Ajit Mohan, Facebook, Supreme Court 
ಸುದ್ದಿಗಳು

ದೆಹಲಿ ವಿಧಾನಸಭಾ ಸಮಿತಿಯ ಮುಂದೆ ಸಾಕ್ಷಿ ಹೇಳಲು ಫೇಸ್‌ಬುಕ್‌ಗೆ ಒತ್ತಾಯಿಸಲಾಗದು: ಸುಪ್ರೀಂನಲ್ಲಿ ಸಾಳ್ವೆ ವಾದ

ದೆಹಲಿ ವಿಧಾನಸಭೆಯ ಶಾಸಕಾಂಗ ಮತ್ತು ಕಾರ್ಯಾಂಗದ ಅಧಿಕಾರದ ವ್ಯಾಪ್ತಿಯನ್ನು ಸಮಿತಿಯ ವಿಚಾರಣೆ ಮೀರಿದೆ ಎಂದು ಸಾಳ್ವೆ ವಾದಿಸಿದರು.

Bar & Bench

ಕಳೆದ ವರ್ಷದ ಫೆಬ್ರುವರಿಯಲ್ಲಿ ದೆಹಲಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ದೆಹಲಿ ವಿಧಾನಸಭೆಯ ಶಾಂತಿ ಮತ್ತು ಸಾಮರಸ್ಯ ಸಮಿತಿಯು ತನಗೆ ಸಮನ್ಸ್‌ ಜಾರಿಗೊಳಿಸಿರುವುದು “ರಾಜಕೀಯ ಪ್ರೇರಿತ” ನಿರ್ಧಾರವಾಗಿದೆ ಎಂದು ಫೇಸ್‌ಬುಕ್‌ನ ಭಾರತದ ಮುಖ್ಯಸ್ಥ ಅಜಿತ್‌ ಮೋಹನ್‌ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.

ವಾಲ್‌ ಸ್ಟ್ರೀಟ್‌ ಜರ್ನಲ್‌ ವರದಿ ಮತ್ತು ಫೇಸ್‌ಬುಕ್‌ ಆಡಳಿತ ಪಕ್ಷಕ್ಕೆ ನೆರವಾಗುತ್ತದೆ ಎಂಬ ಗುಮಾನಿಯ ಮೇಲೆ ಸಮನ್ಸ್‌ ಜಾರಿಗೊಳಿಸಲಾಗಿದೆ ಎಂದು ಮೋಹನ್‌ ಅವರನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಹರೀಶ್‌ ಸಾಳ್ವೆ ವಾದಿಸಿದ್ದಾರೆ.

ಗಲಭೆಗೆ ಸಂಬಂಧಿಸಿದಂತೆ ದ್ವೇಷ ಭಾಷೆ ನಿಯಂತ್ರಿಸಲು ವಿಫಲವಾದ ಫೇಸ್‌ಬುಕ್‌ ಪಾತ್ರವನ್ನು ಪತ್ತೆಹಚ್ಚುವ ಕೆಲಸ ಮಾಡುತ್ತಿರುವ ಸಮಿತಿಯ ಮುಂದೆ ಮೋಹನ್‌ ಹಾಜರಾಗುವುದಿಲ್ಲ ಎಂದು ಸಾಳ್ವೆ ವಾದಿಸಿದ್ದು, ಕಕ್ಷಿದಾರರ ಮೌನದ ಹಕ್ಕನ್ನು ಪ್ರಸ್ತಾಪಿಸಿದ್ದಾರೆ.

“ಇದು ನಮಗೆ ರಾಜಕೀಯ ಪ್ರೇರಿತ ಕ್ರಮವಾಗಿ ಭಾಸವಾಗುತ್ತಿದೆ. ಸರ್ಕಾರದ ಪರವಾಗಿ ನಾವು ಸೌಹಾರ್ದ ಪಂದ್ಯವಾಡುತ್ತಿದ್ದೇವೆ ಎಂದು ಅವರು ಯೋಚಿಸಿ, ನಮ್ಮ (ಸಮಿತಿ) ಜೊತೆಯೂ ಆಟವಾಡುವಂತೆ ಕೇಳಿದಂತಿದೆ. ದೆಹಲಿ ಗಲಭೆಯ ತನಿಖಾಧಿಕಾರಿಯು ಅಜಿತ್‌ ಅವರನ್ನು ಪ್ರಮಾಣ ಮಾಡುವಂತೆ ಒತ್ತಾಯಿಸಲಾಗದು,” ಎಂದು ಹೇಳಿದ್ದಾರೆ.

