Krishna Janmabhoomi 
ಸುದ್ದಿಗಳು

ಕೃಷ್ಣ ಜನ್ಮಭೂಮಿ ವಿವಾದ: ಸಿವಿಲ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಥುರಾ ಜಿಲ್ಲಾ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಕೆ

Bar & Bench

ಕೃಷ್ಣ ಜನ್ಮಭೂಮಿಯಲ್ಲಿ ಶಾಹಿ ಈದ್ಗಾ ಮಸೀದಿ ನಿರ್ಮಿಸಲಾಗಿರುವುದನ್ನು ತೆರವುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಿವಿಲ್ ಮೊಕದ್ದಮೆಯನ್ನು ಮಥುರಾ ನ್ಯಾಯಾಲಯ ವಜಾಗೊಳಿಸಿದ್ದನ್ನು ಪ್ರಶ್ನಿಸಿ ಹಿಂದೂ ದೈವಗಳಾದ ಭಗವಾನ್ ಶ್ರೀಕೃಷ್ಣ ವಿರಾಜಮಾನ್ ಮತ್ತು ಆಸ್ಥಾನ ಶ್ರೀ ಕೃಷ್ಣ ಜನ್ಮಭೂಮಿಯ ಪರವಾಗಿ ವಾದಮಿತ್ರರ ಮೂಲಕ ಉತ್ತರ ಪ್ರದೇಶದ ಮಥುರಾ ಜಿಲ್ಲಾ ನ್ಯಾಯಾಲಯದಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲಾಗಿದೆ. ಸೋಮವಾರ ಮಧ್ಯಾಹ್ನ ಪ್ರಕರಣ ವಿಚಾರಣೆಗೆ ಬರುವ ಸಾಧ್ಯತೆ ಇದೆ.

ದೇವರ ವಾದಮಿತ್ರರು (ನೆಕ್ಸ್ಟ್ ಆಫ್‌ ಫ್ರೆಂಡ್ಸ್) ಎನ್ನಲಾದ ರಂಜನ್ ಅಗ್ನಿಹೋತ್ರಿ, ಪ್ರವೇಶ್ ಕುಮಾರ್‌, ರಾಜೇಶ್ ಮಣಿ ತ್ರಿಪಾಠಿ, ಕರುಣೇಶ್ ಕುಮಾರ್ ಶುಕ್ಲಾ, ಶಿವಾಜಿ ಸಿಂಗ್ ಮತ್ತು ತ್ರಿಪುರಾರಿ ತಿವಾರಿ ಅವರ ಮೂಲಕ ಮನವಿ ಸಲ್ಲಿಸಲಾಗಿದೆ. ವಕೀಲರಾದ ಹರಿ ಶಂಕರ್ ಜೈನ್, ವಿಷ್ಣು ಜೈನ್ ಮತ್ತು ಪಂಕಜ್ ಕುಮಾರ್ ವರ್ಮಾ ಅರ್ಜಿದಾರರನ್ನು ಪ್ರತಿನಿಧಿಸಿದ್ದಾರೆ.

ಭಾರತ ಸಂವಿಧಾನದ 25ನೇ ವಿಧಿಯ ಅಡಿ ಮೂಲಭೂತ ಧಾರ್ಮಿಕ ಹಕ್ಕು ಕಲ್ಪಿಸಲಾಗಿದ್ದು, ಇದರ ಅನ್ವಯ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ಶ್ರೀಕೃಷ್ಣನ ಭಕ್ತರಾದ ಮೇಲ್ಮನವಿದಾರರು ಹೇಳಿದ್ದಾರೆ.

ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯಿದೆ-1991 ಅಡಿ ಅರ್ಜಿ ಒಪ್ಪಿಕೊಳ್ಳುವುದನ್ನು ನಿಷೇಧಿಸಲಾಗಿದೆ ಎಂಬ ಕಾರಣ ನೀಡಿ ಮಥುರಾ ನ್ಯಾಯಾಲಯವು ಈಚೆಗೆ ಅರ್ಜಿಯನ್ನು ವಜಾಗೊಳಿತ್ತು.

ಕತ್ರ ಕೇಶವ್ ದೇವ್‌ ನಲ್ಲಿರುವ 13.37 ಎಕರೆ ಜಮೀನು ಭಗವಾನ್ ಶ್ರೀಕೃಷ್ಣ ವಿರಾಜಮಾನ್‌ ಗೆ ಸೇರಿದ್ದಾಗಿದ್ದು, ಇದರ ಮೇಲೆ ಉತ್ತರ ಪ್ರದೇಶ ಸುನ್ನಿ ವಕ್ಫ್ ಮಂಡಳಿ, ಈದ್ಗಾ ಮಸೀದಿ ಟ್ರಸ್ಟ್ ಅಥವಾ ಮುಸ್ಲಿಂ ಸಮುದಾಯದ ಯಾವುದೇ ಸದಸ್ಯರಿಗೆ ಅಧಿಕಾರವಿಲ್ಲ ಎಂಬುದು ಸುಸ್ಪಷ್ಟವಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.