ ವ್ಯವಸ್ಥೆಯಲ್ಲಿ, ಸುಪ್ರೀಂಕೋರ್ಟ್ ಉತ್ತುಂಗದಲ್ಲಿದೆ. ಹೈಕೋರ್ಟ್‌ಗಳು ಆಡಳಿತಾತ್ಮಕವಾಗಿ ಅಧೀನವಾಗಿರದಿದ್ದರೂ, ನ್ಯಾಯಿಕವಾಗಿ ಖಂಡಿತ ಅಧೀನದಲ್ಲಿವೆ ಎಂಬುದನ್ನು ನಾವು ದೇಶದ ನ್ಯಾಯಾಧೀಶರಿಗೆ ನೆನಪಿಸಬೇಕಿದೆ. ನಮ್ಮ ತೀರ್ಪಿನ 35ನೇ ಪ್ಯಾರಾದ ಎದುರು ಈ ರೀತಿಯ ಆದೇಶಗಳು ಊರ್ಜಿತವಾಗುವುದಿಲ್ಲ. ದೇಶದ ಎಲ್ಲೆಡೆ ಇರುವ ಮ್ಯಾಜಿಸ್ಟ್ರೇಟ್‌ಗಳು ನಮ್ಮ ಆದೇಶವನ್ನು ನಿಜವಾಗಿಯೂ ಅನುಸರಿಸುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ.
ಸುಪ್ರೀಂಕೋರ್ಟ್ ಆದೇಶ

ತಕ್ಷಣ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಸುಪ್ರೀಂಕೋರ್ಟ್‌ ಪುಣೆಯ ಹೆಚ್ಚುವರಿ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್‌ ಅವರಿಗೆ ನಿರ್ದೇಶನ ನೀಡಿದೆ.

ಆದೇಶವನ್ನು ಇಲ್ಲಿ ಓದಿ:

Asian_Resurfacing_Road_Agency_vs_CBI.pdf
Preview