ದೆಹಲಿ ಗಲಭೆಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸೆಪ್ಟೆಂಬರ್‌ 10 ಮತ್ತು 18 ರಂದು ಸಮಿತಿ ಜಾರಿಗೊಳಿಸಿದ್ದ ನೋಟಿಸ್‌ಗಳನ್ನು ಪ್ರಶ್ನಿಸಿ ಭಾರತದ ಫೇಸ್‌ಬುಕ್‌ ಮತ್ತು ಅದರ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಿತ್‌ ಮೋಹನ್‌ ಸಲ್ಲಿಸಿರುವ ಮನವಿಗಳ ವಿಚಾರಣೆಯನ್ನು ಪೀಠ ನಡೆಸಿತು.

ಫೇಸ್‌ಬುಕ್‌ ಮುಚ್ಚಿಸುವ ಅಧಿಕಾರ ಕೇಂದ್ರದ ಮಾಹಿತಿ ತಂತ್ರಜ್ಞಾನ ಇಲಾಖೆಗೆ ಇರುವುದರಿಂದ ಹಾಗೂ ವ್ಯಾವಹಾರಿಕ ಅಗತ್ಯತೆ ಹಿನ್ನೆಲೆಯಲ್ಲಿ ಅದರ ಮುಂದೆ ಹಾಜರಾಗುವುದಾಗಿ ಸಾಳ್ವೆ ಹೇಳಿದರು. ದೆಹಲಿ ವಿಧಾನಸಭೆಗೆ ಆ ಅಧಿಕಾರ ಇಲ್ಲದೇ ಇರುವುದರಿಂದ ಅದರ ಮುಂದೆ ಹಾಜರಾಗದೇ ಇರುವ ನಿರ್ಧಾರವನ್ನು ಫೇಸ್‌ಬುಕ್‌ ಕೈಗೊಂಡಿದೆ ಎಂದರು.

“ಸಮಿತಿಯ ವಿಚಾರಣೆಯು ಯಾಕೆ ಅದನ್ನು ಫೇಸ್‌ಬುಕ್‌ನಿಂದ ತೆಗೆದುಹಾಕಲಿಲ್ಲ ಎಂಬ ಹಂತಕ್ಕೆ ಬರಲಿದೆ. ದೆಹಲಿ ಗಲಭೆ ನಡೆಯುವ ದಿನ ಏನು ಮಾಡುತ್ತಿದ್ದಿರಿ ಎಂದು ಕೇಳಿದಷ್ಟು ಅದು ಸುಲಭವಲ್ಲ. ಯಾವುದು ಸಮ್ಮತಿ ಭಾಷೆ ಮತ್ತು ಯಾವುದು ದ್ವೇಷ ಭಾಷೆ ಎಂಬ ಹಂತಕ್ಕೆ ಶೀಘ್ರದಲ್ಲಿ ತನಿಖೆ ಬರಲಿದೆ. ಇದು ಅತ್ಯಂತ ಧ್ರುವೀಕರಣದ ಹಂತ. ನನ್ನ ಮೌನದ ಹಕ್ಕು ಇದನ್ನು ರಕ್ಷಿಸುತ್ತದೆ” ಎಂದು ಸಾಳ್ವೆ ವಾದಿಸಿದ್ದಾರೆ.

ಹಕ್ಕುಬಾಧ್ಯತೆಯನ್ನು ಉಲ್ಲೇಖಿಸಿ ವ್ಯಕ್ತಿಯೊಬ್ಬರಿಗೆ ಹಾಜರಾಗುವಂತೆ ಸೂಚಿಸುವ ಸೀಮಿತಿ ಅಧಿಕಾರ ವಿಧಾನಸಭೆಗೆ ಇದೆಯೇ ವಿನಾ ವಿಧಾನಸಭೆ ರಚಿಸಿದ ಸಮಿತಿಗೆ ಇಲ್ಲ ಎಂದು ತಗಾದೆ ಎತ್ತಿದ್ದಾರೆ.

