High Court of Karnataka 
ಸುದ್ದಿಗಳು

ಅಭಿಯೋಗ ಇಲಾಖೆಗೆ ಪ್ರಭಾರ ನಿರ್ದೇಶಕರ ನೇಮಕಾತಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್

ಅಭಿಯೋಗ ಇಲಾಖೆಯ ನಿರ್ದೇಶಕ ಹುದ್ದೆಯಿಂದ 2019ರ ಜುಲೈ 31ರಂದು ಎಸ್ ಎಂ ಹಿರೇಮಣಿ ನಿವೃತ್ತರಾಗಿದ್ದರು. ಅಂದಿನಿಂದ ಎಚ್ ಕೆ ಜಗದೀಶ್ ನೇಮಕಾತಿ ಅವಧಿ ವಿಸ್ತರಿಸಿಕೊಂಡು ಬರಲಾಗಿದೆ ಎಂಬುದು ಆಕ್ಷೇಪ.

Bar & Bench

ರಾಜ್ಯ ಅಭಿಯೋಗ ಇಲಾಖೆ ಪ್ರಭಾರ ನಿರ್ದೇಶಕರನ್ನಾಗಿ ಎಚ್ ಕೆ ಜಗದೀಶ್ ಅವರನ್ನು ಮುಂದುವರಿಸಿರುವ ಕ್ರಮ ಆಕ್ಷೇಪಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಸೋಮವಾರ ನೋಟಿಸ್ ಜಾರಿ ಮಾಡಿದೆ.

ಬೆಂಗಳೂರಿನ ವಕೀಲೆ ಸುಧಾ ಕಟ್ವಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ ಜಿ ಎಸ್‌ ಕಮಲ್‌ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಅಭಿಯೋಗ ಇಲಾಖೆಯ ನಿರ್ದೇಶಕ ಹುದ್ದೆಯಿಂದ ಎಸ್ ಎಂ ಹಿರೇಮಣಿ ಅವರು 2019ರ ಜುಲೈ 31ರಂದು ನಿವೃತ್ತರಾಗಿದ್ದರು. ಆ ಸ್ಥಾನಕ್ಕೆ 2019ರ ಆಗಸ್ಟ್‌ 5ರಂದು ಎಚ್ ಕೆ ಜಗದೀಶ್ ಅವರನ್ನು ಆರು ತಿಂಗಳ ಅವಧಿಗೆ ಪ್ರಭಾರ ನಿರ್ದೇಶಕರಾಗಿ ನೇಮಿಸಲಾಗಿತ್ತು. ತದನಂತರ ಕಾಲಕಾಲಕ್ಕೆ ಅವರ ನೇಮಕಾತಿ ಅವಧಿ ವಿಸ್ತರಿಸಿಕೊಂಡು ಬರಲಾಗಿದೆ.

ಅದನ್ನು ಪ್ರಶ್ನಿಸಿರುವ ಅರ್ಜಿದಾರರು, ಅಭಿಯೋಗ ಇಲಾಖೆ ನಿರ್ದೇಶಕರನ್ನು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ-1973ರ ಮತ್ತು ವೃಂದ ಮತ್ತು ನೇಮಕಾತಿ ನಿಯಮಗಳ ಅನುಸಾರವೇ ನೇಮಿಸಬೇಕಿದೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರ ಸಹಮತದೊಂದಿಗೆ ನೇಮಕಾತಿ ಪ್ರಕ್ರಿಯೆ ನಡೆಸಬೇಕು ಎಂದು ಆಕ್ಷೇಪಿಸಿದ್ದರು. ವಕೀಲರಾಗಿ 10 ವರ್ಷದ ಕಾರ್ಯ ನಿರ್ವಹಿಸಿದವರು ಈ ಹುದ್ದೆ ನೇಮಕಾತಿಗೆ ಪರಿಗಣಿಸಲ್ಪಡುತ್ತಾರೆ ಎಂದು ಅರ್ಜಿಯಲ್ಲಿ ವಿವರಿಸಿದ್ದರು.

ಆದರೆ, ಆಡಳಿತ ಪಕ್ಷದೊಂದಿಗೆ ಸಂಪರ್ಕ ಹೊಂದಿರುವ ಕಾರಣಕ್ಕೆ ಎಚ್ ಕೆ ಜಗದೀಶ್ ಅವರನ್ನು ಅಭಿಯೋಗ ಇಲಾಖೆ ನಿರ್ದೇಶಕರ ಹುದ್ದೆಗೆ ಹಿಂದಿನ ಸರ್ಕಾರ ನೇಮಿಸಿತ್ತು. ಜಗದೀಶ್ ಅವರು ರಾಜ್ಯ ಸಹಾಯಕ ಸರ್ಕಾರಿ ಅಭಿಯೋಜಕ ಅಥವಾ ಉಪ ಸರ್ಕಾರಿ ಅಭಿಯೋಜಕರಾಗಿ ಕಾರ್ಯ ನಿರ್ವಹಿಸಿಲ್ಲ. ಪ್ರಭಾರ ನಿರ್ದೇಶಕರನ್ನೇ ಮುಂದುವರಿಸಿಕೊಂಡು ಬರಲಾಗುತ್ತಿದೆಯೇ ಹೊರತು ಕಾಯಂ ನಿರ್ದೇಶಕರನ್ನು ನೇಮಿಸಿಲ್ಲ. 2023ರ ಫೆಬ್ರವರಿ 27ರಂದು ಕಾನೂನು ಪ್ರಕಾರ ಹೊಸದಾಗಿ ನೇಮಕಾತಿ ನಡೆಸುವಂತೆ ಅರ್ಜಿದಾರರು ಸಲ್ಲಿಸಿದ ಮನವಿ ಪತ್ರಕ್ಕೆ ಸರ್ಕಾರ ಸ್ಪಂದಿಸಿಲ್ಲ. ಆದ್ದರಿಂದ, ಎಚ್ ಕೆ ಜಗದೀಶ್ ಅವರನ್ನು ಅಭಿಯೋಗ ಇಲಾಖೆ ಪ್ರಭಾರ ನಿರ್ದೇಶಕರ ಹುದ್ದೆಯಿಂದ ವಜಾಗೊಳಿಸಬೇಕು ಅಥವಾ ಅವರ ವಿರುದ್ಧ ಸೂಕ್ತ ಆದೇಶ ಹೊರಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಅರ್ಜಿದಾರರ ಪರ ವಕೀಲ ಎಸ್ ಉಮಾಪತಿ ವಾದಿಸಿದರು.