ಆಂಧ್ರ ಪ್ರದೇಶಕ್ಕೆ ಮೂರು ರಾಜಧಾನಿ ಮಾಡುವ ಕುರಿತ ತನ್ನ ಯೋಜನೆಗೆ ಮರು ಚಾಲನೆ ನೀಡುವ ನಿಟ್ಟಿನಲ್ಲಿ ಮಾರ್ಚ್ 3ರಂದು ಆಂಧ್ರ ಪ್ರದೇಶ ಹೈಕೋರ್ಟ್ ಅಮರಾವತಿ ಒಂದೇ ರಾಜಧಾನಿ ಎಂದು ಘೋಷಿಸಿದ್ದ ತೀರ್ಪುನ್ನು ಪ್ರಶ್ನಿಸಿ ವೈ ಎಸ್ ಜಗನ್‌ಮೋಹನ್ ರೆಡ್ಡಿ ನೇತೃತ್ವದ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ.
ವಕೀಲ ಮಹಫೂಜ್ ನಜ್ಕಿ ಅವರ ಮೂಲಕ ರಾಜ್ಯ ಸಲ್ಲಿಸಿರುವ ಮೇಲ್ಮನವಿಯಲ್ಲಿ ಮೂರು ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ. ಅವುಗಳೆಂದರೆ:
ಆಕ್ಷೇಪಾರ್ಹವಾದ ಕಾಯಿದೆಯನ್ನು ಹಿಂಪಡೆದಿರುವುದರಿಂದ ವಿಷಯವು ನಿರರ್ಥಕ: ಆಂಧ್ರ ಪ್ರದೇಶ ವಿಕೇಂದ್ರೀಕರಣ ಮತ್ತು ಎಲ್ಲಾ ವಲಯಗಳ ಸಮಗ್ರ ಅಭಿವೃದ್ಧಿ ಕಾಯಿದೆ 2020 ಮತ್ತು ಅಮರಾವತಿ (ಶಾಸನ), ವಿಶಾಖಪಟ್ಟಣಂ (ಕಾರ್ಯಾಂಗ) ಮತ್ತು ಕರ್ನೂಲ್ (ನ್ಯಾಯಾಂಗ) ಅಭಿವೃದ್ಧಿಗಾಗಿ ಆಂಧ್ರಪ್ರದೇಶ ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಿಂಪಡೆಯುವ ಕಾಯಿದೆ 2020 ಹಿಂಪಡೆಯುವ ನಿಟ್ಟಿನಲ್ಲಿ ಸದನದಲ್ಲಿ ಹಣಕಾಸು ಸಚಿವ ಬುಗ್ಗಣ್ಣ ರಾಜೇಂದ್ರನಾಥ್ ರೆಡ್ಡಿ ಅವರು ಆಂಧ್ರಪ್ರದೇಶ ವಿಕೇಂದ್ರೀಕರಣ ಮತ್ತು ಎಲ್ಲಾ ವಲಯಗಳ ಸಮಗ್ರ ಅಭಿವೃದ್ಧಿ ಹಿಂಪಡೆಯುವ ಮಸೂದೆ 2021 ಅನ್ನು ಮಂಡಿಸಿದ್ದರು.
ಸಂವಿಧಾನದ ಒಕ್ಕೂಟ ವ್ಯವಸ್ಥೆ ಅಡಿ ತನ್ನ ರಾಜಧಾನಿ ಎಲ್ಲಿಂದ ಕಾರ್ಯನಿರ್ವಹಿಸಬೇಕು ಎಂಬುದನ್ನು ನಿರ್ಧರಿಸುವ ಹಕ್ಕು ಪ್ರತಿ ರಾಜ್ಯ ಸರ್ಕಾರಕ್ಕೆ ಅಂತರ್ಗತವಾಗಿರುತ್ತದೆ.
ತನ್ನ ರಾಜಧಾನಿಯ ಕುರಿತು ನಿರ್ಧರಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಎಂಬ ವಿಚಾರವು ಸಂವಿಧಾನದ ಮೂಲತತ್ವದ ಉಲ್ಲಂಘನೆಯಾಗಿದೆ.
ವಿಚಾರವನ್ನು ಕೈಗೆತ್ತುಕೊಳ್ಳುವುದಕ್ಕೆ ಮೊದಲೇ ಪೂರ್ವಭಾವಿಯಾಗಿ ನಿರ್ಧರಿಸಿರುವುದರಿಂದ ತೀರ್ಪು ಅಧಿಕಾರ ಪ್ರತ್ಯೇಕತೆ ತತ್ವವನ್ನು ಉಲ್ಲಂಘಿಸಿದೆ.
ರಾಜ್ಯದ ರಾಜಧಾನಿಯ ಕುರಿತು ಕಾನೂನು ರೂಪಿಸುವ ಅರ್ಹತೆ ರಾಜ್ಯದ ಶಾಸನಸಭೆಗೆ ಇರುವುದಿಲ್ಲ ಎಂದಿದ್ದ ಆಂಧ್ರಪ್ರದೇಶ ಹೈಕೋರ್ಟ್, ಹಾಲಿ ರಾಜಧಾನಿ ಅಮರಾವತಿಯಿಂದ ಸರ್ಕಾರದ ಯಾವುದೇ ಕಚೇರಿಯನ್ನು ಸ್ಥಳಾಂತರಿಸದಂತೆ ಆದೇಶಿಸಿತ್ತು. ಅಲ್ಲದೇ, ಅರ್ಜಿದಾರರಿಗೆ ₹50,000 ಪಾವತಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿತ್ತು.