ಸಮಿತಿಯ ಮುಂದೆ ಹಾಜರಾಗದಿದ್ದರೆ ಅದು ಹಕ್ಕು ಬಾಧ್ಯತೆ ಉಲ್ಲಂಘಿಸಿದಂತಾಗುತ್ತದೆ ಎಂಬ ಸಮಿತಿಯ ವಾದಕ್ಕೆ ತಗಾದೆ ಎತ್ತಿರುವ ಸಾಳ್ವೆ ಅವರು “ಹಕ್ಕುಬಾಧ್ಯತೆ ಎಂಬುದು ಪ್ರಾಥಮಿಕವಾಗಿ ರಕ್ಷಾ ಕವಚವಾಗಿದ್ದು, ಸದನ ನಡೆಸಲು ಅದು ಅನುಕೂಲ ಮಾಡುತ್ತದೆ. ಸಂಸತ್‌ಗೆ ಶಾಸಕಾಂಗ ಮತ್ತು ಕಾರ್ಯಾಂಗ ಎಂಬ ಎರಡು ವಿಸ್ತೃತವಾದ ಕಾರ್ಯಗಳಿವೆ. ಕಾರ್ಯಾಂಗವನ್ನು ನಿಯಂತ್ರಣದಲ್ಲಿಟ್ಟುಕೊಂಡು ಕಾನೂನು ರೂಪಿಸಲಾಗುತ್ತದೆ,” ಎಂದಿದ್ದಾರೆ.

ವಾದವನ್ನು ಮತ್ತಷ್ಟು ಸಂಕ್ತಿಪ್ತಗೊಳಿಸುವ ಉದ್ದೇಶದಿಂದ ನ್ಯಾಯಮೂರ್ತಿ ರಾಯ್‌ ಅವರು ಸಾಳ್ವೆ ಅವರಿಗೆ “ವಿಧಾನಸಭೆ ಸಮನ್ಸ್‌ ನೀಡಿದಾಗ ಮಾತ್ರ ಹಕ್ಕುಬಾಧ್ಯತೆಯನ್ನು ರಕ್ಷಾಕವಚವನ್ನಾಗಿಸಹುದು ಎಂದು ನೀವು ಹೇಳುತ್ತಿದ್ದೀರಿ. ಇಲ್ಲಿ ಸಮಿತಿಯು ಸಮನ್ಸ್‌ ನೀಡಿರುವುದರಿಂದ ಹಕ್ಕುಬಾಧ್ಯತೆ ಅನ್ವಯಿಸುವುದಿಲ್ಲವೇ?” ಎಂದು ಪ್ರಶ್ನಿಸಿದರು.

ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಸಾಳ್ವೆ ಸಮಿತಿಯ ತನಿಖೆಯು ದೆಹಲಿ ವಿಧಾನಸಭೆಯ ಶಾಸಕಾಂಗ ಮತ್ತು ಕಾರ್ಯಾಂಗದ ಅಧಿಕಾರಗಳನ್ನು ಮೀರಿದೆ ಎಂದರು. ಇಂತಹ ತನಿಖೆಯನ್ನು ನಡೆಸುವುದು ಶಾಸಕಾಂಗಕ್ಕೆ ಅಪರಿಚಿತವಾದದ್ದು ಎಂದರು. ಜನವರಿ 27ಕ್ಕೆ ವಿಚಾರಣೆ ಮುಂದೂಡಲಾಗಿದ್ದು, ಸಾಳ್ವೆ ವಾದ ಪೂರ್ಣಗೊಂಡ ಬಳಿಕ ಹಿರಿಯ ವಕೀಲ ಅರವಿಂದ್‌ ದಾತಾರ್‌ ಅವರು ಫೇಸ್‌ಬುಕ್‌ ಇಂಕ್‌ ಪರ ವಾದಿಸಲಿದ್ದಾರೆ.