Supreme Court of India 
ಸುದ್ದಿಗಳು

ಗ್ರಾಹಕ ಆಯೋಗಗಳ ಪದಾಧಿಕಾರಿಗಳ ನೇಮಕಾತಿ ರದ್ದು: ಬಾಂಬೆ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಗೆ ಮೇಲ್ಮನವಿ

ನ್ಯಾಯಾಂಗದ ಮೇಲೆ ಕಾರ್ಯಾಂಗ ಅತಿಕ್ರಮಣ ಮಾಡುತ್ತದೆ ಎಂಬ ಕಾರಣಕ್ಕೆ ಗ್ರಾಹಕ ಸಂರಕ್ಷಣಾ ನಿಯಮ 6(1)ನ್ನು ಬಾಂಬೆ ಹೈಕೋರ್ಟ್ ಕೆಲ ದಿನಗಳ ಹಿಂದೆ ರದ್ದುಗೊಳಿಸಿತ್ತು.

Bar & Bench

ರಾಜ್ಯ ಮತ್ತು ಜಿಲ್ಲಾ ಗ್ರಾಹಕ ಆಯೋಗಗಳ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡುವ ಆಯ್ಕೆ ಸಮಿತಿಯ ರಚನೆಗೆ ಸಂಬಂಧಿಸಿದ ಗ್ರಾಹಕ ಸಂರಕ್ಷಣಾ ನಿಯಮ 6 ಅನ್ನು ಈಚೆಗೆ ಬಾಂಬೆ ಹೈಕೋರ್ಟ್‌ ನಾಗಪುರ ಪೀಠ ರದ್ದುಗೊಳಿಸಿದ್ದನ್ನು ಪ್ರಶ್ನಿಸಿದ್ದ ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್‌ ಸಂಬಂಧಪಟ್ಟವರಿಗೆ ನೋಟಿಸ್‌ ನೀಡಿದೆ [ಗಣೇಶ್‌ ಕುಮಾರ್‌ ರಾಜೇಶ್ವರರಾವ್‌ ಸೇಲುಕರ್‌ ಮತ್ತು ಮಹೇಂದ್ರ ಭಾಸ್ಕರ್‌ ಲಿಮಾಯೆ ನಡುವಣ ಪ್ರಕರಣ].

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ  ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ನವೆಂಬರ್ 24 ರಂದು ಪ್ರಕರಣದ ವಿಚಾರಣೆ ನಡೆಸಲಿದೆ.

ಅಲ್ಲಿಯವರೆಗೆ ಹೈಕೋರ್ಟ್‌ ತನ್ನ ಆದೇಶಕ್ಕೆ ನೀಡಿರುವ ಮಧ್ಯಂತರ ತಡೆ ಮುಂದುವರೆಯುತ್ತದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಸುಪ್ರೀಂ ಕೋರ್ಟ್‌ ಪ್ರಕರಣ ನಿರ್ಧರಿಸುವವರೆಗೆ ಹೈಕೋರ್ಟ್ ರದ್ದುಪಡಿಸಿದ ನಿಯಮಗಳ ಅಡಿಯಲ್ಲಿ ನೇಮಕಗೊಂಡಿದ್ದ ಸದಸ್ಯರಿಗೆ ರಕ್ಷಣೆ ಇರಲಿದೆ.

"ಅರ್ಜಿದಾರರು ಎತ್ತಿರುವ ಸಮಸ್ಯೆಗಳ ಕುರಿತಾಗಿ ಹೆಚ್ಚಿನ ಚರ್ಚೆಯ ಅಗತ್ಯವಿರುತ್ತದೆ... ಪ್ರಸ್ತುತ (ಪದಾಧಿಕಾರಿಗಳಾಗಿ) ಕಾರ್ಯ ನಿರ್ವಹಿಸುತ್ತಿರುವವರು ಹೈಕೋರ್ಟ್‌ ತೀರ್ಪಿನ ಪರಿಣಾಮ ಹುದ್ದೆ ಕಳೆದುಕೊಳ್ಳುವ ಕಾರಣ, ನಾವು ಮಧ್ಯಂತರ ತಡೆಯಾಜ್ಞೆ ನೀಡುತ್ತಿದ್ದೇವೆ. 24 ನವೆಂಬರ್ 2023 ರವರೆಗೆ ಅವರು ಕೆಲಸ ಮಾಡಲಿದ್ದಾರೆ” ಎಂದು ಸುಪ್ರೀಂ ಕೋರ್ಟ್‌ ನುಡಿದಿದೆ.

