Lokayukta and Karnataka HC
Lokayukta and Karnataka HC 
ಸುದ್ದಿಗಳು

ಉಪಲೋಕಾಯುಕ್ತರ ನೇಮಕಾತಿ ಕುರಿತ ಮಾಹಿತಿ ಕೋರಿಕೆ: ʼಆಂತರಿಕ ಕಚೇರಿಯ ಸಂವಹನ ಗೌಪ್ಯʼ ಎಂದು ಅರ್ಜಿ ವಜಾ; ಆದೇಶ ಕಾಯಂ

Siddesh M S

ಲೋಕಾಯುಕ್ತದಲ್ಲಿ ಖಾಲಿ ಇರುವ ಉಪಲೋಕಾಯುಕ್ತರ ನೇಮಕಾತಿಗೆ ಸಂಬಂಧಿಸಿದಂತೆ ಆಂತರಿಕ ಕಚೇರಿ ಸಂವಹನಗಳು ಗೌಪ್ಯವಾಗಿರುವುದರಿಂದ ಅವುಗಳನ್ನು ಬಹಿರಂಗಪಡಿಸಲಾಗದು ಎಂದು ಎಂದು ಉತ್ತರಿಸಿದ್ದ ಹೈಕೋರ್ಟ್‌ನ ಸಾರ್ವಜನಿಕ ಮಾಹಿತಿ ಅಧಿಕಾರಿ (ಎಸ್‌ಪಿಐಒ) ಆದೇಶವನ್ನು ಕರ್ನಾಟಕ ಹೈಕೋರ್ಟ್‌ನ ಮೇಲ್ಮನವಿ ಪ್ರಾಧಿಕಾರವೂ ಆದ ನ್ಯಾಯಾಂಗ ರಿಜಿಸ್ಟ್ರಾರ್‌ ಈಚೆಗೆ ಎತ್ತಿ ಹಿಡಿದಿದ್ದಾರೆ.

ಮಾಹಿತಿ ಹಕ್ಕು ಕಾಯಿದೆ (ಆರ್‌ಟಿಐ) ಅಡಿ ವಿವಿಧ ಮಾಹಿತಿ ಕೋರಿ ವಕೀಲ ಎಸ್‌ ಉಮಾಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಾಂಗ ರಿಜಿಸ್ಟ್ರಾರ್‌ ಹಾಗೂ ಮೇಲ್ಮನವಿ ಪ್ರಾಧಿಕಾರದ ಮುಖ್ಯಸ್ಥರಾದ ನ್ಯಾ. ಎಂ ಚಂದ್ರಶೇಖರ್‌ ರೆಡ್ಡಿ ಅವರು ವಜಾ ಮಾಡಿದ್ದಾರೆ.

“ಆರ್‌ಟಿಐ ಕಾಯಿದೆ ಸೆಕ್ಷನ್‌ 8(1)(ಇ), (ಐ) ಮತ್ತು (ಜೆ) ಅಡಿ ಗೌಪ್ಯ ಮಾಹಿತಿ ನೀಡದಿರಲು ವಿನಾಯಿತಿ ಇದೆ ಎಂದು ಮಾಹಿತಿ ನಿರಾಕರಿಸಿರುವ ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿ ಅವರ ವಾದವನ್ನುಎತ್ತಿ ಹಿಡಿಯಬೇಕಿದೆ. ಅರ್ಜಿದಾರರು ಕೋರಿರುವ ಮಾಹಿತಿಯು ಆಂತರಿಕ ಕಚೇರಿ ಸಂಹನವಾಗಿದೆ. ಇದನ್ನು ನೀಡದಿರಲು ವಿನಾಯಿತಿ ಇದೆ. ಇಂಥದ್ದೇ ಪ್ರಶ್ನೆ ಎದುರಾಗ ರಿಜಿಸ್ಟ್ರಾರ್‌ ಜನರಲ್‌ ವರ್ಸಸ್‌ ಆರ್‌ ಎಂ ಸುಬ್ರಮಣಿಯಮ್‌ ಪ್ರಕರಣದಲ್ಲಿ ಮದ್ರಾಸ್‌ ಹೈಕೋರ್ಟ್‌ ಆರ್‌ಟಿಐ ಅರ್ಜಿ ವಜಾ ಮಾಡಿತ್ತು” ಎಂದು ಆದೇಶದಲ್ಲಿ ವಿವರಿಸಲಾಗಿದೆ.

“ಆರ್‌ಟಿಐ ಕಾಯಿದೆ ಸೆಕ್ಷನ್‌ 11ರ ಅಡಿ ಮೇಲ್ಮನವಿದಾರರು ಮೂರನೇ ವ್ಯಕ್ತಿಯಾಗಿದ್ದು, ದಾಖಲೆಗಳನ್ನು ಗೌಪ್ಯ ಎಂದು ಪರಿಗಣಿಸಲಾಗಿದೆ. ಹೀಗಾಗಿ, ಎಸ್‌ಪಿಐಒ ತೆಗೆದುಕೊಂಡಿರುವ ನಿಲುವು ತಪ್ಪು ಅಥವಾ ಕಾನೂನುಬಾಹಿರವಲ್ಲ. ಆದ್ದರಿಂದ, ಮೇಲ್ಮನವಿಯ ವಿಚಾರದಲ್ಲಿ ಮಧ್ಯಪ್ರವೇಶದ ಅಗತ್ಯವಿಲ್ಲ” ಎಂದು ಆರ್‌ಟಿಐ ಕಾಯಿದೆ ಸೆಕ್ಷನ್‌ 19(1)ರ ಅಡಿ ಸಲ್ಲಿಸಿದ್ದ ಅರ್ಜಿಯನ್ನು ಪ್ರಾಧಿಕಾರವು ವಜಾ ಮಾಡಿದೆ.

