ಸುದ್ದಿಗಳು

ಎಸ್‌ಸಿ, ಎಸ್‌ಟಿ ಆಯೋಗಕ್ಕೆ ಶೀಘ್ರ ಅಧ್ಯಕ್ಷರ ನೇಮಕಕ್ಕೆ ಕೋರಿಕೆ: ರಾಜ್ಯ ಸರ್ಕಾರಕ್ಕೆ ನೋಟಿಸ್‌ ನೀಡಿದ ಹೈಕೋರ್ಟ್‌

ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ 2002ರ ಕಾಯಿದೆ ಅಡಿ ಆಯೋಗ ರಚಿಸಲಾಗಿದ್ದು, ಅದಕ್ಕೆ ಎರಡೂವರೆ ವರ್ಷಗಳಿಂದ ಅಧ್ಯಕ್ಷರ ನೇಮಕವಾಗಿಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.

Bar & Bench

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗಕ್ಕೆ ತುರ್ತಾಗಿ ಅಧ್ಯಕ್ಷರನ್ನು ನೇಮಕ ಮಾಡಬೇಕು ಎಂದು ಕೋರಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಸೋಮವಾರ ಕರ್ನಾಟಕ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗಕ್ಕೆ ಕಳೆದ ಎರಡೂವರೆ ವರ್ಷಗಳಿಂದ ಅಧ್ಯಕ್ಷರನ್ನು ನೇಮಕ ಮಾಡಿಲ್ಲ. ಇದರಿಂದ ಲಕ್ಷಾಂತರ ಪ್ರಕರಣಗಳು ಬಾಕಿ ಉಳಿದೆ. ಈ ನೆಲೆಯಲ್ಲಿ ತಕ್ಷಣ ಅಧ್ಯಕ್ಷರ ನೇಮಕ ಮಾಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ ಐ ಅರುಣ್‌ ಅವರ ವಿಭಾಗೀಯ ಪೀಠ ನಡೆಸಿತು.

ಅರ್ಜಿದಾರರ ಪರ ವಕೀಲ ಸದಾನಂದ ಶಾಸ್ತ್ರಿ ಅವರು “ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ 2002ರ ಕಾಯಿದೆ ಅಡಿ ಆಯೋಗ ರಚಿಸಲಾಗಿದ್ದು, ಅದಕ್ಕೆ ಎರಡೂವರೆ ವರ್ಷಗಳಿಂದ ಅಧ್ಯಕ್ಷರ ನೇಮಕವಾಗಿಲ್ಲ. ಇಲ್ಲಿ ಲಕ್ಷಕ್ಕೂ ಅಧಿಕ ಪ್ರಕರಣಗಳು ಬಾಕಿ ಇದ್ದು, ತುಳಿತಕ್ಕೆ ಒಳಗಾದ ಸಮುದಾಯಗಳ ಜನರಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ, ತುರ್ತಾಗಿ ಅಧ್ಯಕ್ಷರ ನೇಮಕ ಮಾಡಬೇಕು” ಎಂದು ಕೋರಿದರು.

ಇದನ್ನು ಆಲಿಸಿ ಪೀಠವು ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿ, ವಿಚಾರಣೆಯನ್ನು ಫೆಬ್ರವರಿ 17ಕ್ಕೆ ಮುಂದೂಡಿತು.