ರಾಜ್ಯ ಆಯೋಗ ಮತ್ತು ಜಿಲ್ಲಾ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರನ್ನು ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ ನೇಮಕ ಮಾಡಬಹುದೆಂದು ನಿಯಮ 6ರಲ್ಲಿ ಹೇಳಲಾಗಿತ್ತು. ಇದು ಆಯ್ಕೆ ಸಮಿತಿಯ ರಚನೆ ಕುರಿತು ಕೂಡ ಹೇಳುತ್ತದೆ. ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಇಲ್ಲವೇ ಮುಖ್ಯ ನ್ಯಾಯಮೂರ್ತಿಯವರು ನಾಮ ನಿರ್ದೇಶನ ಮಾಡಿದ ಹೈಕೋರ್ಟ್‌ನ ಯಾವುದೇ ನ್ಯಾಯಮೂರ್ತಿ ಸಮಿತಿಯ ಅಧ್ಯಕ್ಷರಾಗಿರಬೇಕು ಮತ್ತು ಗ್ರಾಹಕ ವ್ಯವಹಾರಗಳ ಉಸ್ತುವಾರಿ ಕಾರ್ಯದರ್ಶಿಯನ್ನು ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯ ಸೂಚಿಸುವ ನಾಮನಿರ್ದೇಶಿತ ಸದಸ್ಯರನ್ನು ಇದು ಒಳಗೊಂಡಿರಬೇಕು ಎಂದು ನಿಯಮಾವಳಿ ತಿಳಿಸಿತ್ತು.

ನ್ಯಾಯಾಂಗದ ಮೇಲೆ ಕಾರ್ಯಾಂಗದ ಅತಿಕ್ರಮಣಕ್ಕೆ ಈ ನಿಬಂಧನೆ ಕಾರಣವಾಗಿದ್ದು ನ್ಯಾಯಮಂಡಳಿ ಸದಸ್ಯರ ನೇಮಕಾತಿ ಪ್ರಕ್ರಿಯೆಯಲ್ಲಿ ನ್ಯಾಯಾಂಗದ ಒಳಗೊಳ್ಳುವಿಕೆಯನ್ನು ದುರ್ಬಲಗೊಳಿಸುತ್ತಿದೆ ಎಂಬ ನೆಲೆಯಲ್ಲಿ ಹೈಕೋರ್ಟ್‌ ವಿಭಾಗೀಯ ಪೀಠ ನಿಯಮಾವಳಿಯನ್ನು ಬದಿಗೆ ಸರಿಸಿತ್ತು.

ನಿಬಂಧನೆಯ ಸಿಂಧುತ್ವ ಪ್ರಶ್ನಿಸಿದ್ದ ಅರ್ಜಿಯನ್ನು ಎತ್ತಿಹಿಡಿದಿದ್ದ ನ್ಯಾಯಾಲಯ ನಿಯಮಾವಳಿಯನ್ನು ರದ್ದುಗೊಳಿಸಿತು. ಆಯ್ಕೆ ಸಮಿತಿಯನ್ನು ರಚಿಸುವ ಏಪ್ರಿಲ್ 10, 2023 ಮತ್ತು ಜೂನ್ 13, 2023 ರ ಅಧಿಸೂಚನೆಗಳನ್ನು ಪ್ರಶ್ನಿಸಿ ಡಾ. ಮಹೇಂದ್ರ ಭಾಸ್ಕರ್ ಲಿಮಯೆ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿದೆ. 2020ರ ನಿಯಮ 6(1) ಅನ್ನು ರದ್ದುಗೊಳಿಸಿದ್ದರಿಂದ, ಉಚ್ಚ ನ್ಯಾಯಾಲಯ ಅಧಿಸೂಚನೆಗಳನ್ನು ಕೂಡ ರದ್ದುಪಡಿಸಿತ್ತು.