ಮೇಲ್ಮನವಿದಾರ ವಕೀಲ ಉಮಾಪತಿ ಅವರು “ಖಾಲಿ ಇರುವ ಉಪ ಲೋಕಾಯುಕ್ತ ಹುದ್ದೆಯು ಸಂಪೂರ್ಣವಾಗಿ ಸಾರ್ವಜನಿಕ ಚಟುವಟಿಕೆಯ ಹುದ್ದೆಯಾಗಿದ್ದು, ಇದರಲ್ಲಿ ಯಾವುದೇ ವೈಯಕ್ತಿಕ ಅಥವಾ ಗೌಪ್ಯ ಮಾಹಿತಿ ಸೇರಿಲ್ಲ. ಅಂಥ ಮಾಹಿತಿ ಬಹಿರಂಗಪಡಿಸುವುದರಿಂದ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚುತ್ತದೆ. ವಿವಿಧ ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ವಿಚಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸರ್ವೋಚ್ಚ ನ್ಯಾಯಾಲಯವು ಕೊಲಿಜಿಯಂ ಶಿಫಾರಸ್ಸುಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತಿದೆ. ಹೀಗಾಗಿ, ಅಗತ್ಯ ಮಾಹಿತಿಯನ್ನು ಎಸ್‌ಪಿಐಒ ವಾದ ಆಧರಿಸಿ ತಡೆಹಿಡಿಯಬಾರದು” ಎಂದು ಸಮರ್ಥಿಸಿದ್ದರು.

ಪ್ರಕರಣದ ಹಿನ್ನೆಲೆ: ಉಪ ಲೋಕಾಯುಕ್ತರ ನೇಮಕಾತಿಗೆ ಸಂಬಂಧಿಸಿದಂತೆ ಪ್ರಮಾಣೀಕೃತ ದಾಖಲೆಗಳು, ಮಾಹಿತಿ, ಫೈಲ್‌ ನೋಟಿಂಗ್ಸ್‌, ಸಂವಹನ, ಸಮಾಲೋಚನೆಗೆ ಸಂಬಂಧಿಸಿದ ಮತ್ತು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅವರ ಒಪ್ಪಿಗೆ ಕೋರಿ ಸರ್ಕಾರ ಬರೆದಿರುವ ಪತ್ರದ ಮಾಹಿತಿ ಕೋರಿ ವಕೀಲ ಉಮಾಪತಿ ಅವರು ಮಾರ್ಚ್‌ 14ರಂದು ಹೈಕೋರ್ಟ್‌ನ ಉಪ ರಿಜಿಸ್ಟ್ರಾರ್‌ ಮತ್ತು ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಅರ್ಜಿ ಸಲ್ಲಿಸಿದ್ದರು.

ಹಲವು ತಿಂಗಳಿಂದ ಉಪಲೋಕಾಯುಕ್ತ ಹುದ್ದೆ ಖಾಲಿ ಇದ್ದು, ಈ ಸಂಬಂಧ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೂ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದೆ. ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಿರುವುದರಿಂದ ಮತ್ತು ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಆದಷ್ಟು ಬೇಗ ಮಾಹಿತಿ ನೀಡುವಂತೆ ಕೋರಿದ್ದರು.

ಇದಕ್ಕೆ ಮಾರ್ಚ್‌ 28ರಂದು ಹೈಕೋರ್ಟ್‌ನ ಜಂಟಿ ರಿಜಿಸ್ಟ್ರಾರ್‌ ಹಾಗೂ ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿ ಬಿ ವಿ ರೇಣುಕಮ್ಮ ಅವರು “ತಾವು ಕೋರಿರುವ ಪ್ರಮಾಣೀಕೃತ ದಾಖಲೆಗಳು ಗೌಪ್ಯವಾಗಿದ್ದು, ಆಂತರಿಕ ಸಂವಹನದ ಕಾಪಿಗಳನ್ನು ಆರ್‌ಟಿಐ ಕಾಯಿದೆ ಸೆಕ್ಷನ್‌ 8(1)(ಇ), (ಐ) ಮತ್ತು (ಜೆ) ಅಡಿ ಒದಗಿಸಲಾಗದು” ಎಂದು ಪ್ರತ್ಯುತ್ತರ ನೀಡಿದ್ದರು. ಇದನ್ನು ಉಮಾಪತಿ ಅವರು ಮೇಲ್ಮನವಿ ಪ್ರಾಧಿಕಾರದಲ್ಲಿ ಪ್ರಶ್ನಿಸಿದ್ದರು. ಈಗ ಅದೂ ವಜಾಗೊಂಡಿದೆ.

Umapathi S Vs State Public Information Officer.pdf
Preview