Lawyers 
ಸುದ್ದಿಗಳು

ಎಪಿಪಿ ಹುದ್ದೆಗಳ ನೇಮಕಾತಿಗೆ ಜು. 23, 24ರಂದು ಮುಖ್ಯ ಪರೀಕ್ಷೆ

ರಾಜ್ಯದ 4 ಕೇಂದ್ರಗಳಲ್ಲಿ ಮುಖ್ಯ ಪರೀಕ್ಷೆ ನಡೆಯಲಿದೆ. ಕೋವಿಡ್ ಮತ್ತಿತರ ಕಾರಣಗಳಿಂದ ಮುಖ್ಯ ಪರೀಕ್ಷೆಯನ್ನು ಕೆಲ ಬಾರಿ ಮುಂದೂಡಲಾಗಿತ್ತು.

Bar & Bench

ಬಹುದಿನಗಳಿಂದ ಖಾಲಿ ಉಳಿದಿದ್ದ 205 ಸಹಾಯಕ ಸರ್ಕಾರಿ ಅಭಿಯೋಜಕ (ಎಪಿಪಿ) ಹುದ್ದೆಗಳ ನೇಮಕಾತಿಗೆ ಇದೇ ಜುಲೈ 23 ಹಾಗೂ 24ರಂದು ಮುಖ್ಯ ಪರೀಕ್ಷೆ ನಡೆಸಲು ರಾಜ್ಯ ಅಭಿಯೋಗ ಹಾಗೂ ಸರ್ಕಾರಿ ವ್ಯಾಜ್ಯಗಳ ಇಲಾಖೆ ಅಧಿಸೂಚನೆ ಹೊರಡಿಸಿದೆ.

ಇಲಾಖೆಯು ಜು.5ರಂದು ಅಧಿಸೂಚನೆ ಹೊರಡಿಸಿದೆ. ರಾಜ್ಯದ 4 ಕೇಂದ್ರಗಳಲ್ಲಿ ಜು.23 ಹಾಗೂ 24ರಂದು ಮುಖ್ಯ ಪರೀಕ್ಷೆ ನಡೆಯಲಿದೆ. ಕೋವಿಡ್ ಮತ್ತಿತರ ಕಾರಣಗಳಿಂದ ಮುಖ್ಯ ಪರೀಕ್ಷೆಯನ್ನು ಎರಡು-ಮೂರು ಬಾರಿ ಮುಂದೂಡಲಾಗಿತ್ತು.

ಈ ಹಿಂದೆ 2022ರ ಮೇ 28 ಹಾಗೂ 29ರಂದು ಮುಖ್ಯ ಪರೀಕ್ಷೆ ನಿಗದಿಪಡಿಸಿ ಅಧಿಸೂಚನೆ ಹೊರಡಿಸಲಾಗಿತ್ತಾದರೂ, ಪ್ರಶ್ನೆ ಪತ್ರಿಕೆಯಲ್ಲಿ ಸಂವಿಧಾನಕ್ಕೆ ಸಂಬಂಧಿಸಿದ ವಿಷಯಗಳೇ ಹೆಚ್ಚಿವೆ. ಇದರಿಂದ, ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಸಮಸ್ಯೆ ಆಗಲಿದೆ. ಮೇಲಾಗಿ ಎಪಿಪಿ ಹುದ್ದೆಗಳಿಗೆ ಸಾಂವಿಧಾನಿಕ ವಿಷಯಗಳಿಗಿಂತ ಐಪಿಸಿ-ಸಿಆರ್‌ಪಿಸಿ ವಿಷಯಗಳು ಮುಖ್ಯವಾಗಿ ಬೇಕು ಎಂದು ರಾಜ್ಯ ವಕೀಲರ ಪರಿಷತ್ ಹಾಗೂ ಬೆಂಗಳೂರು ವಕೀಲರ ಸಂಘ ಆಕ್ಷೇಪ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಹಳೆಯ ಮಾದರಿಯಲ್ಲಿಯೇ ಪರೀಕ್ಷೆಯನ್ನು ನಡೆಸುವಂತೆ ಒತ್ತಾಯಿಸಲಾಗಿತ್ತು.