Supreme Court and Bihar Caste Survey 
ಸುದ್ದಿಗಳು

ಬಿಹಾರ ಜಾತಿ ಸಮೀಕ್ಷೆ ಎತ್ತಿ ಹಿಡಿದಿದ್ದ ಪಾಟ್ನಾ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ

ವ್ಯಕ್ತಿಗಳು ಇಲ್ಲವೇ ಸಮುದಾಯಗಳಿಗೆ ಹಣೆಪಟ್ಟಿ ಹಚ್ಚುವ ಅಥವಾ ಪ್ರತ್ಯೇಕಿಸುವ ಗುರಿ ಸಮೀಕ್ಷೆಗೆ ಇಲ್ಲ ಎಂದು ಆಗಸ್ಟ್ 1ರ ಆದೇಶದಲ್ಲಿ ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.

Bar & Bench

ರಾಜ್ಯ ಸರ್ಕಾರ ನಡೆಸುತ್ತಿರುವ ಬಿಹಾರ ಜಾತಿ ಸಮೀಕ್ಷೆ ಎತ್ತಿ ಹಿಡಿಯುವ ಪಾಟ್ನಾ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿದೆ.

ಜಾತಿ ಸಮೀಕ್ಷೆ ಕೈಗೊಳ್ಳುವ ರಾಜ್ಯ ಸರ್ಕಾರದ ನಿರ್ಧಾರ ಸಂಪೂರ್ಣ ಮಾನ್ಯವಾದುದಾಗಿದ್ದು ಸೂಕ್ತ ಸಾಮರ್ಥ್ಯ ಮತ್ತು ನ್ಯಾಯದೊಂದಿಗೆ ಅಭಿವೃದ್ಧಿ ಕಲ್ಪಿಸುವ ಕಾನೂನು ಬದ್ಧ ಗುರಿಯೊಂದಿಗೆ ಆರಂಭಿಸಲಾಗಿದೆ ಎಂದು  ಆಗಸ್ಟ್ 1ರ ತೀರ್ಪಿನಲ್ಲಿ, ಮುಖ್ಯ ನ್ಯಾಯಮೂರ್ತಿ ಕೆ ವಿನೋದ್ ಚಂದ್ರನ್ ಮತ್ತು ನ್ಯಾಯಮೂರ್ತಿ ಪಾರ್ಥ ಸಾರಥಿ ಅವರಿದ್ದ ಪೀಠ ಹೇಳಿತ್ತು.

"ವ್ಯಕ್ತಿಗಳು ಇಲ್ಲವೇ ಸಮುದಾಯಗಳ ಮೇಲೆ ಒತ್ತಡ ಹೇರುವ, ಬೆರಳು ಮಾಡುವ, ಹಣೆಪಟ್ಟಿ ಹಚ್ಚುವ, ಇಲ್ಲವೇ  ಬಹಿಷ್ಕರಿಸುವ ಉದ್ದೇಶ ಸಮೀಕ್ಷೆಗೆ ಇಲ್ಲ. ಬದಲಿಗೆ ವಿವಿಧ ಸಮುದಾಯ / ವರ್ಗ /ಗುಂಪುಗಳ ಆರ್ಥಿಕ, ಶೈಕ್ಷಣಿಕ ಮತ್ತಿತರ ಸಾಮಾಜಿಕ ಅಂಶಗಳನ್ನು ಗುರುತಿಸಿ ಅವರ ಏಳಿಗೆಗೆ ಕ್ರಮ ಕೈಗೊಳ್ಳಲು ಸಮೀಕ್ಷೆ ಅವಶ್ಯಕವಾಗಿದೆ" ಎಂದು ನ್ಯಾಯಾಲಯ ಹೇಳಿದೆ.

ಎರಡು ಹಂತಗಳಲ್ಲಿ ಸಮೀಕ್ಷೆ ನಡೆಸಲು ಉದ್ದೇಶಿಸಲಾಗಿತ್ತು. ರಾಜ್ಯ ಸರ್ಕಾರ ಈ ವರ್ಷದ ಜನವರಿಯಲ್ಲಿ ಮೊದಲ ಹಂತದ ಎಣಿಕೆ ಕಾರ್ಯ ಕೈಗೆತ್ತಿಕೊಂಡಿತ್ತು. ಇದರಲ್ಲಿ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಲಾಗಿತ್ತು.

ಎರಡನೇ ಹಂತದ ಸಮೀಕ್ಷೆ ಏಪ್ರಿಲ್ 15ರಂದು ಪ್ರಾರಂಭವಾಗಿತ್ತು. ಜನರ ಜಾತಿ ಮತ್ತು ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸುವುದರ ಮೇಲೆ ಇದು ಕೇಂದ್ರೀಕೃತವಾಗಿತ್ತು. ಈ ವರ್ಷದ ಮೇ ವೇಳೆಗೆ ಸಮೀಕ್ಷೆ ಪ್ರಕ್ರಿಯೆ ಪೂರ್ಣಗೊಳ್ಳಬೇಕಿತ್ತು. ಆದರೆ, ಮೇ 4ರಂದು ಹೈಕೋರ್ಟ್‌ನ ಏಕಸದಸ್ಯ ಪೀಠ ಜಾತಿ ಗಣತಿಗೆ ತಡೆ ನೀಡಿತ್ತು. ಸಮೀಕ್ಷೆ ಜಾತಿಗಣತಿಯಲ್ಲ ಬದಲಿಗೆ ಜನಗಣತಿಯಾಗಿದೆ ಎಂದು ಮೂರು ಅರ್ಜಿಗಳ ವಿಚಾರಣೆ ನಡೆಸಿದ್ದ ಪೀಠ ಈ ತೀರ್ಪು ನೀಡಿತ್ತು.

ಪರಿಣಾಮ ಹೈಕೋರ್ಟ್ ತಡೆ ಆದೇಶದ ವಿರುದ್ಧ ಬಿಹಾರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತು. ಆದರೆ ಹೈಕೋರ್ಟ್‌ ನೀಡಿದ್ದ ಮಧ್ಯಂತರ ತಡೆ ಹಿಂತೆಗೆದುಕೊಳ್ಳಲು ನಿರಾಕರಿಸಿದ ಸುಪ್ರೀಂ ಕೋರ್ಟ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ತಿಳಿಸಿತ್ತು. ಅಂತಿಮವಾಗಿ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್‌ನ ವಿಭಾಗೀಯ ಪೀಠ  ಆಗಸ್ಟ್‌ 1ರಂದು ಅರ್ಜಿ ವಜಾಗೊಳಿಸಿತ್ತು.